ADVERTISEMENT

ಯುದ್ಧ ನೌಕೆಯಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ವಾಸ್ತವ್ಯ

‘ವಿಕ್ರಮಾದಿತ್ಯಗೆ ಭೇಟಿ ಅವಿಸ್ಮರಣೀಯ ಅನುಭವ’

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2019, 20:01 IST
Last Updated 29 ಸೆಪ್ಟೆಂಬರ್ 2019, 20:01 IST
ಐಎನ್‌ಎಸ್‌ ವಿಕ್ರಮಾದಿತ್ಯ ಯುದ್ಧ ನೌಕೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಯೋಗಾಭ್ಯಾಸ ಮಾಡಿದರು
ಐಎನ್‌ಎಸ್‌ ವಿಕ್ರಮಾದಿತ್ಯ ಯುದ್ಧ ನೌಕೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಯೋಗಾಭ್ಯಾಸ ಮಾಡಿದರು   

ಕಾರವಾರ: ಅರಬ್ಬಿ ಸಮುದ್ರದ ಮಧ್ಯಭಾಗದಲ್ಲಿದ್ದ ವಿಮಾನ ವಾಹಕ ಯುದ್ಧ ನೌಕೆ ‘ವಿಕ್ರಮಾದಿತ್ಯ’ದಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ‘ಸಾಗರದಲ್ಲಿ ಒಂದು ದಿನ’ ಅಂಗವಾಗಿ ವಾಸ್ತವ್ಯ ಹೂಡಿದರು.

ಶನಿವಾರ ಸಂಜೆ ಮುಂಬೈನಿಂದ ಹೆಲಿಕಾಪ್ಟರ್‌ ಮೂಲಕ ನೌಕೆ ಮೇಲೆ ಇಳಿದರು. ಈ ವೇಳೆ ಯುದ್ಧ ವಿಮಾನಗಳ ಕಾರ್ಯವೈಖರಿ, ‘ಸರ್ಫೇಸ್ ಶೂಟ್’ ಸೇರಿದಂತೆ ಸಾಗರದಲ್ಲಿ ನೌಕಾಪಡೆಯ ಕಾರ್ಯಾಚರಣೆಯ ಬಗ್ಗೆ ಮಾಹಿತಿ ಪಡೆದುಕೊಂಡರು.

ರಾತ್ರಿ ವಿಕ್ರಮಾದಿತ್ಯದಲ್ಲೇ ವಾಸ್ತವ್ಯ ಹೂಡಿದ್ದ ಅವರು, ಭಾನುವಾರ ಬೆಳಿಗ್ಗೆ ನೌಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಜತೆ ಯೋಗಾಭ್ಯಾಸ ಮಾಡಿದರು. ನೌಕೆಯ ಒಳಭಾಗದಲ್ಲಿ ತಿರುಗಾಡಿ, ವಿವಿಧ ಹಂತದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.

ADVERTISEMENT

‘ವಿಮಾನ ವಾಹಕ ಯುದ್ಧ ನೌಕೆ ವಿಕ್ರಮಾದಿತ್ಯಗೆ ಭೇಟಿ ನೀಡಿರುವುದು ನನ್ನ ಜೀವನದ ಅವಿಸ್ಮರಣೀಯ ಅನುಭವವಾಗಿದೆ. ಸಾಗರದಲ್ಲಿ ಒಂದು ದಿನ, ಭಾರತೀಯ ನೌಕಾಪಡೆಯ ಸಾಮರ್ಥ್ಯ ಮತ್ತು ಶಕ್ತಿಯ ಬಗ್ಗೆ ನನಗೆ ಹೊಸ ದೃಷ್ಟಿಕೋನವನ್ನು ನೀಡಿದೆ’ ಎಂದಿದ್ದಾರೆ.

‘ಪ್ರಸ್ತುತ ಐಎನ್‌ಎಸ್ ವಿಕ್ರಮಾದಿತ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿಯಕುಟುಂಬದವರಿಗೆ ವೈಯಕ್ತಿಕವಾಗಿ ಪತ್ರ ಬರೆಯುತ್ತೇನೆ.ದೇಶ ಸೇವೆ ಮಾಡಲು ಹೆಮ್ಮೆಪಡುವ ಇಂಥ ಧೈರ್ಯಶಾಲಿ ಪುರುಷರನ್ನು ಬೆಳೆಸಿದ್ದಕ್ಕಾಗಿ ಅವರಿಗೆ ಪ್ರಾಮಾಣಿಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ’ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

‘ದೇಶದ ಕರಾವಳಿ ಭಾಗದಲ್ಲಿ ಭಯೋತ್ಪಾದಕ ಕೃತ್ಯ ನಡೆಯುವ ಬೆದರಿಕೆ ಇನ್ನೂ ಇದೆ’ ಎಂದು ರಾಜನಾಥ್‌ ಸಿಂಗ್‌ ಹೇಳಿದರು. ‘ದೇಶದಲ್ಲಿ ಅಸ್ಥಿರತೆಯನ್ನುಂಟು ಮಾಡಲು ನೆರೆ ರಾಷ್ಟ್ರವೊಂದು ದುಷ್ಕೃತ್ಯಗಳಲ್ಲಿ ನಿರತವಾಗಿದೆ’ ಎಂದು ಪಾಕಿಸ್ತಾನದ ಹೆಸರು ಹೇಳದೇ ಚಾಟಿ ಬೀಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.