ADVERTISEMENT

ಕಾರ್ನಾಡರ ಪ್ರತಿ ನಾಟಕದಲ್ಲಿ ಭಿನ್ನ ರಂಗಭೂಮಿ

ವಿಮರ್ಶಕ ಡಾ.ಎಂ.ಜಿ.ಹೆಗಡೆ ಅಭಿಮತ

​ಪ್ರಜಾವಾಣಿ ವಾರ್ತೆ
Published 28 ಜುಲೈ 2019, 14:04 IST
Last Updated 28 ಜುಲೈ 2019, 14:04 IST
ಶಿರಸಿಯಲ್ಲಿ ಭಾನುವಾರ ಮುಕ್ತಾಯಗೊಂಡ ಕಾರ್ನಾಡರ ಕೃತಿಗಳೊಂದಿಗೆ ಸಮಕಾಲೀನ ಸಂವಾದದ ಸಮಾರೋಪದಲ್ಲಿ ಡಾ.ಎಂ.ಜಿ.ಹೆಗಡೆ ಮಾತನಾಡಿದರು
ಶಿರಸಿಯಲ್ಲಿ ಭಾನುವಾರ ಮುಕ್ತಾಯಗೊಂಡ ಕಾರ್ನಾಡರ ಕೃತಿಗಳೊಂದಿಗೆ ಸಮಕಾಲೀನ ಸಂವಾದದ ಸಮಾರೋಪದಲ್ಲಿ ಡಾ.ಎಂ.ಜಿ.ಹೆಗಡೆ ಮಾತನಾಡಿದರು   

ಶಿರಸಿ: ಗಿರೀಶ ಕಾರ್ನಾಡರ ಪ್ರತಿ ನಾಟಕಗಳು ಈಗಿರುವ ರಂಗಭೂಮಿಯನ್ನು ಭಂಗಿಸುತ್ತವೆ. ಅವರ ನಾಟಕಗಳನ್ನು ಆಳಲು ಸಾಧ್ಯವಿಲ್ಲ ಎಂದು ವಿಮರ್ಶಕ ಡಾ.ಎಂ.ಜಿ.ಹೆಗಡೆ ಕುಮಟಾ ಹೇಳಿದರು.

ಭಾನುವಾರ ಇಲ್ಲಿ ಮುಕ್ತಾಯಗೊಂಡ ‘ಕಾರ್ನಾಡರ ಕೃತಿಗಳೊಂದಿಗೆ ಸಮಕಾಲೀನ ಸಂವಾದ'ದ ಸಮಾರೋಪದಲ್ಲಿ ಅವರು ಮಾತನಾಡಿದರು. ಕಾರ್ನಾಡರ ಪ್ರತಿ ನಾಟಕಗಳು ಭಿನ್ನ ರಂಗಭೂಮಿಯನ್ನು ಕಲ್ಪಿಸಿಕೊಳ್ಳುತ್ತವೆ. ನಿರ್ದೇಶಕನಿಗೆ ಸಿದ್ಧ ಸೂತ್ರ ಇಟ್ಟು ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಚಿಂತಕರನ್ನು, ಬುದ್ದಿಜೀವಿಗಳನ್ನು ಅಪನಂಬಿಕೆಯಿಂದ, ಕುಹುಕದಿಂದ ನೋಡುವ, ಸಾರ್ವಜನಿಕವಾಗಿ ಅಪಮಾನಿಸುವ ಕಾರ್ಯ ಹೆಚ್ಚುತ್ತಿದೆ. ಇದೇ ಮಾದರಿಯ ಲೇವಡಿಗೆ ಕಾರ್ನಾಡರೂ ಒಳಗಾಗಿದ್ದರು. ಪ್ರತಿ ವಿಷಯವನ್ನು ವಿವಿಧ ಆಯಾಮಗಳಲ್ಲಿ ನೋಡುವಂತಾಗಬೇಕು. ಅದೇ ರೀತಿ ಇತಿಹಾಸ ಕೂಡ ಅವರವರ ದೃಷ್ಟಿಕೋನದ ಚೌಕಟ್ಟಿನಲ್ಲಿರುತ್ತವೆ. ಚರಿತ್ರೆ ಆಧರಿಸಿ ಬರೆದ ಕಾರ್ನಾಡರ ಕಾದಂಬರಿ ಕೂಡ ಇತಿಹಾಸದ ಒಂದು ಆಯಾಮವನ್ನು ಗುರುತಿಸುತ್ತದೆ ಎಂದು ಹೇಳಿದರು.

ADVERTISEMENT

ಲಭ್ಯವಿರುವ ಶಾಸನ, ಪತ್ರ ವ್ಯವಹಾರದ ದಾಖಲೆಯನ್ನು ಆಧರಿಸಿ ಕೆಲ ಇತಿಹಾಸಕಾರರು ಟಿಪ್ಪು ಸುಲ್ತಾನನನ್ನು ಅಪ್ರತಿಮ ದೇಶಭಕ್ತ ಎಂದು, ಇನ್ನೂ ಕೆಲವರು ಮತಾಂಧ ಎಂದೂ ಉಲ್ಲೇಖಿಸುತ್ತಾರೆ. ಹಾಗಾಗಿ ಇತಿಹಾಸ ವಸ್ತುನಿಷ್ಠೆ ಎಂಬ ಕಲ್ಪನೆ ಬಿಡಬೇಕು. ಚರಿತ್ರೆಕಾರರು ಇತಿಹಾಸವನ್ನು ಪುನರ್ ನಿರ್ಮಾಣ ಮಾಡಲಾರರು, ಬದಲಾಗಿ ಆಕರಗಳ ಮೂಲಕ ಗತಕಾಲದ ಬಗ್ಗೆ ಜ್ಞಾನ ನಿರ್ಮಾಣ ಮಾಡಬಲ್ಲರು. ಸಾರ್ವಜನಿಕ ಬದುಕಿನಲ್ಲಿ ಕೆಲ ಆದರ್ಶಗಳು, ಪ್ರತಿಮೆಗಳು ಕಾಲಾಂತರದಲ್ಲಿ ಭ್ರಷ್ಟವಾಗುತ್ತವೆ. ಪ್ರಜಾಪ್ರಭುತ್ವದಲ್ಲಿ ಯೋಚನೆ ಮಾಡುವ ಕಾರ್ಯ ಪವಿತ್ರವಾಗಿದ್ದು, ಅಲ್ಲಿ ಸೈನಿಕ ಮಾದರಿ ಹೇರಿ ಆಜ್ಞಾಧಾರಕನಾಗು ಎಂದರೆ ಭ್ರಷ್ಟಗೊಳಿಸಿದಂತೆ ಎಂದು ಅಭಿಪ್ರಾಯಪಟ್ಟರು.

ಚಿಂತಕಿ ಡಾ. ಅನಸೂಯಾ ಕಾಂಬ್ಳೆ, ಸಂಘಟಕ ಮುನೀರ್ ಕಾಟಿಪಳ್ಳ, ಬರಹಗಾರ್ತಿ ಮಾಧವಿ ಭಂಡಾರಿ, ರಂಗಕರ್ಮಿ ಶ್ರೀಪಾದ ಭಟ್ಟ, ಚಿಂತನದ ಪ್ರಮುಖ ಕಿರಣ ಭಟ್ಟ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.