ADVERTISEMENT

ಪೂರ್ವ ಘಟ್ಟದ ‘ಕಳಿಂಗ ಕಪ್ಪೆ’ ಶಿರಸಿಯಲ್ಲಿ ಪತ್ತೆ

ಶಿರಸಿಯಲ್ಲಿ ಪತ್ತೆ ಹಚ್ಚಿದ ಜೀವ ವೈವಿಧ್ಯ ಸಂಶೋಧಕ ಅಮಿತ್ ಹೆಗಡೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2020, 15:48 IST
Last Updated 27 ಆಗಸ್ಟ್ 2020, 15:48 IST
ದೇಶದ ಪೂರ್ವ ಘಟ್ಟ ಭಾಗದಲ್ಲಿ ಕಾಣಸಿಗುವ ಕಳಿಂಗ ಕಪ್ಪೆ
ದೇಶದ ಪೂರ್ವ ಘಟ್ಟ ಭಾಗದಲ್ಲಿ ಕಾಣಸಿಗುವ ಕಳಿಂಗ ಕಪ್ಪೆ   

ಶಿರಸಿ: ದೇಶದ ಪೂರ್ವ ಘಟ್ಟ ಪ್ರದೇಶದಲ್ಲಿ ಮಾತ್ರ ಕಾಣಸಿಗುತ್ತಿದ್ದ ‘ಕಳಿಂಗ ಕಪ್ಪೆ’ಯನ್ನು ಜೀವ ವೈವಿಧ್ಯ ಸಂಶೋಧಕ ಅಮಿತ್ ಹೆಗಡೆ ಶಿರಸಿಯಲ್ಲಿ ಪತ್ತೆ ಹಚ್ಚಿದ್ದಾರೆ.

ಶಿರಸಿ ಭಾಗದಲ್ಲಿ ಕಳಿಂಗ ಕಪ್ಪೆ ಕಾಣಸಿಗುವ ಬಗ್ಗೆ ಅವರು ಸಂಶೋಧನೆ ನಡೆಸುತ್ತಿದ್ದರು. ಪೂರ್ವ ಘಟ್ಟ ಪ್ರದೇಶಗಳಿರುವ ಒಡಿಶಾ, ಆಂಧ್ರಪ್ರದೇಶ ಭಾಗದಲ್ಲಿ ಮಾತ್ರ ಈ ಪ್ರಭೇದದ ಕಪ್ಪೆಗಳು ಸಾಮಾನ್ಯವಾಗಿ ಕಾಣಸಿಗುತ್ತವೆ. ಪಶ್ಚಿಮ ಘಟ್ಟ ಪ್ರದೇಶದಲ್ಲೂ ಇವುಗಳು ಇರುವಿಕೆಯನ್ನು ಅವರು ಕಂಡುಹಿಡಿದಿದ್ದಾರೆ.

‘ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸಾಕಷ್ಟು ಬಗೆಯ ಕಪ್ಪೆಗಳಿವೆ. ಎರಡು ವರ್ಷಗಳಿಂದ ಕಪ್ಪೆಗಳ ಬಗ್ಗೆಯೇ ಪಿಎಚ್‌.ಡಿ ಅಧ್ಯಯನ ಮಾಡುತ್ತಿದ್ದೇನೆ. ಕಳಿಂಗ ಕಪ್ಪೆ ಮಾದರಿಯನ್ನು ಹೋಲುವ ಪ್ರಭೇದ ಶಿರಸಿ ಸುತ್ತಮುತ್ತ ಇರುವುದನ್ನು ಗಮನಿಸಿದ್ದೆ. ಇವುಗಳನ್ನು ಕೂಲಂಕಷವಾಗಿ ಪರೀಕ್ಷಿಸಿದಾಗ ‘ಕಳಿಂಗ ಕಪ್ಪೆ’ ಎಂದು ದೃಢಪಟ್ಟಿತು. ಈ ಪ್ರಭೇದದ ಕಪ್ಪೆಗಳು ಐತಿಹಾಸಿಕ ಕಳಿಂಗ ರಾಜ್ಯದಲ್ಲಿ (ಈಗಿನ ಒಡಿಶಾ) ಕಾಣಸಿಗುತ್ತಿದ್ದವು. ಈ ಕಾರಣಕ್ಕೆ ಇವುಗಳಿಗೆ ಕಳಿಂಗ ಕಪ್ಪೆ ಎಂಬ ಹೆಸರು ನೀಡಲಾಗಿದೆ’ ಎಂದು ಅಮಿತ್ ತಿಳಿಸಿದರು.

ADVERTISEMENT

‘ಪೂರ್ವ ಘಟ್ಟದ ಕಪ್ಪೆಗೂ, ಪಶ್ಚಿಮ ಘಟ್ಟದಲ್ಲಿ ಕಂಡುಬಂದಿರುವುದಕ್ಕೂ ಕೆಲವು ವ್ಯತ್ಯಾಸಗಳಿವೆ. ಶಿರಸಿ ಭಾಗದಲ್ಲಿ ಕಂಡುಬಂದ ಕಪ್ಪೆಗಳು ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿವೆ. ದೇಹ ವಿನ್ಯಾಸದಲ್ಲೂ ಗಮನಾರ್ಹ ಬದಲಾವಣೆಗಳಿವೆ. ಇದು ಪಶ್ಚಿಮ ಘಟ್ಟದಲ್ಲಿರುವ ಉಳಿದೆಲ್ಲ ಕಪ್ಪೆಗಳಿಗಿಂತ ವಿಭಿನ್ನ’ ಎಂದರು.

‘ನನ್ನ ಅನುಮಾನವನ್ನು ಪಿಎಚ್‌.ಡಿ ಮಾರ್ಗದರ್ಶಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರೊ.ಗಿರೀಶ ಕಾಡದೇವರ ಬಳಿ ವಿಚಾರಿಸಿ ಪರಿಹರಿಸಿಕೊಂಡೆ. ಪೂರ್ವ ಘಟ್ಟದಲ್ಲಿ ಕಾಣಸಿಗುವ ಕಪ್ಪೆ ಮತ್ತು ಇಲ್ಲಿ ಪತ್ತೆಯಾಗಿದ್ದರ ಡಿ.ಎನ್.ಎ ಬಾರ್‌ ಕೋಡಿಂಗ್ ಮಾಡಿದೆವು. ಆಗ ಎರಡೂ ಹೊಂದಾಣಿಕೆಯಾಯಿತು. ಹೀಗಾಗಿ ಇದು ಕಳಿಂಗ ಕಪ್ಪೆ ಎಂಬುದು ದೃಢಪಟ್ಟಿತು’ ಎಂದು ಅವರು ‘ಪ್ರಜಾವಾಣಿ‘ಗೆ ಮಾಹಿತಿ ನೀಡಿದರು.

ಕಪ್ಪೆ ಬಗ್ಗೆ ಅಧ್ಯಯನ:ಶಿರಸಿ ವರ್ಗಾಸರದವರಾದ ಅಮಿತ್ ಹೆಗಡೆ, ಕರ್ನಾಟಕ ವಿಶ್ವವಿದ್ಯಾಲಯದ ‘ಸಂತಾನೋತ್ಪತ್ತಿ ನಡವಳಿಕೆ ಮತ್ತು ಜೀವಸಂವಹನ ಪ್ರಯೋಗಾಲಯ‘ದ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಪಿಎಚ್‌.ಡಿ ಅಧ್ಯಯನ ಮಾಡುತ್ತಿದ್ದಾರೆ. ಪ್ರೊ.ಗಿರೀಶ ಕಾಡದೇವರು ಮಾರ್ಗದರ್ಶನ ಮಾಡುತ್ತಿದ್ದು, ಪುಣೆಯ ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾದ ಜೀವವಿಜ್ಞಾನಿ ಕೆ.ಪಿ.ದಿನೇಶ ಸಹಯೋಗ ನೀಡುತ್ತಿದ್ದಾರೆ. ಪಶ್ಚಿಮ ಘಟ್ಟದಲ್ಲಿ ಕಳಿಂಗ ಕಪ್ಪೆ ಕಾಣಸಿಗುವ ಕುರಿತು ಅಮಿತ್ ಬರೆದಿರುವ ಸಂಶೋಧನಾ ಪ್ರಬಂಧ ಅಂತರರಾಷ್ಟ್ರೀಯ ಜರ್ನಲ್‌ನಲ್ಲೂ ಪ್ರಕಟಗೊಂಡಿದೆ.

ಹವಾಮಾನ ವೈಪರೀತ್ಯದಿಂದ ಅನೇಕ ಜೀವವೈವಿಧ್ಯ ಅಳಿವಿನಂಚಿನಲ್ಲಿವೆ. ಹೊಸ ಪ್ರಭೇದಗಳೂ ಬೆಳಕಿಗೆ ಬರುತ್ತಿವೆ. ಇವುಗಳಲ್ಲಿ ಕಳಿಂಗ ಕಪ್ಪೆಯೂ ಒಂದು. ಈ ಬಗ್ಗೆ ವಿಸ್ತೃತ ಅಧ್ಯಯನದಿಂದ ಸಂರಕ್ಷಣೆ ಸಾಧ್ಯ ಎನ್ನುತ್ತಾರೆ ಸಂಶೋಧಕ ಅಮಿತ್ ಹೆಗಡೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.