ADVERTISEMENT

ಭುವನಗಿರಿ: ‘ಕನ್ನಡ ರಥ ಯಾತ್ರೆ’ಗೆ ಚಾಲನೆ ಇಂದು

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 16:19 IST
Last Updated 30 ನವೆಂಬರ್ 2022, 16:19 IST
ಹಾವೇರಿಯಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಭಾಗವಾಗಿ ನಾಡಿನಾದ್ಯಂತ ಸಂಚರಿಸಲಿರುವ ‘ಕನ್ನಡ ರಥ’
ಹಾವೇರಿಯಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಭಾಗವಾಗಿ ನಾಡಿನಾದ್ಯಂತ ಸಂಚರಿಸಲಿರುವ ‘ಕನ್ನಡ ರಥ’   

ಕಾರವಾರ: ಹಾವೇರಿಯಲ್ಲಿ ಜ.6, 7 ಮತ್ತು 8ರಂದು ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಭಾಗವಾಗಿ ನಾಡಿನಾದ್ಯಂತ ಕನ್ನಡ ಜ್ಯೋತಿ ಇರುವ ‘ಕನ್ನಡ ರಥ ಯಾತ್ರೆ’ ಸಂಚರಿಸಲಿದೆ. ಇದಕ್ಕೆ ಸಿದ್ದಾಪುರ ತಾಲ್ಲೂಕಿನ ಭುವನಗಿರಿಯ ಭುವನೇಶ್ವರಿ ದೇವಸ್ಥಾನದ ಆವರಣದಲ್ಲಿ ಡಿ.1ರಂದು ಬೆಳಿಗ್ಗೆ 10.30ಕ್ಕೆ ಚಾಲನೆ ನೀಡಲಾಗುತ್ತದೆ.

ಮಾಹಿತಿ ನೀಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್.ವಾಸರೆ, ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನಿಲ್ ಕುಮಾರ್, ಕಾರ್ಮಿಕ ಇಲಾಖೆ ಸಚಿವ ಶಿವರಾಮ ಹೆಬ್ಬಾರ್, ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಡಾ.ಮಹೇಶ ಜೋಶಿ, ಪರಿಷತ್ತಿನ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ.ಲಿಂಗಯ್ಯ ಭಾಗವಹಿಸಲಿದ್ದಾರೆ’ ಎಂದರು.

‘ಉತ್ತರ ಕನ್ನಡದ ಕೆಲವು ತಾಲ್ಲೂಕುಗಳು ಸೇರಿದಂತೆ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ರಥವು ಸಂಚರಿಸಲಿದೆ. ಪ್ರತಿ ಜಿಲ್ಲೆಗಳಲ್ಲಿಯೂ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರು, ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು ರಥವನ್ನು ಸ್ವಾಗತಿಸಲಿದ್ದಾರೆ. ಅಂತಿಮವಾಗಿ ಹಾವೇರಿ ತಲುಪಲಿದ್ದು, ಈ ರಥದೊಳಗಿನ ದೀಪದಿಂದಲೇ ಹಾವೇರಿಯ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಲಾಗುತ್ತದೆ ಎಂದು ಮಹೇಶ ಜೋಶಿ ಮಾಹಿತಿ ನೀಡಿದ್ದಾರೆ’ ಎಂದು ಹೇಳಿದರು.

ADVERTISEMENT

ರಥದ ಮಾರ್ಗ:

ಕನ್ನಡ ರಥದ ಸಂಚಾರಕ್ಕೆಡಿ.1ರಂದು ಬೆಳಿಗ್ಗೆ 10.30ಕ್ಕೆ ಭುವನಗಿರಿಯಲ್ಲಿ ಚಾಲನೆ ಸಿಕ್ಕಿದ ನಂತರ, ಅಂದು ಮಧ್ಯಾಹ್ನ 12 ಗಂಟೆಗೆ ಸಿದ್ದಾಪುರ ಪಟ್ಟಣಕ್ಕೆ ಬರಲಿದೆ. ಮಧ್ಯಾಹ್ನ 2 ಗಂಟೆಗೆ ಶಿರಸಿ ಪ್ರವೇಶಿಸಿ, ಸಂಜೆ 4ಕ್ಕೆ ಯಲ್ಲಾಪುರಕ್ಕೆ ತಲುಪಲಿದೆ. ಅಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮ ನಡೆಯಲಿದೆ.

ಡಿ.2ರಂದು ಯಲ್ಲಾಪುರದಿಂದ ಹೊರಟು ಮಧ್ಯಾಹ್ನ 12ಕ್ಕೆ ಹಳಿಯಾಳಕ್ಕೆ ಹೋಗಲಿದೆ. ನಂತರ ಅಲ್ಲಿಂದ ಅಳ್ನಾವರ ಮಾರ್ಗವಾಗಿ ಬೆಳಗಾವಿಗೆ ಮುಂದುವರಿಯಲಿದೆ ಎಂದು ಬಿ.ಎನ್. ವಾಸರೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.