ADVERTISEMENT

ಸಿದ್ದಾಪುರ: ತುತ್ತು ಅನ್ನಕ್ಕೆ ಕುತ್ತು ತಂದ ಜಿಗಿಹುಳು

ನಿರಂತರ ಮಳೆಯಿಂದ ಹೆಚ್ಚಿದ ತೇವಾಂಶದಿಂದಾಗಿ ಭತ್ತದ ಸಸಿಗೆ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 6:58 IST
Last Updated 25 ಅಕ್ಟೋಬರ್ 2024, 6:58 IST
ಭತ್ತದ ಹುಲ್ಲಿನ ರಸ ಹೀರುವ ಜಿಗಿ ಹುಳುಗಳು
ಭತ್ತದ ಹುಲ್ಲಿನ ರಸ ಹೀರುವ ಜಿಗಿ ಹುಳುಗಳು   

ಸಿದ್ದಾಪುರ: ತಾಲ್ಲೂಕಿನ ರೈತರ ಜೀವನಾಡಿ ಬೆಳೆಗಳಲ್ಲಿ ಒಂದಾಗಿರುವ ಭತ್ತಕ್ಕೆ ಜಿಗಿಹುಳುವಿನ ಬಾಧೆ ಹೆಚ್ಚುತ್ತಿರುವುದು ಅನ್ನದಾತರನ್ನು ಚಿಂತೆಗೆ ತಳ್ಳಿದೆ.

ಈ ಬಾರಿ ವಾಡಿಕೆಗಿಂತ ಶೇ 58ರಷ್ಟು ಅಧಿಕ ಮಳೆ ತಾಲ್ಲೂಕಿನ ವ್ಯಾಪ್ತಿಯಲ್ಲಿ ಸುರಿದಿದೆ. ಇದರಿಂದಾಗಿ ಮಣ್ಣು ಮತ್ತು ವಾತಾವರಣದಲ್ಲಿನ ಅಧಿಕ ತೇವಾಂಶದಿಂದ ಮಲೆನಾಡಿನ ರೈತಾಪಿ ವರ್ಗ ಸಂಕಷ್ಟ ಎದುರಿಸುವಂತಾಗಿದೆ.

‘ಕೂಲಿ ಕೆಲಸ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದೇವೆ. ಅರ್ಧ ಎಕರೆಯಷ್ಟು ಗದ್ದೆಯಿದೆ. ಭತ್ತ ಮತ್ತು ಹುಲ್ಲಿನಿಂದ ವರ್ಷಕ್ಕೆ ₹25 ರಿಂದ 30 ಸಾವಿರ ಆದಾಯ ಬರುತ್ತಿತ್ತು. ಜಿಗಿಹುಳುವಿನ ಬಾಧೆಯಿಂದ ಪೈರು ಬರುವ ಮೊದಲೆ ಭತ್ತದ ಹುಲ್ಲುಗಳು ಒಣಗುತ್ತಿವೆ. ನಿರೀಕ್ಷಿತ ಬೆಳೆ ಕೈಗೆಟುಕದಿದ್ದರೆ ಭತ್ತ ಬೆಳೆಯಲು ಮಾಡಿದ ಖರ್ಚು ಕೂಡ ಸಿಗುವುದಿಲ್ಲ’ ಎನ್ನುತ್ತಾರೆ ಬಿಳಗಿಯ ಕೃಷಿಕ ಶಂಕರ ನಾಯ್ಕ.

ADVERTISEMENT

‘ಮುಕ್ಕಾಲು ಎಕರೆಯಲ್ಲಿ ಅಡಿಕೆ, ಅರ್ಧ ಎಕರೆಯಲ್ಲಿ ಭತ್ತ ಬೆಳೆಯುತ್ತಿದ್ದೇನೆ. ಕೆಲವು ಅಡಿಕೆ ಗಿಡಗಳಲ್ಲಿ ಪೈರು ಬರಲು ಆರಂಭಗೊಂಡಿತ್ತು. ಆದರೆ ಎಲೆಚುಕ್ಕಿ ರೋಗದಿಂದ ಅಡಿಕೆ ಗಿಡಗಳು ಸಾಯುತ್ತಿವೆ. ಇತ್ತ ಭತ್ತ ಜಿಗಿಹುಳುವಿನ ಬಾಧೆಯಿಂದ ಪೈರು ಬರುವ ಮೊದಲೇ ಒಣಗುತ್ತಿವೆ’ ಎಂದು ರೈತ ಉಮೇಶ ಗೌಡ ನೋವು ತೋಡಿಕೊಂಡರು.

‘ತಾಲ್ಲೂಕಿನಲ್ಲಿ ಸುಮಾರು 5,200 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆದಿದ್ದು ಭತ್ತದಲ್ಲಿ ಬಿಳಿ ಬೆನ್ನಿನ ಜಿಗಿಹುಳು ಮತ್ತು ಕಂದು ಜಿಗಿಹುಳುವಿನ ಬಾಧೆ ಕಂಡು ಬಂದಿದೆ. ಹಸುವಂತೆ, ಬೇಡ್ಕಣಿ, ಬಿಳಗಿ, ಕಂವಚೂರು, ಬಿದ್ರಕಾನ್, ಶಿರಳಗಿ ಭಾಗಗಳಲ್ಲಿ ತೀವ್ರತೆ ಹೆಚ್ಚಿದೆ. ಇದರಿಂದ ರೈತರಿಗೆ ಶೇ.10 ರಿಂದ 90 ರಷ್ಟು ಇಳುವರಿಯಲ್ಲಿ ಮತ್ತು ಹುಲ್ಲಿನಲ್ಲಿ ನಷ್ಟವಾಗುತ್ತದೆ’ ಎನ್ನುತ್ತಾರೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸುಮಾ ಎಸ್.ಎಂ.

‘ಕೀಟದ ಬಾಧೆ ಕಂಡುಬಂದಾಗ ಗದ್ದೆಯಲ್ಲಿನ ನೀರನ್ನು ತೆಗೆಯಬೇಕು. ಥಯೋಮಿಥಾಕ್ಸಾಮ್ ಎಂಬ ಕೀಟನಾಶಕ ಹೆಚ್ಚು ಪ್ರಯೋಜನಕಾರಿಯಾಗುತ್ತಿದೆ ಎಂದು ರೈತರ ಅಭಿಪ್ರಾಯವಾಗಿದ್ದು, ಪ್ರತಿ 100 ಲೀ. ನೀರಿಗೆ 20 ಗ್ರಾಂ ನಷ್ಟು ಥಯೋಮಿಥಾಕ್ಸಾಮ್ ಮಿಶ್ರಣ ಮಾಡಿ ಭತ್ತದ ಗಿಡದ ಬುಡಕ್ಕೆ ಸಿಂಪಡಿಸಬೇಕು. ರೈತರು ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿ ಸರಿಯಾದ ಮಾಹಿತಿ ಪಡೆದುಕೊಳ್ಳಬಹುದು’ ಎಂದು ಕೃಷಿ ಅಧಿಕಾರಿ ಪ್ರಶಾಂತ ಜಿ.ಎಸ್. ತಿಳಿಸಿದರು.

ಸಿದ್ದಾಪುರ ತಾಲ್ಲೂಕಿನ ಅರೆಂದೂರಿನಲ್ಲಿ ಜಿಗಿ ಹುಳುವಿನ ಬಾಧೆಗೆ ಒಳಪಟ್ಟ ಗದ್ದೆಯನ್ನು ಕೃಷಿ ಸಹಾಯಕ ನಿರ್ದೇಶಕಿ ಸುಮಾ ಎಸ್.ಎಂ. ಪರಿಶೀಲಿಸಿದರು
ರೋಗ ಹರಡುವುದು ಏಕೆ?
‘ವಾತಾವರಣದಲ್ಲಿ ಅತಿ ಹೆಚ್ಚು ತೇವಾಂಶ ಮತ್ತು ಹೆಚ್ಚು ಉಷ್ಣತೆ ಜಿಗಿಹುಳುಗಳಿಗೆ ಪೂರಕವಾದ ಅಂಶವಾಗಿದೆ. ಭತ್ತದ ಬುಡದಲ್ಲಿ ರಸ ಹೀರುವುದರಿಂದ ಗರಿಗಳು ಹಳದಿ ಬಣ್ಣಕ್ಕೆ ತಿರುಗಿ ಪೈರು ಸುಟ್ಟಂತೆ ಮತ್ತು ಕುಸಿದಂತೆ ಕಾಣುತ್ತದೆ. ಇದರಿಂದ ಭತ್ತದ ಕಾಳು ತುಂಬದೇ ಜೊಳ್ಳಾಗುತ್ತದೆ. ಅಲ್ಲದೇ ಹುಲ್ಲು ಕೂಡ ದುರ್ವಾಸನೆಯಿಂದ ಕೂಡಿರುತ್ತದೆ’ ಎಂದು ವಿವರಿಸುತ್ತಾರೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಸುಮಾ ಎಸ್.ಎಂ.
ರೈತರಿಗೆ ನಿರ್ವಹಣೆಗೆ ಅಗತ್ಯ ಮಾಹಿತಿಗಳನ್ನು ನೀಡಲಾಗುತ್ತಿದೆ. ಕೀಟಗಳ ಹತೋಟಿಗೆ ಅನುಸರಿಸಬೇಕಾದ ಕ್ರಮಗಳ ಕುರಿತು ಕರ ಪತ್ರಗಳನ್ನು ಮುದ್ರಿಸಿ ವಿತರಿಸಲಾಗುತ್ತಿದೆ.
–ಸುಮಾ ಎಸ್.ಎಂ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ
ಸಿದ್ದಾಪುರ ತಾಲ್ಲೂಕಿನ ಬೇಡ್ಕಣಿಯ ಗದ್ದೆಯೊಂದರಲ್ಲಿ ಜಿಗಿಹುಳುವಿನ ಬಾಧೆಯಿಂದ ಭತ್ತದ ಹುಲ್ಲುಗಳು ಒಣಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.