ಹೊನ್ನಾವರ: ‘ನೆರೆ ಬಂದಾಗ ತಮ್ಮ ಮನೆ ತೊರೆದು ಅನಿವಾರ್ಯವಾಗಿ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುವುದು ನದಿ ದಂಡೆಗಳ ಜನರಿಗೆ ಅನೇಕ ವರ್ಷಗಳಿಂದ ರೂಢಿಗತ ಸಂಪ್ರದಾಯವಾಗಿದೆ. ಈ ಬಾರಿ ‘ಕಾಳಜಿ’ಯುಕ್ತ ಕೇಂದ್ರದಲ್ಲಿ ವಾಸವಿದ್ದ ಅನುಭವವಾಯಿತು’
ಹೀಗೆ ಭಾವುಕರಾಗಿ ಹೇಳಿದ್ದು ಗುಂಡಿಬೈಲು ಗ್ರಾಮದ ಗ್ರೇಸಿ ಫರ್ನಾಂಡಿಸ್.
‘ಗುಂಡಬಾಳ ನದಿಯು ಉಕ್ಕೇರಿದ್ದರಿಂದ ಮನೆಗಳ ಸುತ್ತಮುತ್ತ ನೀರು ಆವರಿಸಿತು. ತಕ್ಷಣವೇ ಸಮೀಪದ ಶಾಲೆಯಲ್ಲಿ ತೆರೆಯುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿದರು. ಮಳೆಯಿಂದ ಕಷ್ಟಕ್ಕೆ ಸಿಲುಕಿದವರಿಗೆ ಪ್ರತಿ ಬಾರಿಯಂತೆ ಕಾಟಾಚಾರದ ಆತಿಥ್ಯ ಎಂಬ ಕಲ್ಪನೆಯಲ್ಲಿಯೇ ಕೇಂದ್ರಕ್ಕೆ ಸಾಗಿದೆವು. ಆದರೆ, ಈ ಬಾರಿ ಅಲ್ಲಿ ನೀಡಿದ ಆತಿಥ್ಯ ಮರೆಯಲಾಗದಂತದ್ದು’ ಎಂದು ಕಾಳಜಿ ಕೇಂದ್ರದ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
‘ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರಿಗೆ ಅಗತ್ಯ ಆಹಾರ, ಹೊದಿಕೆ ಮೊದಲಾದ ಅಗತ್ಯಗಳನ್ನು ಪೂರೈಸಲು ಅತ್ಯಂತ ಕಡಿಮೆ ಅವಧಿಯಲ್ಲಿ ತುರ್ತು ಕ್ರಮಗಳಾಗಿದ್ದವು. ಇದೇ ಮೊದಲ ಬಾರಿಗೆಂಬಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಕಾಳಜಿ ಕೇಂದ್ರದಲ್ಲೇ ಬೀಡು ಬಿಟ್ಟು ಸಂತ್ರಸ್ತರ ಆರೋಗ್ಯ ತಪಾಸಣೆ ನಡೆಸುತ್ತಿದ್ದರು’ ಎಂದೂ ಹೇಳಿದರು.
ಖರ್ವ, ಮಂಕಿ, ಚಿಕ್ಕನಕೋಡ, ಗುಂಡಿಬೈಲ್, ಕೆಕ್ಕಾರ, ಮಲ್ಲಾಪುರ, ಹೆಬ್ಬೈಲ್ ಸೇರಿದಂತೆ 8 ಕಡೆಗಳಲ್ಲಿ ತೆರೆಯಲಾಗಿದ್ದ ಕಾಳಜಿ ಕೇಂದ್ರಗಳಲ್ಲಿ ಸೋಮವಾರ 313 ಸಂತ್ರಸ್ತರು ಆಶ್ರಯ ಪಡೆದಿದ್ದರು. ಮಂಗಳವಾರ ನೆರೆ ಇಳಿದಿದ್ದರಿಂದ ಜನರು ಮನೆಗಳಿಗೆ ಮರಳಿದರು.
ತಾಲ್ಲೂಕಿನ ಗುಂಡಬಾಳಾ ನದಿ, ಗುಡ್ನಕಟ್ಟು, ಭಾಸ್ಕೇರಿ ಹಳ್ಳಗಳಲ್ಲಿ ನೀರಿನ ಹರಿವು ಹೆಚ್ಚಿದ್ದ ಪರಿಣಾಮ ಪ್ರವಾಹ ಪರಿಸ್ಥಿತಿ ತಲೆದೋರಿತ್ತು. ಮಂಕಿ ಕುಂಬಾರಕೇರಿ, ಗುಂದ, ಕಡತೋಕಾ ಗುಡ್ನಕಟ್ಟು ಪ್ರದೇಶಗಳಲ್ಲಿ ಎನ್.ಡಿ.ಆರ್.ಎಫ್ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ನೆರೆ ಸಂತ್ರಸ್ತರನ್ನು ಸ್ಥಳಾಂತರಿಸಿತ್ತು.
‘ಕಾಳಜಿ ಕೇಂದ್ರದಲ್ಲಿ ನೋಡಲ್ ಅಧಿಕಾರಿಗಳು, ಕಂದಾಯ ವೃತ್ತ ನಿರೀಕ್ಷಕರು, ಪಿಡಿಒ ಮೊದಲಾದ ಸಿಬ್ಬಂದಿ ಹಗಲು-ರಾತ್ರಿ ಸ್ಥಳದಲ್ಲೇ ಉಳಿದು ಸಂತ್ರಸ್ತರ ಕಾಳಜಿ ವಹಿಸಿದ್ದಾರೆ’ ಎಂದು ಕಡತೋಕಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾವಿತ್ರಿ ಭಟ್ಟ ಪ್ರಶಂಸಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.