ADVERTISEMENT

ಶಿರಸಿ: ವಿದ್ಯಾರ್ಥಿಗಳಿಗಾಗಿ ತೋಟಗಾರಿಕೆ ಯೋಜನೆ ಅನುಷ್ಠಾನ

100 ವಿದ್ಯಾರ್ಥಿಗಳ ತಲಾ 15 ತಂಡಗಳಿಗೆ ತರಬೇತಿ ನೀಡಲು ನಿರ್ಧಾರ

ರಾಜೇಂದ್ರ ಹೆಗಡೆ
Published 15 ಜೂನ್ 2024, 5:43 IST
Last Updated 15 ಜೂನ್ 2024, 5:43 IST
ತೋಟಗಾರಿಕಾ ಇಲಾಖೆಯ ಶಿರಸಿ ಕಚೇರಿ 
ತೋಟಗಾರಿಕಾ ಇಲಾಖೆಯ ಶಿರಸಿ ಕಚೇರಿ    

ಶಿರಸಿ: ತೋಟಗಾರಿಕೆ ಹಾಗೂ ಕೃಷಿ ಕ್ಷೇತ್ರದ ಬಗ್ಗೆ ಅವಗಣನೆ ಹೆಚ್ಚುತ್ತಿರುವ ಕಾಲಘಟ್ಟದಲ್ಲಿ ಮಕ್ಕಳಿಗೆ ಎಳವೆಯಲ್ಲಿಯೇ ಕೃಷಿಯೆಡೆ ಆಸಕ್ತಿ ತುಂಬುವ ಉದ್ದೇಶದಿಂದ ತೋಟಗಾರಿಕಾ ಇಲಾಖೆ ಉತ್ತರ ಕನ್ನಡ ಜಿಲ್ಲೆಯಲ್ಲಿ 'ವಿದ್ಯಾರ್ಥಿಗಳಿಗಾಗಿ ತೋಟಗಾರಿಕೆ' ಯೋಜನೆ  ಅನುಷ್ಠಾನಕ್ಕೆ ಮುಂದಡಿಯಿಟ್ಟಿದೆ. 

ತೋಟಗಾರಿಕೆಯಲ್ಲಿ ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳಲು ಅನೇಕ ಅವಕಾಶಗಳಿವೆ.  ಪ್ರೌಢಶಾಲೆಯ ಮಕ್ಕಳಿಗೆ ಈ ನಿಟ್ಟಿನಲ್ಲಿ ಸೂಕ್ತ ವಿಷಯಾಧಾರಿತ ತರಬೇತಿ ನೀಡುವ ಮೂಲಕ ಆಸಕ್ತ ಮಕ್ಕಳು ತೋಟಗಾರಿಕೆ ಕ್ಷೇತ್ರದಲ್ಲಿಯೇ ಮುಂದುವರೆಯಲು ಪ್ರೇರೇಪಣೆ ನೀಡಲು ರಾಜ್ಯ ಸರ್ಕಾರ 2023-24ನೇ ಸಾಲಿನಲ್ಲಿ ರಾಜ್ಯದ 11 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ  ಅನುಷ್ಠಾನಗೊಳಿಸಿದ್ದ ‘ವಿದ್ಯಾರ್ಥಿಗಳಿಗಾಗಿ ತೋಟಗಾರಿಕೆ’ ಯೋಜನೆಯನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ ಜಾರಿಗೊಳಿಸಲಾಗುತ್ತಿದೆ. ಆಸಕ್ತ 1500 ವಿದ್ಯಾರ್ಥಿಗಳಿಗೆ ಯೋಜನೆಯಡಿ ತರಬೇತಿ ಜತೆ, ತರಕಾರಿ ಬೀಜಗಳ ಕಿಟ್ ಸೇರಿ ₹250 ಮೌಲ್ಯದ ಕೃಷಿ ಉಪಕರಣ ನೀಡಲಾಗುತ್ತದೆ. 

ಯೋಜನೆಯಡಿ ಪ್ರೌಢಶಾಲಾ ವಿದ್ಯಾರ್ಥಿಗಳಲಿ ತೋಟಗಾರಿಕೆಯ ಪ್ರಾಮುಖ್ಯತೆ, ಪೌಷ್ಟಿಕಾಂಶ ಮಟ್ಟ ಹೆಚ್ಚಿಸುವಲ್ಲಿ ತೋಟಗಾರಿಕೆ ಬೆಳೆಗಳ ಪಾತ್ರ ಮತ್ತು ವಿವಿಧ ತೋಟಗಾರಿಕೆ ಕೌಶಲಗಳ ಬಗ್ಗೆ, ಪ್ರಾಯೋಗಿಕ ತರಬೇತಿಯ ಮುಖಾಂತರ ಅರಿವು ಮೂಡಿಸುವ ಕಾರ್ಯವಾಗಲಿದೆ. 100 ವಿದ್ಯಾರ್ಥಿಗಳ ತಲಾ 15 ತಂಡಗಳಿಗೆ ತರಬೇತಿ ನೀಡಲು ನಿರ್ಧರಿಸಲಾಗಿದೆ. 

ADVERTISEMENT

‘ತೋಟಗಾರಿಕೆ ಬೆಳೆಗಳ ಸಸ್ಯಾಭಿವೃದ್ಧಿ ವಿಧಾನ, ಸಸಿ ಮಡಿ ಮಾಡುವ ವಿಧಾನ, ಮಣ್ಣಿನ ಫಲವತ್ತತೆ ಬಗ್ಗೆ ಅರಿವು ಮೂಡಿಸುವುದು, ಹೈಡೋಪೋನಿಕ್ಸ್ ಕುರಿತು ಮಾಹಿತಿ, ಎರೆಹುಳು ಗೊಬ್ಬರ ಹಾಗೂ ಸುಧಾರಿತ ಕಾಂಪೋಸ್ಟ್ ತಯಾರಿಕಾ ವಿಧಾನಗಳ ಪ್ರಾತ್ಯಕ್ಷಿಕೆ, ವೈಜ್ಞಾನಿಕ ಜೇನು ಕೃಷಿ ಪದ್ಧತಿ ಮತ್ತು ಅಣಬೆ ಉತ್ಪಾದನಾ ವಿಧಾನಗಳ ಬಗ್ಗೆ ತಿಳಿಸುವುದು, ಪೌಷ್ಟಿಕಾಂಶ ಕೈ ತೋಟ, ತಾರಸಿ ತೋಟ, ತೋಟಗಾರಿಕೆ ಬೆಳೆಗಳಲ್ಲಿ ಅನುಸರಿಸುವ ವಿಶೇಷ ಕಾರ್ಯಚರಣೆಗಳ ಬಗ್ಗೆ ಯೋಜನೆಯಡಿ ತರಬೇತಿ ನೀಡಲಾಗುತ್ತದೆ. ಯೋಜನೆಗೆ ಅಗತ್ಯ ಅನುದಾನ ಈಗಾಗಲೇ ಬಿಡುಗಡೆಯಾಗಿದೆ’ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಅಧಿಕಾರಿಗಳು.

ಯೋಜನೆ ಅನುಷ್ಠಾನಕ್ಕೆ ಅವಕಾಶವಿರುವ ತಾಲ್ಲೂಕಿನ  ಶಾಲೆಗಳನ್ನು ಗುರುತಿಸಿ ತೋಟಗಾರಿಕಾ ಇಲಾಖೆಗೆ ನೀಡಲಾಗುವುದು
-ನಾಗರಾಜ ನಾಯ್ಕ ಬಿಇಒ ಶಿರಸಿ
ಕಾರ್ಯಕ್ರಮಕ್ಕೆ ಅವಶ್ಯವಿರುವ ಪರಿಕರಗಳನ್ನು ಆದ್ಯತೆ ಮೇರೆಗೆ ಇಲಾಖೆಯ ಸಂಪನ್ಮೂಲ ಕೇಂದ್ರಗಳಾದ ತೋಟಗಾರಿಕೆ ಕ್ಷೇತ್ರ ಮತ್ತು ಸಸ್ಯಾಗಾರಗಳು ಜೈವಿಕ ಕೇಂದ್ರಗಳು ಉತ್ಕೃಷ್ಟ ಕೇಂದ್ರಗಳಿಂದ ಹಾಗೂ ಬೀಜದ ಕಿಟ್ ಪರಿಕರಗಳನ್ನು ನೀಡಲಾಗುವುದು
-ಸತೀಶ ಹೆಗಡೆ ತೋಟಗಾರಿಕಾ ಇಲಾಖೆ ಅಧಿಕಾರಿ ಶಿರಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.