ಸಿದ್ದಾಪುರ: ತಾಲ್ಲೂಕಿನ ಹುಕ್ಲಮಕ್ಕಿಯ ಕಮಲಾಕರ ಮಂಜುನಾಥ ಹೆಗಡೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ 2022ನೇ ಸಾಲಿನ ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
1938ರಲ್ಲಿ ಜನಿಸಿದ ಅವರು ತಮ್ಮ 12ನೇ ವಯಸ್ಸಿನಲ್ಲಿ ಯಕ್ಷಗಾನ ಕ್ಷೇತ್ರಕ್ಕೆ ಬಂದರು. ಪ್ರಸ್ತುತ 84 ವರ್ಷದ ಕಮಲಾಕರ ಹೆಗಡೆ 72 ವರ್ಷಗಳ ಸುದೀರ್ಘ ಸೇವೆಯನ್ನು ಯಕ್ಷಗಾನ ಕ್ಷೇತ್ರಕ್ಕೆ ಸಲ್ಲಿಸಿದ್ದಾರೆ.
ಯಕ್ಷಗಾನದಲ್ಲಿ ಪ್ರಸಿದ್ಧರಾದ ಗೋಡೆ ನಾರಾಯಣ ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಜೊತೆ ಅನೇಕ ಪಾತ್ರಗಳನ್ನು ನಿರ್ವಹಿಸಿದರು. ತಮ್ಮ 16ನೇ ವಯಸ್ಸಿನಲ್ಲಿ ರೈತ ಒಕ್ಕಲಿಗ ಸಮಾಜದಿಂದ ಬೆಳ್ಳಿ ಪದಕ, ತಾಳಗುಪ್ಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಅನೇಕ ಬಹುಮಾನ ಮತ್ತು ಪಾರಿತೋಷಕಗಳನ್ನು ಪಡೆದ ಕಮಲಾಕ ಹೆಗಡೆ ಕೇವಲ ಯಕ್ಷಗಾನ ಅಷ್ಟೇ ಅಲ್ಲದೆ ತಾಳಮದ್ದಲೆಯಲ್ಲೂ ಸಹ ಪ್ರವೀಣರು.
‘70ಕ್ಕೂ ಹೆಚ್ಚು ವರ್ಷಗಳ ಕಾಲ ಯಕ್ಷಗಾನಕ್ಕೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ಈ ಸೇವೆಯನ್ನು ಗುರುತಿಸಿ ಕರ್ನಾಟಕ ಯಕ್ಷಗಾನ ಅಕಾಡೆಮಿ ದತ್ತಿನಿಧಿ ಪ್ರಶಸ್ತಿ ನೀಡುತ್ತಿರುವುದು ಸಂತಸ ತಂದಿದೆ. ಇಂದಿನ ಯುವಕರು ಯಂತ್ರೋಪಕರಣಗಳಿಗೆ ಮಾರು ಹೋಗದೆ, ನಮ್ಮ ಸಂಸ್ಕೃತಿ, ಪರಂಪರೆ ಉಳಿಸುವ ಯಕ್ಷಗಾನವನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು’ ಎಂದು ಕಮಲಾಕರ ಹೆಗಡೆಯವರು ‘ಪ್ರಜಾವಾಣಿ’ಯೊಂದಿಗೆ ತಮ್ಮ ಸಂತಸ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.