ಜೊಯಿಡಾ: ಕಾರ್ತಿಕ ದ್ವಾದಶಿಯ ಮಾರನೇ ದಿನ ತುಳಸಿ ಹಬ್ಬದ ಪ್ರಯುಕ್ತ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಇಲ್ಲಿನ ಗಾವಡೆವಾಡಾದಲ್ಲಿ ಖಾಫ್ರಿ ಜಾತ್ರೆ ವಿಜೃಂಭಣೆಯಿಂದ ನಡೆಯಿತು. ದೇವರಿಗೆ ಕಂಬಳಿ ಅರ್ಪಿಸುವುದು ಇದರ ವಿಶೇಷ.
ತಾಲ್ಲೂಕಿನ ಬುಡಕಟ್ಟು ಕುಣಬಿ ಸಮುದಾಯದ ಸಂಪ್ರದಾಯದಂತೆ ನಡೆಯುವ ಈ ಜಾತ್ರೆಯನ್ನು ಬೆಳಿಗ್ಗೆ ಗ್ರಾಮದ ಬುಧವಂತರ ಮನೆಯ ಅಂಗಳದಲ್ಲಿರುವ ತುಳಸಿ ಕಟ್ಟೆಯನ್ನು ಹೂಗಳಿಂದ ಅಲಂಕರಿಸಿ ಖಾಫ್ರಿ ದೇವರನ್ನು ಪ್ರಾರ್ಥಿಸಿ ಪೂಜೆ ಸಲ್ಲಿಸಿ, ಸೂರ್ಯದೇವರನ್ನು ನೆನೆಯುತ್ತಾ ಕುಣಬಿ ಜಾನಪದ ಹಾಡುಗಳನ್ನು ಹಾಡತ್ತಾರೆ.
ಮಧ್ಯಾಹ್ನ 12 ಗಂಟೆಗೆ ಮೈಗೆ ಸಂಪೂರ್ಣವಾಗಿ ಕಂಬಳಿಗಳನ್ನು ಸುತ್ತಿಕೊಂಡು ಹಾಗೂ ಚೆಂಡು ಹೂವುಗಳಿಂದ ಶೃಂಗರಿಸಿದ ಖಾಫ್ರಿ ಮತ್ತು ಜಲ್ಮಿ ಎಂಬ ಎರಡು ದೇವರುಗಳು ಕೈಯಲ್ಲಿ ಒನಕೆ ಹಿಡಿದು ತುಳಸಿ ಕಟ್ಟೆಯನ್ನು ಪ್ರವೇಶಿಸುತ್ತಾರೆ, ಭಕ್ತರ ಜಯ ಘೋಷ ಮುಗಿಲು ಮುಟ್ಟುತ್ತದೆ.
ಈ ಸಂದರ್ಭದಲ್ಲಿ ಕಂಸಾಳೆ ವಾದ್ಯಗಳನ್ನು ತಾಳ ಮದ್ದಳೆ ಬಾರಿಸುತ್ತಾ ಕಹಳೆ ಊದುತ್ತಾ ತುಳಸಿ ಕಟ್ಟೆ ಸುತ್ತುವ ದೇವರುಗಳು ಜಾನಪದ ಹಾಡುಗಳಿಗೆ ಹೆಜ್ಜೆ ಹಾಕಿ ಕುಣಿಯುವ ದೃಶ್ಯ ನೋಡುಗರನ್ನು ಆಕರ್ಷಿಸುತ್ತದೆ. ಈ ದೃಶ್ಯ ನೋಡಲು ವಿವಿಧ ಭಾಗಗಳಿಂದ ಬಂದ ಸಾವಿರಾರು ಭಕ್ತರು ಬೆಳಿಗ್ಗೆ 7 ಗಂಟೆಯಿಂದಲೇ ಕಾತುರದಿಂದ ಮುಗಿಬಿದ್ದು ಕಾದು ಕುಳಿತಿದ್ದರು.
ಸ್ಥಳೀಯರು ಅಷ್ಟೇ ಅಲ್ಲದೆ ಜೊಯಿಡಾದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರು, ವರ್ಗಾವಣೆ ಆದವರು, ನಿವೃತ್ತರಾದರು, ಜೊತೆಗೆ ವಿವಿಧ ಹಳ್ಳಿಗಳ ಜನರು ಹರಕೆ ಹೊತ್ತು ದೇವರಿಗೆ ಕಂಬಳಿ ಮತ್ತು ಪ್ರಸಾದಕ್ಕೆ ಮಂಡಕ್ಕಿಯನ್ನು ನೀಡುತ್ತಾರೆ.
ಖಾಫ್ರಿಯನ್ನು ಗಡಿ ಕಾಯುವ ದೇವರೆಂದು ಕರೆಯಲಾಗುತ್ತದೆ. ಪ್ರತಿ ಹಂತದಲ್ಲೂ ನಮ್ಮ ಹೊಲ ಗದ್ದೆಗಳನ್ನು ಕಾಯುತ್ತಾರೆ ಎಂಬ ನಂಬಿಕೆ ಇದೆ. ಜಾತ್ರೆಯ ದಿನ ರಾತ್ರಿ ಯಾರೂ ಗದ್ದೆಗೆ ಬೆಳೆ ಕಾಯಲು ಹೋಗುವುದಿಲ್ಲ, ಚಪ್ಪರದಲ್ಲಿ ಬೆಂಕಿ ಹಚ್ಚಿ ಬರುತ್ತಾರೆ. ಹಿಂದೆ ಹೊಲಕ್ಕೆ ಹೋದವರನ್ನು ದೇವರು ಓಡಿಸಿದ್ದ ಘಟನೆ ನಡೆದಿದೆ ಎಂದು ಹಿರಿಯರು ಹೇಳುತ್ತಾರೆ ಎನ್ನುತ್ತಾರೆ ಸ್ಥಳೀಯ ಸುರೇಶ ಗಾವಡಾ.
ಆರಂಭದಲ್ಲಿ ಗಾವಡೆವಾಡ ಗ್ರಾಮಕ್ಕೆ ಸೀಮಿತವಾಗಿದ್ದ ಜಾತ್ರೆಗೆ ಈಗ ತಾಲ್ಲೂಕಿನ ಬಹುತೇಕ ಕಡೆಯಿಂದ ಹಾಗೇ ಕಾರವಾರ, ಹಳಿಯಾಳ, ಬೆಳಗಾವಿ ಮತ್ತು ನೆರೆಯ ಗೋವಾ ರಾಜ್ಯದಿಂದಲೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.