ಕಾರವಾರ: ತಾಲ್ಲೂಕಿನ ಕಾಳಿ ನದಿಯ ಸುತ್ತಮುತ್ತ ಅಪರೂಪದ ಪಕ್ಷಿ ಸಂಕುಲವನ್ನು ‘ಕೈಗಾ ಬರ್ಡರ್ಸ್’ ತಂಡವು ಗುರುತಿಸಿದೆ. ಅವುಗಳಲ್ಲಿ, ಅತ್ಯಂತ ಅಳಿವಿನ ಅಂಚಿನಲ್ಲಿರುವ ಸ್ಥಳೀಯ ವಲಸಿಗ ಬಿಳಿ ರಣಹದ್ದು (ಈಜಿಪ್ಷಿಯನ್ ವಲ್ಚರ್) ಹಾಗೂ ಹಿಮಾಲಯದ ದೊಡ್ಡ ರಣಹದ್ದು (ಹಿಮಾಲಯನ್ ಗ್ರಿಫೋನ್ ವಲ್ಚರ್) ಕೂಡ ಸೇರಿವೆ.
ಬಿಳಿ ರಣಹದ್ದು ತರುಣಾವಸ್ಥೆಯಲ್ಲಿದೆ. ವಲಸೆ ಬಂದ ಗಂಡು ಮತ್ತು ಹೆಣ್ಣು ಇಲ್ಲೇ ಗೂಡುಕಟ್ಟಿ ಸಂತಾನೋತ್ಪತ್ತಿ ಮಾಡಿರುವ ಸಾಧ್ಯತೆಯಿದೆ ಎಂದು ಪಕ್ಷಿ ವೀಕ್ಷಕರು ಊಹಿಸಿದ್ದಾರೆ. ಈ ಜಾತಿಯ ಪಕ್ಷಿಗಳು ಸುಮಾರು ಐದು ವರ್ಷಗಳ ಬಳಿಕ ಇಲ್ಲಿ ಪುನಃ ಕಾಣಿಸಿವೆ.
ತಾಲ್ಲೂಕಿನ ಕಾಳಿ ನದಿಯ ಇಕ್ಕೆಲಗಳಲ್ಲಿರುವ ಜವುಗು, ಹುಲ್ಲುಗಾವಲು, ಅಳಿವೆ ಹಾಗೂ ಕಡಲತೀರಗಳಿಗೆ ಚಳಿಗಾಲದಲ್ಲಿ ಅನೇಕ ಹಕ್ಕಿಗಳು ವಲಸೆ ಬರುತ್ತವೆ. ಸುಮಾರು ಒಂದು ತಿಂಗಳಿನಿಂದ ಅವುಗಳ ಕಲರವ ಕೂಡ ಹೆಚ್ಚಿದ್ದು, ಪಕ್ಷಿ ವೀಕ್ಷಕರ ತಂಡವು ಗುರುತಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ತಂಡದ ಸಂಯೋಜಕ ಮೋಹನ್ ದಾಸ್, ‘ಹಿಮಚ್ಛಾದಿತ ಶಿಖರಗಳಲ್ಲಿ ವಾಸ ಮಾಡುವ ಪಕ್ಷಿಗಳು ಅಲ್ಲಿನ ಭೀಕರ ಚಳಿಯಿಂದ ತಪ್ಪಿಸಿಕೊಳ್ಳಲು ದಕ್ಷಿಣದತ್ತ ವಲಸೆ ಬರುತ್ತವೆ. ಅಂಥ ಖಗ ಸಂಕುಲವನ್ನು ತಂಡದ ಸದಸ್ಯರಾದ ಸೂರಜ್ ಬಾನಾವಳಿಕರ ಹಾಗೂ ಹರೀಶ ಕೂಳೂರ್ ಕ್ಯಾಮೆರಾದಲ್ಲಿ ನಿರಂತರವಾಗಿ ದಾಖಲಿಸುತ್ತಿದ್ದಾರೆ’ ಎಂದು ತಿಳಿಸಿದರು.
‘ಕೋವಿಡ್ ಕಾರಣದಿಂದಾಗಿ ಎರಡು ವರ್ಷಗಳಿಂದ ವಲಸೆ ಹಕ್ಕಿಗಳ ದಾಖಲಾತಿಯನ್ನು ಸರಿಯಾಗಿ ಮಾಡಲು ಸಾಧ್ಯವಾಗಿರಲಿಲ್ಲ. ಈಗ ಮತ್ತೆ ವಲಸೆ ಪಕ್ಷಿಗಳನ್ನು ಕಂಡು ತಂಡದ ಸದಸ್ಯರು ಸಂತಸಗೊಂಡಿದ್ದಾರೆ’ ಎಂದರು.
‘ಪಕ್ಷಿಗಳು ಋತುಮಾನಗಳ ಬದಲಾವಣೆಯ ಸೂಚಕಗಳು. ಮಾನವನಿಂದ ನೈಸರ್ಗಿಕ ಸಂಪನ್ಮೂಲಗಳ ಅವೈಜ್ಞಾನಿಕ ಬಳಕೆಯಿಂದಾಗಿ ಭೂಮಿಯ ತಾಪಮಾನ ಹೆಚ್ಚಿದೆ. ಇಂಥ ಸಂದರ್ಭಗಳಲ್ಲಿ ಹಕ್ಕಿಗಳ ಸಂರಕ್ಷಣೆಯ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕಿದೆ’ ಎಂದು ತಂಡದ ಹಿರಿಯ ಪಕ್ಷಿತಜ್ಞ ಜಲೀಲ್ ಬಾರ್ಗಿರ್ ಹೇಳಿದರು.
ಅಳಿವಿನ ಅಂಚಿನಲ್ಲಿರುವ ರಣಹದ್ದುಗಳು ಕಾಳಿ ನದಿಯ ಸುತ್ತಮುತ್ತ ಕಂಡುಬಂದಿದ್ದು, ಅವುಗಳ ಸಂರಕ್ಷಣೆಗೆ ಜಿಲ್ಲಾಡಳಿತ, ಅರಣ್ಯ ಇಲಾಖೆ ಮತ್ತು ಪಶುಸಂಗೋಪನಾ ಇಲಾಖೆಗಳು ಸಂಯುಕ್ತವಾಗಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಅವರು ಮನವಿ ಮಾಡಿದ್ದಾರೆ.
ದೇಶ ವಿದೇಶಗಳ ಹಕ್ಕಿಗಳು
ಈ ಬಾರಿಯ ಪಕ್ಷಿ ವೀಕ್ಷಣೆಯಲ್ಲಿ ಉತ್ತರ ಯುರೋಪ್, ಸೈಬೀರಿಯಾ, ಫಿನ್ಲೆಂಡ್, ಮೆಡಿಟರೇನಿಯನ್ ಸಮುದ್ರ, ಟಿಬೆಟ್ ಹಾಗೂ ಲಡಾಖ್‌ಗಳಿಂದ ಬಂದಿರುವ ಹಕ್ಕಿಗಳೂ ಕಂಡು ಬಂದಿವೆ.
ಕಿತ್ತಳೆಕಾಲಿನ ಕಡಲಕ್ಕಿ (ರಡ್ಡಿ ಟರ್ನ್‌ಸ್ಟೋನ್), ನೀಲಕತ್ತಿನ ಉಲ್ಲಂಕಿ (ರಫ್), ಕಡಲ ಉಲ್ಲಂಕಿ (ಗ್ರೇಟ್ ನಾಟ್), ಬೂದುಬೆನ್ನಿನ ಕಡಲಕ್ಕಿ (ಹ್ಯುಗ್ಲಿನ್ಸ್ ಗಲ್), ಕೆಂಪುಕಾಲಿನ ಚಾಣ (ಅಮುರ್ ಫಾಲ್ಕನ್), ಪಟ್ಟೆರೆಕ್ಕೆಯ ಸೆಳೆವ (ಮೊಂಟಾಗುಸ್ ಹ್ಯಾರಿಯರ್), ಪಟ್ಟೆ ತಲೆ ಹೆಬ್ಬಾತು (ಬಾರ್ ಹೆಡೆಡ್ ಗೀಸ್) ಹಾಗೂ ಬಿಳಿಕತ್ತಿನ ಉಲಿಯಕ್ಕಿ (ಲೆಸ್ಸರ್ ವೈಟ್‌ಥ್ರೋಟ್) ಗುರುತಿಸಲಾಗಿದೆ ಎಂದು ಮೋಹನದಾಸ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.