ADVERTISEMENT

‘ಕರಾವಳಿ ಉತ್ಸವ’ಕ್ಕೆ ‘ಶಿರೂರು ದುರಂತ’ ಅಡ್ಡಿ?

2018ರಲ್ಲಿ ಆಚರಣೆಯಾಗಿದ್ದೇ ಕೊನೆ: ಪ್ರತಿಷ್ಠಿತ ಉತ್ಸವಕ್ಕೆ ಒಂದಲ್ಲ ಒಂದು ವಿಘ್ನ

ಗಣಪತಿ ಹೆಗಡೆ
Published 24 ಅಕ್ಟೋಬರ್ 2024, 5:35 IST
Last Updated 24 ಅಕ್ಟೋಬರ್ 2024, 5:35 IST
2018ರಲ್ಲಿ ಕಾರವಾರದ ಟ್ಯಾಗೋರ್ ಕಡಲತೀರದ ಮಯೂರವರ್ಮ ವೇದಿಕೆಯಲ್ಲಿ ನಡೆದಿದ್ದ ಕರಾವಳಿ ಉತ್ಸವದ ಕೊನೆಯ ಕಾರ್ಯಕ್ರಮದಲ್ಲಿ ಬಾಲಿವುಡ್ ಗಾಯಕಿ ನೀತಿ ಮೋಹನ್ ಹಾಡಿಗೆ ಮಕ್ಕಳು ವೇದಿಕೆ ಏರಿ ನರ್ತಿಸಿದ್ದರು
2018ರಲ್ಲಿ ಕಾರವಾರದ ಟ್ಯಾಗೋರ್ ಕಡಲತೀರದ ಮಯೂರವರ್ಮ ವೇದಿಕೆಯಲ್ಲಿ ನಡೆದಿದ್ದ ಕರಾವಳಿ ಉತ್ಸವದ ಕೊನೆಯ ಕಾರ್ಯಕ್ರಮದಲ್ಲಿ ಬಾಲಿವುಡ್ ಗಾಯಕಿ ನೀತಿ ಮೋಹನ್ ಹಾಡಿಗೆ ಮಕ್ಕಳು ವೇದಿಕೆ ಏರಿ ನರ್ತಿಸಿದ್ದರು   

ಕಾರವಾರ: ಕೋವಿಡ್, ಬರಗಾಲ, ಹೀಗೆ ನಾನಾ ಕಾರಣದಿಂದ ಕಳೆದ ಆರು ವರ್ಷಗಳಿಂದ ಆಚರಣೆಯಾಗದ ‘ಕರಾವಳಿ ಉತ್ಸವ’ ಈ ವರ್ಷದಲ್ಲಾದರೂ ಆಚರಣೆಯಾಗಬಹುದೇ? ಎಂಬ ಜನರ ಪ್ರಶ್ನೆಗೆ ಖಚಿತ ಉತ್ತರ ನೀಡಲು ಜಿಲ್ಲಾಡಳಿತಕ್ಕೂ ಸಾಧ್ಯವಾಗುತ್ತಿಲ್ಲ.

1990ರ ದಶಕದಿಂದ ಜಿಲ್ಲೆಯ ಅದ್ದೂರಿ ಸಾಂಸ್ಕೃತಿಕ ಉತ್ಸವವಾಗಿ ಆಚರಣೆ ಆಗುತ್ತಿರುವ ಕರಾವಳಿ ಉತ್ಸವ 2018ರ ಬಳಿಕ ಪುನಃ ಆಚರಣೆಯಾಗಿಲ್ಲ. 2018ರಲ್ಲಿ ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಕೊನೆಯ ಬಾರಿಗೆ ಉತ್ಸವ ಆಚರಿಸಲ್ಪಟ್ಟಿತ್ತು. ಆ ಬಳಿಕ ಅತಿವೃಷ್ಟಿ, ನಂತರ ಎದುರಾದ ಕೋವಿಡ್ ಪರಿಸ್ಥಿತಿಯ ಕಾರಣದಿಂದ ಉತ್ಸವ ಆಚರಣೆ ಕೈಬಿಡಲಾಗಿತ್ತು. 2022, 2023ರಲ್ಲಿ ಜಿಲ್ಲೆಯ ಇನ್ನೊಂದು ಪ್ರತಿಷ್ಠಿತ ಉತ್ಸವ ಆಗಿರುವ ‘ಕದಂಬೋತ್ಸವ’ ಆಚರಿಸಲ್ಪಟ್ಟರೂ, ಕರಾವಳಿ ಉತ್ಸವ ಆಚರಣೆಯಾಗಿರಲಿಲ್ಲ.

2019 ಮತ್ತು 2020ರಲ್ಲಿ ಅತಿವೃಷ್ಟಿಯಿಂದ ಉಂಟಾದ ಪ್ರವಾಹ ಸ್ಥಿತಿಯ ಕಾರಣಕ್ಕೆ ಉತ್ಸವ ಆಯೋಜನೆ ಕೈಬಿಡಲಾಗಿತ್ತು. ಈ ಬಾರಿ ಅತಿವೃಷ್ಟಿಯಿಂದ ಉಂಟಾದ ಶಿರೂರು ದುರಂತ, ನೆರೆ ಹಾವಳಿ ಉತ್ಸವ ಆಚರಣೆಗೆ ಅಡ್ಡಿಯಾಗುವ ಸಾಧ್ಯತೆ ಅಲ್ಲಗಳೆಯಲಾಗದು ಎಂಬ ಚರ್ಚೆಯೂ ನಡೆದಿದೆ.

ADVERTISEMENT

‘1994ರಲ್ಲಿ ಆರಂಭಗೊಂಡಿದ್ದ ಪ್ರತಿಷ್ಠಿತ ಉತ್ಸವ ಈವರೆಗೆ 14 ಬಾರಿ ನಡೆದಿದೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಅವಧಿಯಲ್ಲಿ ಮಾತ್ರ ಉತ್ಸವ ಆಚರಣೆ ಆಗುತ್ತಿರಲಿಲ್ಲ ಎಂಬುದಕ್ಕೆ 2008 ರಿಂದ 2013 ಮತ್ತು 2019 ರಿಂದ 2023ರ ಅವಧಿಯಲ್ಲಿ ಉತ್ಸವ ನಡೆಯಸದಿರುವುದು ಪುಷ್ಟಿ ನೀಡಿದೆ. 2013 ರಿಂದ 2018ರ ವರೆಗೆ ಸತತ ಐದು ವರ್ಷವೂ ಉತ್ಸವ ಆಯೋಜನೆಗೊಂಡಿತ್ತು. ಆರು ವರ್ಷದಿಂದ ಉತ್ಸವ ನಡೆಸದೆ ಜನತೆಗೆ ನಿರಾಸೆಯಾಗಿದೆ’ ಎನ್ನುತ್ತಾರೆ ಕೋಡಿಬಾಗದ ಕೃಷ್ಣಾನಂದ ನಾಯ್ಕ.

‘ಕಾರವಾರದ ಸ್ಥಳೀಯ ಕಲಾವಿದರು ಸೇರಿದಂತೆ ಜಿಲ್ಲೆಯ ಕಲಾವಿದರಿಗೆ ಉತ್ಸವದಲ್ಲಿ ವೇದಿಕೆ ಸಿಗುತ್ತಿತ್ತು. ರಾಜ್ಯಮಟ್ಟದಲ್ಲಿ ಗಮನಸೆಳೆಯುವ ಉತ್ಸವ ಆಗಿದ್ದರಿಂದ ಸಹಜವಾಗಿ ಕಲಾವಿದರಿಗೆ ಪ್ರತಿಭೆ ಪ್ರದರ್ಶನಕ್ಕೆ ಅದೊಂದು ಸದವಕಾಶ ಆಗಿತ್ತು. ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಕಲಾವಿದರನ್ನು ಕರೆಯಿಸಿ ಕಾರ್ಯಕ್ರಮ ಏರ್ಪಡಿಸುತ್ತಿದ್ದ ಕಾರಣಕ್ಕೆ ಸಾವಿರಾರು ಜನರಿಗೆ ಮನರಂಜನೆಯೂ ಸಿಗುತ್ತಿತ್ತು. ದೀರ್ಘ ಕಾಲದಿಂದ ಇವೆಲ್ಲ ಅವಕಾಶದಿಂದ ಜಿಲ್ಲೆಯ, ಅದರಲ್ಲಿಯೂ ವಿಶೇಷವಾಗಿ ಕರಾವಳಿ ಭಾಗದ ಜನ ವಂಚಿತರಾಗಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಹಿಂದಿನ ಸರ್ಕಾರದ ಅವಧಿಯಲ್ಲಿ ಒಮ್ಮೆಯೂ ಕರಾವಳಿ ಉತ್ಸವ ನಡೆದಿರಲಿಲ್ಲ. ಈ ಬಾರಿ ಡಿಸೆಂಬರ್ ಅಥವಾ ಜನವರಿಯಲ್ಲಿ ಉತ್ಸವ ಆಯೋಜಿಸಲು ಸಚಿವರೊಂದಿಗೆ ಚರ್ಚಿಸಿ ತೀರ್ಮಾನಿಸಲಿದ್ದೇವೆ
ಸತೀಶ ಸೈಲ್ ಶಾಸಕ
ಅನುದಾನ ಹೊಂದಿಸುವ ಸವಾಲು
ಈವರೆಗೆ ನಡೆದ ಕರಾವಳಿ ಉತ್ಸವ ಬಹುತೇಕ ಡಿಸೆಂಬರ್ ಮತ್ತು ಜನವರಿ ತಿಂಗಳಿನಲ್ಲಿಯೇ ನಡೆದಿದೆ. ಉತ್ಸವದ ಆಚರಣೆಗೆ ಮೂರು ತಿಂಗಳು ಹಿಂದಿನಿಂದಲೇ ಸಿದ್ಧತೆ ನಡೆಯುತ್ತಿತ್ತು. ಹಳಿಯಾಳ ಶಾಸಕರಾಗಿರುವ ಆರ್.ವಿ.ದೇಶಪಾಂಡೆ ಸಚಿವರಾಗಿದ್ದ ಅವಧಿಯಲ್ಲೆಲ್ಲ ಉತ್ಸವ ನಡೆದಿದೆ ಎಂಬುದನ್ನು ಹಲವರು ಸ್ಮರಿಸುತ್ತಾರೆ. ‘ಶಿರೂರು ದುರಂತದ ಛಾಯೆ ಇನ್ನೂ ಮಾಸಿಲ್ಲ. ಕರಾವಳಿ ಉತ್ಸವ ಸರ್ಕಾರದಿಂದ ಆಚರಣೆಯಾಗುವ ಅಧಿಕೃತ ಉತ್ಸವ ಅಂತೂ ಅಲ್ಲ. ಗ್ಯಾರಂಟಿ ಯೋಜನೆ ಕಾರಣದಿಂದ ಅಧಿಕೃತ ಅಲ್ಲದ ಉತ್ಸವಗಳಿಗೆ ಅನುದಾನ ಹೊಂದಾಣಿಕೆ ಸವಾಲಾಗಬಹುದು. ಇವೆಲ್ಲ ಕಾರಣದಿಂದ ಉತ್ಸವ ಆಚರಣೆಗೆ ಅಡ್ಡಿ ಆಗಬಹುದು’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.