ADVERTISEMENT

ಬನವಾಸಿಯಲ್ಲಿ ಕದಂಬೋತ್ಸವ ಫೆಬ್ರವರಿ 8ರಿಂದ

25ನೇ ವರ್ಷಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 18 ಜನವರಿ 2020, 12:20 IST
Last Updated 18 ಜನವರಿ 2020, 12:20 IST
ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ಫೆ.8, 9ರಂದು ನಡೆಯಲಿರುವ ಕದಂಬೋತ್ಸವದ ಪೂರ್ವಭಾವಿ ಸಭೆಯಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಮಾತನಾಡಿದರು
ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ಫೆ.8, 9ರಂದು ನಡೆಯಲಿರುವ ಕದಂಬೋತ್ಸವದ ಪೂರ್ವಭಾವಿ ಸಭೆಯಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಮಾತನಾಡಿದರು   

ಶಿರಸಿ: ಕನ್ನಡದ ಪ್ರಥಮ ರಾಜಧಾನಿ ತಾಲ್ಲೂಕಿನ ಬನವಾಸಿಯಲ್ಲಿ ಫೆಬ್ರವರಿ 8 ಹಾಗೂ 9ರಂದು ಕದಂಬೋತ್ಸವ ಆಚರಿಸಲು ದಿನಾಂಕ ನಿಗದಿಯಾಗಿದೆ. ಉತ್ಸವ ಆರಂಭವಾಗಿ 25 ವರ್ಷ ಆಗಿರುವ ಪ್ರಯುಕ್ತ ಬೆಳ್ಳಿ ಹಬ್ಬ ಆಚರಣೆಯನ್ನು ಅದ್ಧೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ.

ಶಾಸಕ ಶಿವರಾಮ ಹೆಬ್ಬಾರ್ ಅಧ್ಯಕ್ಷತೆಯಲ್ಲಿ ಶನಿವಾರ ಇಲ್ಲಿ ನಡೆದ ಸಭೆಯಲ್ಲಿ ಉತ್ಸವ ಆಚರಣೆಯ ರೂಪರೇಷೆಗಳ ಬಗ್ಗೆ ಚರ್ಚಿಸಲಾಯಿತು. ‘ಜ.25ರಂದು ನಡೆಯವ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಉತ್ಸವದ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ. ಕದಂಬೋತ್ಸವದ ಪೂರ್ವಭಾವಿಯಾಗಿ ಕದಂಬ ಜ್ಯೋತಿ ಸಂಚಾರ, ಗುಡ್ನಾಪುರ ಉತ್ಸವ ನಡೆಯಲಿದೆ. ಕದಂಬೋತ್ಸವದ ಅಧಿಕೃತ ಉದ್ಘಾಟನೆಯನ್ನು ಮಧುಕೇಶ್ವರ ದೇವಾಲಯದ ಆವರಣದಲ್ಲಿರುವ ಕಲ್ಲಿನ ಮಂಚದ ಎದುರು ಮಾಡುವ ಕುರಿತು ಹಾಗೂ ದೇವಾಲಯಕ್ಕೆ ವಿಶೇಷ ದೀಪಾಲಂಕಾರ ಮಾಡುವ ಕುರಿತು ಕ್ರಮವಹಿಸಲಾಗುವುದು’ ಎಂದು ಹೇಳಿದರು.

25ನೇ ವರ್ಷಾಚರಣೆಯನ್ನು ವಿಶೇಷವಾಗಿ ಆಚರಿಸಬೇಕು. ಇದಕ್ಕಾಗಿ ಶಾಸಕರ ನೇತೃತ್ವದಲ್ಲಿ ಪ್ರತ್ಯೇಕ ಸಮಿತಿ ರಚಿಸಬೇಕು. ಕದಂಬೋತ್ಸವದ ನೆಪದಲ್ಲಿ ಬನವಾಸಿ ಅಭಿವೃದ್ಧಿ ಸಂಬಂಧ ಪಂಚವಾರ್ಷಿಕ ಯೋಜನೆ ರೂಪಿಸಿ, ಹಂತ ಹಂತವಾಗಿ ಅನುಷ್ಠಾನಗೊಳಿಸಬೇಕು. ಬನವಾಸಿಗೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳು ಅಭಿವೃದ್ಧಿ ಕಾಣಬೇಕು ಎಂದು ಹಿರಿಯರಾದ ಟಿ.ಜಿ.ನಾಡಿಗೇರ ಸಲಹೆ ನೀಡಿದರು.

ADVERTISEMENT

ಪ್ರತಿಭಾ ಕಾರಂಜಿಯಲ್ಲಿ ಬಹುಮಾನ ಪಡೆದ ಮಕ್ಕಳಿಗೆ ಕದಂಬೋತ್ಸವ ವೇದಿಕೆಯಲ್ಲಿ ಅವಕಾಶ ಕಲ್ಪಿಸಬೇಕು ಎಂದು ಬನವಾಸಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಗಣೇಶ ಸಣ್ಣಲಿಂಗಣ್ಣನವರ್ ಹೇಳಿದರು. ‘ಬನವಾಸಿ ನಿನ್ನೆ–ಇಂದು–ನಾಳೆ ಎಂಬ ವಿಷಯದ ಕುರಿತು ಚರ್ಚಿಸಿ ಬನವಾಸಿ ಅಭಿವೃದ್ಧಿಯ ಕ್ರಿಯಾಯೋಜನೆ ರೂಪಿಸುವಂತಾಗಬೇಕು’ ಎಂದು ಶಿವಾನಂದ ದೀಕ್ಷಿತ್ ಅಭಿಪ್ರಾಯಪಟ್ಟರು.

ಪಂಪ ಪ್ರಶಸ್ತಿಯನ್ನು ಬನವಾಸಿಯಲ್ಲೇ ಪ್ರದಾನ ಮಾಡಬೇಕು. ಕಳೆದ ವರ್ಷ ಕದಂಬೋತ್ಸವ ಮಂಗನ ಕಾಯಿಲೆ ಕಾರಣಕ್ಕೆ ರದ್ದಾಗಿತ್ತು. ಆ ಉತ್ಸವಕ್ಕೆ ಆಯ್ಕೆಯಾಗಿದ್ದ ಕಲಾವಿದರಿಗೆ ಈ ಬಾರಿ ಆದ್ಯತೆ ಮೇಲೆ ಅವಕಾಶ ನೀಡಬೇಕು ಎಂದು ಉದಯಕುಮಾರ್ ಕಾನಳ್ಳಿ ಹೇಳಿದರು.

ಉತ್ಸವ ಸಮಿತಿಗಳು ನಾಮಕಾವಾಸ್ತೆ ಆಗಬಾರದು. ಸ್ಥಳೀಯರ ಜೊತೆ ಚರ್ಚಿಸಿ ಅಧಿಕಾರಿಗಳು ನಿರ್ಣಯ ಕೈಗೊಳ್ಳಬೇಕು. ಕದಂಬ ಜ್ಯೋತಿ ಸಂಚರಿಸುವ ವಾಹನ ಸುವ್ಯವಸ್ಥಿತವಾಗಿರಬೇಕು ಮತ್ತು ಪ್ರತಿ ತಾಲ್ಲೂಕಿನಲ್ಲಿ ಜ್ಯೋತಿಯನ್ನು ಅದ್ಧೂರಿಯಾಗಿ ಸ್ವಾಗತಿಸಬೇಕು. ಗ್ರಾಮೀಣ ಭಾಗದಲ್ಲಿ ಉತ್ಸವದ ಸಂಬಂಧ ವಿಶೇಷ ಪ್ರಚಾರ ನಡೆಸಿದಲ್ಲಿ, ಹೆಚ್ಚಿನ ಜನರು ಭಾಗವಹಿಸುತ್ತಾರೆ. ಉತ್ಸವದ ಸಂದರ್ಭದಲ್ಲಿ ಗ್ರಾಮೀಣ ಬಸ್ ತುಂಗುದಾಣಗಳಿಗೆ ಸುಣ್ಣ ಬಳಿಯಬೇಕು. ಪ್ಲಾಸ್ಟಿಕ್‌ಮುಕ್ತ ಉತ್ಸವ ಆಚರಿಸಬೇಕು ಎಂಬ ಸಲಹೆ ವ್ಯಕ್ತವಾಯಿತು.

ರುದ್ರ ಗೌಡ, ರಘು ನಾಯ್ಕ, ಜಿ.ಎನ್.ಭಟ್ಟ, ಅರವಿಂದ ಶೆಟ್ಟಿ, ದ್ಯಾಮಣ್ಣ ದೊಡ್ಮನಿ, ಬಿ.ಶಿವಾಜಿ ಸಲಹೆ ನೀಡಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಜಿ.ಎನ್.ಹೆಗಡೆ ಮುರೇಗಾರ, ಉಷಾ ಹೆಗಡೆ, ಬಸವರಾಜ ದೊಡ್ಮನಿ, ರೂಪಾ ನಾಯ್ಕ, ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.