ADVERTISEMENT

ಸಾಮಾಜಿಕ ಭದ್ರತಾ ಯೋಜನೆ ಜಾರಿ: ಉತ್ತರ ಕನ್ನಡ ಜಿಲ್ಲೆಗೆ ಅಗ್ರ ಸ್ಥಾನ

ಗಣಪತಿ ಹೆಗಡೆ
Published 14 ನವೆಂಬರ್ 2024, 5:19 IST
Last Updated 14 ನವೆಂಬರ್ 2024, 5:19 IST
<div class="paragraphs"><p>ಪಿಂಚಣಿ</p></div>

ಪಿಂಚಣಿ

   

ಐ ಸ್ಟಾಕ್‌ ಚಿತ್ರ

ಕಾರವಾರ: ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳು ಜಾರಿಯಾದ ಬೆನ್ನಲ್ಲೆ ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿ ಹಣ ಪಾವತಿ ಸ್ಥಗಿತಗೊಳ್ಳಬಹುದು ಎಂಬ ಆತಂಕದಲ್ಲಿದ್ದ ಜಿಲ್ಲೆ ಸಾವಿರಾರು ಕುಟುಂಬಗಳು ಪ್ರತಿ ತಿಂಗಳು ಅಡ್ಡಿ ಇಲ್ಲದೆ ಹಣ ಪಡೆಯುತ್ತಿವೆ. ರಾಜ್ಯದಲ್ಲೇ ನೂರು ಪ್ರತಿಶತ ಫಲಾನುಭವಿಗಳಿಗೆ ಮಾಸಿಕ ಕಂತಿನ ಹಣ ಪಾವತಿಸುತ್ತಿರುವುದರಲ್ಲಿ ಉತ್ತರ ಕನ್ನಡ ಜಿಲ್ಲೆ ಮೊದಲ ಸ್ಥಾನದಲ್ಲಿದೆ.

ADVERTISEMENT

‘ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನ ಸೇರಿದಂತೆ ವಿವಿಧ ಸಾಮಾಜಿಕ ಭದ್ರತೆ ಯೋಜನೆಗಳ ಅಡಿಯಲ್ಲಿ 1,61,946 ಫಲಾನುಭವಿಗಳು ಮಾಸಿಕ ಪಿಂಚಣಿ ಮೊತ್ತ ಪಡೆಯುತ್ತಿದ್ದಾರೆ. ಈ ಎಲ್ಲ ಫಲಾನುಭವಿಗಳ ಬ್ಯಾಂಕ್ ಖಾತೆ ಅಥವಾ ಅಂಚೆ ಖಾತೆಯು ಆಧಾರ್ ಕಾರ್ಡ್ ಲಿಂಕ್ ಹೊಂದಿದೆ. ಯೋಜನೆಗೆ ಆಯ್ಕೆಯಾದ ಫಲಾನುಭವಿಗಳೆಲ್ಲರಿಗೂ ಪಿಂಚಣಿ ದೊರೆಯುತ್ತಿರುವ ಏಕೈಕ ಜಿಲ್ಲೆ ಉತ್ತರ ಕನ್ನಡ’ ಎನ್ನುತ್ತಾರೆ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು.

‘ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿ ಪಡೆಯಲು ಆಧಾರ್ ಲಿಂಕ್, ಚಾಲನೆಯಲ್ಲಿಲ್ಲದ ಖಾತೆ, ಹೀಗೆ ನಾನಾ ಕಾರಣಗಳಿಂದ ಪಿಂಚಣಿದಾರರ ಖಾತೆಗೆ ಹಣ ಪಾವತಿಗೆ ಸಮಸ್ಯೆಯಾಗುತ್ತಿದೆ. ಜಿಲ್ಲೆಯಲ್ಲಿ ಇಂತಹ ಸಮಸ್ಯೆಗಳನ್ನು ಪರಿಹರಿಸಲಾಗಿದ್ದು, ಪಿಂಚಣಿದಾರರ ಖಾತೆಗೆ ಹಣ ಪಾವತಿಗೆ ಸಮಸ್ಯೆ ಎದುರಾದ ದೂರು ಬಂದಿಲ್ಲ’ ಎನ್ನುತ್ತಾರೆ ಸಾಮಾಜಿಕ ಭದ್ರತಾ ಯೋಜನೆ ವಿಭಾಗದ ಸಹಾಯಕ ನಿರ್ದೇಶಕ ಪ್ರಶಾಂತ ಕುಮಾರ್.

‘ಪಿಂಚಣಿದಾರರ ಎಲ್ಲ ಖಾತೆಗಳನ್ನು ಭಾರತ ರಾಷ್ಟ್ರೀಯ ಪಾವತಿ ನಿಗಮದ (ಎನ್.ಪಿ.ಸಿ.ಐ) ಸೂಚನೆ ಅನ್ವಯ ಆಧಾರ್ ಸಂಖ್ಯೆಯೊಂದಿಗೆ ವಿಲೀನಗೊಳಿಸಲಾಗಿದೆ. ಪಿಂಚಣಿದಾರರ ಪೈಕಿ ಹೆಚ್ಚಿನವರು ಅಂಚೆ ಬ್ಯಾಂಕಿಂಗ್ ಖಾತೆ ಹೊಂದಿರುವುದು ಪಾವತಿಗೆ ಇನ್ನೂ ಸುಲಭವಾಗಿದೆ. ಇದರಿಂದ ಜಿಲ್ಲೆಯಲ್ಲಿ ಸಾಮಾಜಿಕ ಭದ್ರತಾ ಪಿಂಚಣಿ ಮೊತ್ತ ಸಕಾಲಕ್ಕೆ ಪಿಂಚಣಿದಾರರ ಖಾತೆಗೆ ಪಾವತಿಯಾಗುತ್ತಿದೆ’ ಎಂದು ವಿವರಿಸಿದರು.

‘ಕೆಲವು ತಿಂಗಳ ಹಿಂದೆ ಖಾತೆಗೆ ಪಿಂಚಣಿ ಮೊತ್ತ ಪಾವತಿಯಾಗದ ಬಗ್ಗೆ ಕೆಲ ದೂರುಗಳು ಬಂದಿದ್ದವು. ಅವುಗಳನ್ನು ಪರಿಶೀಲಿಸಿದ ವೇಳೆ ಎನ್‍ಪಿಸಿಐ ಮ್ಯಾಪಿಂಗ್ ಆಗಿರುವ ಫಲಾನುಭವಿಯ ಬೇರೆ ಖಾತೆಗೆ ಪಾವತಿಯಾಗಿದ್ದು ಗಮನಕ್ಕೆ ಬಂದಿತ್ತು. ಇಂತಹ ಹಲವು ಪ್ರಕರಣಗಳು ಪತ್ತೆಯಾಗಿದ್ದು, ಫಲಾನುಭವಿಗಳಿಗೆ ಮನವರಿಕೆ ಮಾಡಲಾಗಿದೆ’ ಎಂದೂ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.