ಕಾರವಾರ: ಜೊಯಿಡಾ ತಾಲ್ಲೂಕಿನ ಅಣಶಿ ಘಟ್ಟದಲ್ಲಿ ಗುಡ್ಡದಿಂದ ದೊಡ್ಡ ಕಲ್ಲುಗಳು, ಮಣ್ಣು ಶನಿವಾರ ಕುಸಿದು ರಾಜ್ಯ ಹೆದ್ದಾರಿಗೆ ಬಿದ್ದಿವೆ. ಹಾಗಾಗಿ ಈ ಭಾಗದಲ್ಲಿ ವಾಹನ ಸವಾರರು ಹೆಚ್ಚಿನ ಎಚ್ಚರಿಕೆಯ ಸಂಚರಿಸಬೇಕಿದೆ.
ಕಳೆದ ವರ್ಷ ಅಣಶಿ ಘಟ್ಟದಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿ ಈ ಮಾರ್ಗದಲ್ಲಿ ಸಂಪರ್ಕ ಕಡಿತಗೊಂಡಿತ್ತು. ಸುಮಾರು ಒಂದು ತಿಂಗಳು ವಾಹನಗಳ ಸಂಚಾರಕ್ಕೆ ಅಡಚಣೆಯಾಗಿತ್ತು. ಊರಿನ ಜನರೇ ಸೇರಿ ಮಣ್ಣನ್ನು ತೆರವು ಮಾಡಿದ್ದರು. ಬಳಿಕ ತಾತ್ಕಾಲಿಕವಾಗಿ ರಸ್ತೆಯನ್ನು ದುರಸ್ತಿ ಮಾಡಿ ಸಂಪರ್ಕ ಕಲ್ಪಿಸಲಾಗಿತ್ತು.
ಈ ರಸ್ತೆಯಲ್ಲಿ ಶನಿವಾರ ಸಂಚರಿಸುತ್ತಿದ್ದಾಗ ಕಲ್ಲು ಬಿದ್ದಿರುವುದನ್ನು ಗಮನಿಸಿದ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ, ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
‘ಈ ಬಾರಿ ಮಳೆಗಾಲದ ಆರಂಭದಲ್ಲೇ ಕಲ್ಲುಗಳು, ಮಣ್ಣು ಕುಸಿಯಲು ಆರಂಭಿಸಿರುವುದು ಆತಂಕ ಮೂಡಿಸಿದೆ. ಕಳೆದ ಬಾರಿಯಂತೆ ಅವಘಡ ಆಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಸಡಿಲವಾಗಿರುವ ಗುಡ್ಡದ ಮಣ್ಣು ಕುಸಿಯದಂತೆ ಮಳೆಗಾಲಕ್ಕೂ ಮೊದಲೇ ಕ್ರಮ ವಹಿಸಬೇಕಿತ್ತು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘ಕರಾವಳಿ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಹೆದ್ದಾರಿಯ ಅಂಚಿನಲ್ಲಿ ಗುಡ್ಡಗಳನ್ನು ಕತ್ತರಿಸಲಾಗಿದೆ. ಅವು ಕೂಡ ರಸ್ತೆಯ ಮೇಲೆ ಕುಸಿಯುವ ಆತಂಕವಿದೆ. ಮಳೆಗಾಲ ಈಗಷ್ಟೇ ಆರಂಭ ಆಗಿದೆ. ಹಾಗಾಗಿ ಸಂಭವನೀಯ ಅನಾಹುತ ತಡೆಯಲು ಕೂಡಲೇ ಕಾರ್ಯಪ್ರವೃತ್ತರಾಗಬೇಕು’ ಎಂದು ಮನವಿ ಮಾಡಿದ್ದಾರೆ.
ಕಾರವಾರದಿಂದ ಜೊಯಿಡಾ, ದಾಂಡೇಲಿ, ಬೆಳಗಾವಿ, ಧಾರವಾಡಕ್ಕೆ ತೆರಳಲು ಅಣಶಿ ಘಟ್ಟದ ಮಾರ್ಗವನ್ನೇ ಹೆಚ್ಚಿನ ಜನ ಬಳಸುತ್ತಾರೆ. ಜೊಯಿಡಾ, ದಾಂಡೇಲಿ ಭಾಗದಿಂದ ಕಾರವಾರಕ್ಕೆ ಉದ್ಯೋಗಕ್ಕೆ ಬರಲು ಈ ರಸ್ತೆ ಬಳಕೆಯಾಗುತ್ತದೆ. ನಿತ್ಯವೂ ಸಾವಿರಾರು ಮಂದಿ ಈ ಮಾರ್ಗದಲ್ಲಿ ಸಂಚರಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.