ADVERTISEMENT

ಕುಮಟಾ: ಮಾಣಿಕಟ್ಟಾ ಗಜನಿಯಲ್ಲಿ ನೆಲೆಯೂರಿದ ‘ಕಗ್ಗ’

ನಾಲ್ಕೂವರೆ ತಾಸಿನೊಳಗೆ 40 ಎಕರೆ ಭೂಮಿಯಲ್ಲಿ ಬೀಜ ಬಿತ್ತಿದ ರೈತರು

ಎಂ.ಜಿ.ನಾಯ್ಕ
Published 12 ಜುಲೈ 2024, 7:26 IST
Last Updated 12 ಜುಲೈ 2024, 7:26 IST
೧೧ಕೆಎಂಟಿ೧ಇಪಿ: ಕುಮಟಾ ತಾಲ್ಲೂಕಿನ ಮಾಣಿಕಟ್ಟಾ ಕಗ್ಗ ಭತ್ತ ಬೆಳೆಗಾರ ಸಂಘದ ರೈತರು ಗುರುವಾರ ಸಾಮೂಹಿಕ ಬಿತ್ತನೆ ಕಾರ್ಯ ಕೈಕೊಂಡರು
೧೧ಕೆಎಂಟಿ೧ಇಪಿ: ಕುಮಟಾ ತಾಲ್ಲೂಕಿನ ಮಾಣಿಕಟ್ಟಾ ಕಗ್ಗ ಭತ್ತ ಬೆಳೆಗಾರ ಸಂಘದ ರೈತರು ಗುರುವಾರ ಸಾಮೂಹಿಕ ಬಿತ್ತನೆ ಕಾರ್ಯ ಕೈಕೊಂಡರು   

ಕುಮಟಾ: ತಾಲ್ಲೂಕಿನ ಮಾಣಿಕಟ್ಟಾ ಕಗ್ಗ ಭತ್ತ ಬೆಳೆಗಾರ ಸಂಘದ ರೈತರು ಅಘನಾಶಿನಿ ಹಿನ್ನೀರಿನ ಗಜನಿಯ ಸುಮಾರು 40 ಎಕರೆ ಪ್ರದೇಶದಲ್ಲಿ ಹತ್ತು ಕ್ವಿಂಟಾಲ್‍ಗೂ ಹೆಚ್ಚು ಕಗ್ಗ ಭತ್ತ ಬೀಜದ ಸಾಮೂಹಿಕ ಬಿತ್ತನೆ ಕಾರ್ಯ ಗುರುವಾರ ನಡೆಯಿತು.

ಮಾಣಿಕಟ್ಟಾ ಸುತ್ತಮುತ್ತಲಿನ ವ್ಯಾಪ್ತಿಯ ಸುಮಾರು 180 ಜನ ರೈತರು ನಸುಕಿನ ಜಾವದಿಂದ ಬಿತ್ತನೆ ಪ್ರಕ್ರಿಯೆಗೆ ಸಾಂಪ್ರದಾಯಿಕ ರೀತಿಯಲ್ಲಿ ಪ್ರಕ್ರಿಯೆ ಆರಂಭಿಸಿದರು. ರೈತರ ಸಂಘದ ಗೋದಾಮಿನಲ್ಲಿದ್ದ ಕಗ್ಗ ಭತ್ತದ ಬೀಜ ರಾಶಿಗೆ ಪೂಜೆ ಸಲ್ಲಿಸಿದರು. ಬಳಿಕ ಹೆಚ್ಚಿನ ರೈತರು ಗಜನಿಯ ಕೆಸರನ್ನು ಗುದ್ದಲಿಯಿಂದ ಕಡಿಯುತ್ತಾ ಹೋದಂತೆ ಅವರ ಹಿಂದೆ ಹತ್ತಾರು ರೈತರು ಮೊದಲೇ ಮೊಳಕೆ ತರಿಸಿದ್ದ ಕಗ್ಗ ಭತ್ತದ ಬೀಜ ಬಿತ್ತನೆ ಕೈಕೊಂಡರು.

ಸುಮಾರು ನಾಲ್ಕೂವರೆ ತಾಸಿನ ಶ್ರಮದಾನದ ಫಲವಾಗಿ ಮಧ್ಯಾಹ್ನದ ಒಳಗೆ 40 ಎಕರೆಯಷ್ಟು ವಿಸ್ತಾರದ ಭೂಮಿಯಲ್ಲಿ ಕಗ್ಗ ತಳಿಯ ಭತ್ತ ಬೀಜ ಬಿತ್ತನೆ ಕಾರ್ಯ ಸಂಪನ್ನಗೊಂಡಿತು.

ADVERTISEMENT

‘ಕಗ್ಗ ಭತ್ತ ತಳಿ ನಶಿಸುವ ಆತಂಕ ಇದ್ದಾಗ ಸಂಘದ ಸಂಸ್ಥಾಪಕ ಅಧ್ಯಕ್ಷ ಸಿ.ಆರ್.ನಾಯ್ಕ ಅವರು ಮಾಣಿಕಟ್ಟಾ ಕಗ್ಗ ಭತ್ತ ಬೆಳೆಗಾರ ಸಂಘ ಹುಟ್ಟು ಹಾಕಿದ್ದರು. ಸಂಘದ ವತಿಯಿಂದ ಪ್ರತಿ ವರ್ಷ ಕಗ್ಗ ಭತ್ತ ಬಿತ್ತನೆ ಮಾಡುವ ಪರಂಪರೆಯನ್ನು ಆರಂಭಿಸಿದ್ದರು. ಬಿತ್ತನೆಗೆ ಗೈರು ಹಾಜರಾಗುವ ರೈತರಿಗೆ ₹1 ಸಾವಿರ ದಂಡ ವಿಧಿಸುವ ಪದ್ಧತಿಯನ್ನೂ ಜಾರಿಗೆ ತರಲಾಗಿತ್ತು. ಅದರಂತೆ ಮಳೆಗಾಲದ ಪ್ರಾಕೃತಿಕ ವಿಕೋಪಗಳನ್ನು ಎದುರಿಸಿ ಸಂಘದ ವತಿಯಿಂದ ಪ್ರತೀ ವರ್ಷ ಸಾಮೂಹಿಕ ಕಗ್ಗ ಬಿತ್ತನೆ ಕಾರ್ಯ ನಡೆಸಿಕೊಂಡು ಬರಲಾಗುತ್ತಿದೆ’ ಎಂದು ಮಾಣಿಕಟ್ಟಾ ಕಗ್ಗ ಭತ್ತ ಬೆಳೆಗಾರರ ಸಂಘದ ಕಾರ್ಯದರ್ಶಿ ಶ್ರೀಧರ ಪೈ ಹಾಗೂ ಸದಸ್ಯ ನಾರಾಯಣ ಪಟಗಾರ ಹೇಳಿದರು.

‘ಕಳೆದ ಒಂದು ವಾರದಿಂದ ಸುರಿದ ವಿಪರೀತ ಮಳೆಯಿಂದ ಕಗ್ಗ ಬಿತ್ತನೆ ಮಾಡುವ ಗಜನಿಗೆ ನೆರೆ ನೀರು ತುಂಬಿದ್ದರಿಂದ ಬಿತ್ತನೆ ಕಾರ್ಯವನ್ನು ಎರಡು ಸಲ ಮುಂದೂಡಲಾಗಿತ್ತು. ಈ ಬಾರಿ ಎರಡು ಕಡೆ ಕಗ್ಗ ಬಿತ್ತನೆ ಮಾಡಲಾಗಿದ್ದು, ಒಂದು ಕಡೆ ನೆರೆ ಮುಂತಾದ ಪ್ರಾಕೃತಿಕ ವಿಕೋಪದಿಂದ ಬೆಳೆಗೆ ಹಾನಿಯಾದರೂ ಇನ್ನೊಂದು ಕಡೆ ಉತ್ತಮ ಬೆಳೆಯ ನಿರೀಕ್ಷೆ ಮಾಡಲಾಗಿದೆ’ ಎಂದರು.

Quote - ಕಗ್ಗ ಬಿತ್ತನೆಯಲ್ಲಿ ಊರಿನ ರೈತರೆಲ್ಲ ಸಡಗರದೊಂದಿಗೆ ಒಟ್ಟಾಗಿ ಪಾಲ್ಗೊಳ್ಳುವ ಸಂಪ್ರದಾಯ ಈ ಬಾರಿಯೂ ಮುಂದುವರೆದಿದೆ ಶ್ರೀಧರ ಪೈ ಮಾಣಿಕಟ್ಟಾ ಕಗ್ಗ ಭತ್ತ ಬೆಳೆಗಾರರ ಸಂಘದ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.