ADVERTISEMENT

ಕಾರವಾರ | ಕಾಡಂಚಿನ ಜಮೀನುಗಳಲ್ಲಿ ಹೆಚ್ಚಿದ ಹಾವಳಿ: ರೈತರ ಫಸಲು ವನ್ಯಜೀವಿ ಪಾಲು

ಗಣಪತಿ ಹೆಗಡೆ
Published 18 ನವೆಂಬರ್ 2024, 5:12 IST
Last Updated 18 ನವೆಂಬರ್ 2024, 5:12 IST
ಹಳಿಯಾಳ ತಾಲ್ಲೂಕಿನ ಭಾಗವತಿ ಗ್ರಾಮದಲ್ಲಿ ಕಾಡಾನೆಗಳ ದಾಳಿಗೆ ತುತ್ತಾಗಿ ಕಬ್ಬಿನ ಸಸಿಗಳು ಹಾಳಾಗಿರುವುದು
ಹಳಿಯಾಳ ತಾಲ್ಲೂಕಿನ ಭಾಗವತಿ ಗ್ರಾಮದಲ್ಲಿ ಕಾಡಾನೆಗಳ ದಾಳಿಗೆ ತುತ್ತಾಗಿ ಕಬ್ಬಿನ ಸಸಿಗಳು ಹಾಳಾಗಿರುವುದು   

ಕಾರವಾರ: ಕೃಷಿ ಭೂಮಿಗಿಂತ ಅರಣ್ಯವೇ ಹೆಚ್ಚಿರುವ ಉತ್ತರ ಕನ್ನಡದಲ್ಲಿ ರೈತರ ಜಮೀನುಗಳಿಗೆ ವನ್ಯಜೀವಿಗಳು ನುಗ್ಗಿ ಹಾವಳಿ ಉಂಟುಮಾಡುವ ಪ್ರಕರಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದು ರೈತರನ್ನು ಚಿಂತೆಗೆ ತಳ್ಳಿದೆ.

ದಾಖಲೆಯ ಪ್ರಕಾರ ಜಿಲ್ಲೆಯ ಶೇ 80 ರಷ್ಟು ಅರಣ್ಯ ಭೂಮಿ ಇದ್ದರೂ, ಅವುಗಳನ್ನು ಒತ್ತುವರಿ ಮಾಡಿ ಕೃಷಿ ಭೂಮಿ ವಿಸ್ತರಣೆ ಮಾಡುತ್ತಿರುವ ಕಾರಣದಿಂದಲೇ ವನ್ಯಜೀವಿಗಳ ಹಾವಳಿ ಹೆಚ್ಚುತ್ತಿದೆ ಎಂಬುದಾಗಿ ವನ್ಯಜೀವಿ ತಜ್ಞರು ಹೇಳುತ್ತಾರೆ.

ಲಕ್ಷಾಂತರ ವ್ಯಯಿಸಿ, ಸಾಲಸೋಲ ಮಾಡಿ ಕೃಷಿ ಮಾಡುವ ರೈತರಿಗೆ ಫಸಲು ಕೈಸೇರುವ ಹೊತ್ತಲ್ಲಿ ಪ್ರಾಣಿಗಳ ಪಾಲಾಗುತ್ತಿರುವುದು ಬೇಸರ ತರಿಸಿದೆ. ಅಲ್ಲದೇ, ಸಾಲದ ಹೊರೆ ಹೆಚ್ಚುವಂತೆ ಮಾಡಿದೆ. ಅರಣ್ಯ ಇಲಾಖೆ ಪರಿಹಾರ ನೀಡುತ್ತಿದ್ದರೂ ಪರಿಹಾರದ ಮಾನದಂಡ, ಕಡಿಮೆ ಮೊತ್ತದ ಪರಿಹಾರಕ್ಕೆ ರೈತರು ಅಪಸ್ವರ ವ್ಯಕ್ತಪಡಿಸುತ್ತಲೇ ಇದ್ದಾರೆ.

ADVERTISEMENT

ಕರಾವಳಿ ಭಾಗದಲ್ಲಿ ಅಡಿಕೆ, ತೆಂಗುಗಳಿಗೆ ಮಂಗನ ಕಾಟ, ಕಾಡುಹಂದಿಯ ಕಾಟ ಹೆಚ್ಚಿದೆ. ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ಮಂಗ, ಕಾಡುಹಂದಿ ಕಾಟದ ಜತೆಗೆ ಕಾಡಾನೆಗಳ ಹಾವಳಿ ಮಿತಿಮೀರುತ್ತಿದೆ. ಪ್ರತಿ ವರ್ಷ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಕಾಡುಪ್ರಾಣಿಗಳ ಹಾವಳಿಯಿಂದಲೇ ಬೆಳೆನಷ್ಟ ಉಂಟಾಗುತ್ತಿದೆ ಎಂಬುದಾಗಿ ರೈತರು ಹೇಳುತ್ತಾರೆ.

ಶಿರಸಿ ತಾಲ್ಲೂಕಿನ ಕೃಷಿ ಜಮೀನುಗಳಿಗೆ ವನ್ಯಜೀವಿಗಳ ಹಾವಳಿ ಹೆಚ್ಚಿದೆ. ಹಗಲು ಹೊತ್ತಿನಲ್ಲೇ ಕೃಷಿ ಜಮೀನಿನಲ್ಲಿ ದಾಂಧಲೆ ನಡೆಸುತ್ತಿವೆ. ಕಾಡಾನೆ, ಕಡವೆ, ಕಾಡೆಮ್ಮೆ, ಮೊಲ, ಮಂಗ, ಹಂದಿಗಳ ಹಾವಳಿಯಿಂದಾಗಿ ಸಾಗುವಳಿ ಜಮೀನಿಗೆ ಹಾನಿಯ ಜತೆಗೆ ಲಕ್ಷಾಂತರ ಮೌಲ್ಯದ ಬೆಳೆ ನಷ್ಟವಾಗುತ್ತಿದೆ ಎಂಬುದು ರೈತರ ದೂರು.

‘ವನ್ಯಜೀವಿಗಳಿಂದಾಗುವ ಬೆಳೆ, ಸಾಗುವಳಿ ಜಮೀನು ಹಾನಿಗೆ ರೈತರು ನೇರವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಪರಿಹಾರ ಧನ ಪಡೆಯಬಹುದು. ಅಡಿಕೆ ಮರಕ್ಕೆ ಹಾನಿಯಾದರೆ ಪರಿಹಾರ ನೀಡಬಹುದು. ಹಿಂಗಾರು ಹಂತದಲ್ಲೇ ಅಡಿಕೆ ಬೆಳೆಹಾನಿಗೆ ಪರಿಹಾರಧನ ನೀಡಲು ತಾಂತ್ರಿಕ ಸಮಸ್ಯೆ ಇದೆ’ ಎಂಬುದಾಗಿ ಶಿರಸಿ ಡಿಸಿಎಫ್ ಜಿ.ಆರ್.ಅಜ್ಜಯ್ಯ ಹೇಳುತ್ತಾರೆ.

ಭಟ್ಕಳ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕಾಡುಹಂದಿ ಹಾಗೂ ಮಂಗಗಳ ಕಾಟದಿಂದಾಗಿ ರೈತರು ಕಂಗೆಟ್ಟು ಹೋಗಿದ್ದಾರೆ. ಕಾಡು ಹಂದಿಗಳ ಹಾವಳಿಯಿಂದಾಗಿ ಗ್ರಾಮೀಣ ಭಾಗದಲ್ಲಿ ಜನರು ಓಡಾಡಲು ಭಯ ಪಡುವಂತಹ ಸನ್ನಿವೇಶವಿದೆ.

ಮುಂಡಗೋಡ ತಾಲ್ಲೂಕಿನಲ್ಲಿ ಬೆಳೆ ಕೊಯ್ಲು ಬಂದಂತ ಸಮಯದಲ್ಲಿ ವನ್ಯಪ್ರಾಣಿಗಳ ಹಾವಳಿ ನಿರಂತರವಾಗಿದೆ. ಬಡ್ಡಿಗೇರಿ, ಬ್ಯಾನಳ್ಳಿ, ಮೈನಳ್ಳಿ,  ಕಳಕಿಕೇರಾ, ಗೋದ್ನಾಳ, ಚವಡಳ್ಳಿ, ಕೂರ್ಲಿ, ಮಳಗಿ, ಕೊಳಗಿ ಸೇರಿದಂತೆ ಇನ್ನಿತರ ಗ್ರಾಮಗಳ ಗದ್ದೆ, ತೋಟಗಳಿಗೆ ಗಜಪಡೆ ಪ್ರತಿ ವರ್ಷ ನುಗ್ಗಿ, ಬೆಳೆ ತಿಂದು, ತುಳಿದು ಹಾನಿ ಮಾಡುತ್ತಿವೆ. ಬೆಡಸಗಾಂವ್‌, ಸನವಳ್ಳಿ, ಕಾತೂರ ವ್ಯಾಪ್ತಿಯ ಗದ್ದೆಗಳಲ್ಲಿ ಕಾಡುಹಂದಿಗಳ ಹಾವಳಿ ಮಿತಿಮೀರಿದೆ.

‘ಕೆಲವು ದಿನಗಳ ಹಿಂದೆ ಗಜಪಡೆಯು ಅಲ್ಲಲ್ಲಿ ಪ್ರತ್ಯಕ್ಷವಾಗಿದ್ದು, ಕೆಲವೆಡೆ ಭತ್ತ, ಬಾಳೆ, ಕಬ್ಬು ಹಾನಿಯಾದ ವರದಿಯಾಗಿದೆ. ದಾಂಡೇಲಿಯ ವನ್ಯಜೀವಿ ಸಂಶೋಧನಾ ಕೇಂದ್ರದ ನಿತ್ಯದ ಮಾಹಿತಿಯನ್ನು ಆಧರಿಸಿ, ಕಾಡಾನೆಗಳ ಚಲವಲನದ ಮೇಲೆ ನಿಗಾ ಇರಿಸಲಾಗುತ್ತಿದೆ’ ಎಂದು ಆರ್.ಎಫ್.ಒ ವಾಗೀಶ ಬಿ.ಜೆ ಹೇಳುತ್ತಾರೆ.

ಯಲ್ಲಾಪುರ ತಾಲ್ಲೂಕಿನ ವಿವಿಧೆಡೆ ಅಡಿಕೆಗೆ ಮಂಗನ ಕಾಟ, ತೆಂಗಿನ ಬೆಳೆಗೆ ಅಳಿಲು ಮತ್ತು ಮಂಗಗಳ ಕಾಟ ಹೆಚ್ಚಿದೆ. ಮದನೂರು, ಅಲ್ಕೇರಿ, ಖಂಡ್ರನಕೊಪ್ಪ, ಮಾದೇವಕೊಪ್ಪ ಭಾಗದಲ್ಲಿ ನಾಲ್ಕೈದು ಆನೆಗಳು ನಿರಂತರ ಗದ್ದೆ, ತೋಟಕ್ಕೆ ಲಗ್ಗೆ ಇಟ್ಟು ಫಸಲನ್ನು ಹಾಳುಮಾಡುತ್ತಿರುವ ದೂರುಗಳಿವೆ.

ಕುಮಟಾ ಕಾಡು ಪ್ರಾಣಿಗಳಿಂದ ಬೆಳೆ ಹಾನಿಯ ಜೊತೆ ಮನುಷ್ಯನ ಪ್ರಾಣಕ್ಕೂ ಅಪಾಯ ಎದುರಾಗುವ ಪ್ರಸಂಗ ಬರುತ್ತಿರುವ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಎದುರಾಗಿದೆ.

‘ಕಾಡಿನಲ್ಲಿ ಪ್ರಾಣಿಗಳ ಸೌಲಭ್ಯ ನಾಶವಾಗಿದ್ದರಿಂದ ಮಾನವ-ವನ್ಯಜೀವಿ ಸಂಘರ್ಷ ತಾರಕಕ್ಕೇರಿದೆ’ ಎಂಬುದು ಕುಮಟಾ ಆರ್.ಎಫ್.ಒ ಪ್ರವೀಣ ನಾಯಕ ಅವರ ಪ್ರತಿಕ್ರಿಯೆ.‌

ಸಿದ್ದಾಪುರ ತಾಲ್ಲೂಕು ಹೆಚ್ಚು ಅರಣ್ಯ ಪ್ರದೇಶದಿಂದ ಕೂಡಿದ್ದು ರೈತರಿಗೆ ಕಾಡು ಪ್ರಾಣಿಗಳಿಂದ ತೊಂದರೆ ಉಂಟಾಗುತ್ತಿದೆ. ಈಚೆಗೆ ಕಾಡಾನೆಗಳು ತಾಲ್ಲೂಕಿನ ಕೆಲವೆಡೆ ಕಾಣಿಸಿಕೊಂಡ ಘಟನೆ ನಡೆದಿದೆ. ಇದರಿಂದ ಅಲ್ಲಲ್ಲಿ ಜಮೀನುಗಳಿಗೆ ಹಾನಿಯುಂಟಾದ ದೂರುಗಳಿವೆ.

‘ಕಾಡಾನೆಗಳು ಕಾಣಿಸಿಕೊಂಡ ಜಾಗಗಳು ಆನೆ ಕಾರಿಡಾರ್ ವ್ಯಾಪ್ತಿಯ ಪ್ರದೇಶವಾಗಿದೆ. ಆನೆಗಳು 2–3 ವರ್ಷಕ್ಕೊಮ್ಮೆ ಈ ದಾರಿಯಲ್ಲಿ ಸಾಗುತ್ತವೆ’ ಎಂದು ಆರ್.ಎಫ್.ಒ ಅಜಯ ಕುಮಾರ ಹೇಳುತ್ತಾರೆ.

ಹೊನ್ನಾವರ ತಾಲ್ಲೂಕಿನಲ್ಲಿ ಕಾಡುಪ್ರಾಣಿಗಳ ಹಾವಳಿ ವಿಪರೀತವಾಗಿದೆ. ಹಗಲಿನಲ್ಲಿ ಮಂಗಗಳು ತೋಟಕ್ಕೆ ಲಗ್ಗೆ ಇಟ್ಟು ಅಡಿಕೆ ಮಿಳ್ಳೆ, ತೆಂಗು ಹಾಗೂ ಬಾಳೆಕಾಯಿಯನ್ನು ತಿಂದು ಹಾನಿ ಮಾಡುತ್ತಿವೆ. ರಾತ್ರಿ ಹಂದಿಗಳು ನುಗ್ಗಿ ಅಡಿಕೆ ಗಿಡಗಳನ್ನು ನಾಶಪಡಿಸುತ್ತಿವೆ. ಕಾಡು ಪ್ರಾಣಿಗಳ ಕಾಟ ತಡೆಯಲು ತಂತಿ ಬೇಲಿಗೆ ಹೈ ವೋಲ್ಟೇಜ್ ವಿದ್ಯುತ್ ಸಂಪರ್ಕ ಕಲ್ಪಿಸಿ ಕೆಲವೊಮ್ಮೆ ಮನುಷ್ಯನ ಜೀವಕ್ಕೂ ಕುತ್ತು ಬರುವ ಅಪಾಯ ಕೂಡ ಸೃಷ್ಟಿಯಾಗುತ್ತಿದೆ.‌

ಅಂಕೋಲಾ ತಾಲ್ಲೂಕಿನ ಅರಣ್ಯದಂಚಿನ ಜಮೀನುಗಳಲ್ಲಿ ಕೃಷಿಕರು ಕಾಡು ಪ್ರಾಣಿಗಳ ಕಾಟದಿಂದ ಬೇಸತ್ತಿದ್ದಾರೆ. ಅಗಸೂರು, ಹಿಲ್ಲೂರು, ಸುಂಕಸಾಳ, ಹೆಬ್ಬುಳ, ರಾಮನಗುಳಿ ಮುಂತಾದೆಡೆ ವ್ಯಾಪಕ ಪ್ರಮಾಣದಲ್ಲಿ ಬೆಳೆಹಾನಿಗೆ ಕಾರಣವಾಗುತ್ತಿದೆ.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಸಂತೋಷಕುಮಾರ ಹಬ್ಬು, ಶಾಂತೇಶ ಬೆನಕನಕೊಪ್ಪ, ಎಂ.ಜಿ.ಹೆಗಡೆ, ಎಂ.ಜಿ.ನಾಯ್ಕ, ಸುಜಯ್ ಭಟ್, ಮೋಹನ ನಾಯ್ಕ, ವಿಶ್ವೇಶ್ವರ ಗಾಂವ್ಕರ, ಜ್ಞಾನೇಶ್ವರ ದೇಸಾಯಿ, ಮೋಹನ ದುರ್ಗೇಕರ.

ಶಿರಸಿ ತಾಲ್ಲೂಕಿನ ಮಳಲಗಾಂವ ಗ್ರಾಮದಲ್ಲಿ ಕಾಡಾನೆಗಳಿಂದ ಹಾನಿಯಾದ ಭತ್ತದ ಗದ್ದೆ
ಮುಂಡಗೋಡ ತಾಲ್ಲೂಕಿನ ಚವಡಳ್ಳಿ ಭಾಗದಲ್ಲಿ ಗಜಪಡೆಯಿಂದ ಬೆಳೆ ಹಾನಿಯಾಗಿರುವುದು
ಕಾಡುಪ್ರಾಣಿಗಳು ಹಾವಳಿ ಎಬ್ಬಿಸಿ ಬೆಳೆ ಹಾನಿಯುಂಟು ಮಾಡುವುದು ಪ್ರತಿ ವರ್ಷದ ಸಮಸ್ಯೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಅರಣ್ಯ ಇಲಾಖೆ ಮುಂದಾಗಬೇಕು
ಸುರೇಶ ಶಾನಭಾಗ ಸಾಂಬ್ರಾಣಿ ರೈತ
ಕಿರವತ್ತಿ ಮದನೂರು ಭಾಗದಲ್ಲಿ ಹೊಲಗಳಿಗೆ ಪ್ರತಿವರ್ಷ ಆನೆ ದಾಳಿ ಸಾಮಾನ್ಯವಾಗಿದೆ. ದಾಳಿ ನಿಯಂತ್ರಿಸಲು ಅರಣ್ಯ ಇಲಾಖೆ ಶಾಶ್ವತ ಕ್ರಮ ಕೈಗೊಳ್ಳಬೇಕು
ವಿನಾಯಕ ಮಾವಳ್ಳಿ ಕಿರವತ್ತಿ ರೈತ
ಪ್ರಾಕೃತಿಕ ವಿಕೋಪದ ನಡುವೆಯೂ ರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ಕಾಡು ಪ್ರಾಣಿಗಳಿಂದ ರಕ್ಷಣೆ ಮಾಡುವುದು ಈಚೆಗೆ ಸವಾಲಾಗಿ ಪರಿಣಮಿಸಿದೆ
ಮಹಾಬಲೇಶ್ವರ ನಾಯ್ಕ ಕುಡುವಳ್ಳಿ ರೈತ
ಹಂದಿ ಕಾಟಕ್ಕೆ ಬೇಸತ್ತು ಹೋಗಿದ್ದೇನೆ. ರೈತರ ಸಂಕಷ್ಟದ ಕುರಿತು ಸರ್ಕಾರ ಸರಿಯಾಗಿ ಸ್ಪಂದಿಸಿದರೆ ಸಾಕು
ಶ್ರೀಕಾಂತ ನಾಯ್ಕ ಜತ್ತುಕ್ಕಿ ರೈತ
150ಕ್ಕೂ ಹೆಚ್ಚು ಪ್ರಕರಣ
ಹಳಿಯಾಳ ತಾಲೂಕಿನಲ್ಲಿ 11618 ಹೆಕ್ಟರ್ ಅರಣ್ಯ ಜಮೀನಿದ್ದು ಈ ಅರಣ್ಯ ಜಮೀನಿನಿಂದ ಗದ್ದೆಗೆ ಹೊಂದಿಕೊಂಡು ಸುಮಾರು 56 ಗ್ರಾಮಗಳಿವೆ. ಆನೆ ಕಾಡು ಹಂದಿಗಳು ಅರಣ್ಯದ ಅಂಚಿನಲ್ಲಿರುವ ಗದ್ದೆಗೆ ನುಗ್ಗಿ ಬೆಳೆಯನ್ನು ಹಾಳು ಮಾಡುತ್ತಿರುವ ಬಗ್ಗೆ 150ಕ್ಕೂ ಅಧಿಕ ದೂರುಗಳು ಸಲ್ಲಿಕೆಯಾಗಿವೆ. ಮಂಗಳವಾಡ ಜಾವಳ್ಳಿ ಮುರ್ಕವಾಡ ಭಾಗವತಿ ಭಾಗಗಳಲ್ಲಿ ಆನೆಗಳ ಹಾವಳಿಯಿಂದ ಬೆಳೆ ನಾಶವಾದ ಬಗ್ಗೆ ಪ್ರಕರಣ ದಾಖಲಾಗಿವೆ. ‘ಕಾಡಾನೆ ಮತ್ತು ಇನ್ನಿತರ ಪ್ರಾಣಿಗಳು ಗದ್ದೆಗೆ ನುಗ್ಗಿ ಹಾನಿ ಮಾಡದಂತೆ ಅರಣ್ಯದ ಅಂಚಿನಲ್ಲಿಯೇ ಅಲ್ಲಲ್ಲಿ ತಡೆ ಕಂದಕ ನಿರ್ಮಾಣ ಮಾಡಲಾಗಿದೆ. ಸೌರಬೇಲಿ ನಿರ್ಮಿಸಲಾಗಿದೆ. ಕಾಡು ಪ್ರಾಣಿಗಳು ಕಂಡಲ್ಲಿ ಅರಣ್ಯ ಇಲಾಖೆ ಕಚೇರಿಗೆ ಮಾಹಿತಿ ನೀಡಿದರೆ ವನ್ಯಜೀವಿ ಹಿಮ್ಮೆಟ್ಟಿಸಲಾಗುತ್ತದೆ’ ಎನ್ನುತ್ತಾರೆ ಹಳಿಯಾಳ ಆರ್.ಎಫ್.ಒ ಬಸವರಾಜ ಎಂ.
‘ಅರಣ್ಯ ಇಲಾಖೆ ತಂತಿಬೇಲಿ ನಿರ್ಮಿಸಿಕೊಡಲಿ’
ಜೊಯಿಡಾ ತಾಲ್ಲೂಕಿನಲ್ಲಿ ಭತ್ತ ಮತ್ತು ಬಾಳೆಗೆ ಹಂದಿ ಕಾಡುಕೋಣ ಮತ್ತು ಕಡವೆಗಳ ಕಾಟ ಜಾಸ್ತಿ ಇದೆ. ಅಧಿಕ ಪ್ರಮಾಣದಲ್ಲಿ ಬೆಳೆ ನಾಶವಾದರೂ ಪರಿಹಾರ ಮಾತ್ರ ಕಡಿಮೆ ದೊರೆಯುತ್ತದೆ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಾರೆ. ಕುಂಡಲ ಗಾಂಗೋಡಾ ಅಂಬೋಳಿ ಅಣಶಿ ಭಾಗದಲ್ಲಿ ಪ್ರತಿ ದಿನವೂ ಅರಣ್ಯ ಇಲಾಖೆಗೆ ಪರಿಹಾರ ಕೋರಿ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ‘ವನ್ಯ ಜೀವಿಗಳ ಭೀತಿಯಿಂದ ಈಚಿನ ವರ್ಷಗಳಲ್ಲಿ ರಾತ್ರಿ ವೇಳೆ ಹೊಲ ಕಾಯಲು ಹೋಗುವುದು ಕಷ್ಟ. ಅರಣ್ಯ ಇಲಾಖೆ ಮುತುವರ್ಜಿ ವಹಿಸಿ ವಿದ್ಯುತ್ ತಂತಿ ಬೇಲಿಯನ್ನು ಹಾಕಿಕೊಡಬೇಕು’ ಎನ್ನುತ್ತಾರೆ ಕುಂಡಲದ ರೈತ ಪ್ರಭಾಕರ ವೇಳಿಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.