ADVERTISEMENT

ಕಾಂಗ್ರೆಸ್‌ ಪಕ್ಷಕ್ಕೆ ಯಾವುದೇ ಜಾತಿ, ಧರ್ಮವಿಲ್ಲ: ಆರ್‌.ವಿ.ದೇಶಪಾಂಡೆ

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರ ಪದಗ್ರಹಣ ಸಮಾರಂಭ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 15:45 IST
Last Updated 15 ಅಕ್ಟೋಬರ್ 2024, 15:45 IST
ಮುಂಡಗೋಡ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮಾತನಾಡಿದರು
ಮುಂಡಗೋಡ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮಾತನಾಡಿದರು   

ಮುಂಡಗೋಡ: ಕೇಂದ್ರ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ನಿರುದ್ಯೋಗ, ಬಡತನ ಹೆಚ್ಚಾಗುತ್ತಿದ್ದು, ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದರಿಂದ ಬಡವರು ಜೀವಿಸುವುದು ಕಷ್ಟವಾಗುತ್ತಿದೆ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್‌.ವಿ.ದೇಶಪಾಂಡೆ ಹೇಳಿದರು.

ಇಲ್ಲಿನ ಗಣಪತಿ ದೇವಸ್ಥಾನದ ಸಭಾಭವನದಲ್ಲಿ ನೂತನವಾಗಿ ನೇಮಕಗೊಂಡಿರುವ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ ಅವರಿಗೆ ಮಂಗಳವಾರ ಕಾಂಗ್ರೆಸ್‌ ಪಕ್ಷದ ಧ್ವಜ ನೀಡಿ ಅವರು ಮಾತನಾಡಿದರು.

ಬಡವರು ಆರ್ಥಿಕವಾಗಿ ಸದೃಢರಾಗಲೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಕಾಂಗ್ರೆಸ್‌ ಪಕ್ಷ ಬಡವರ ಪಕ್ಷವಾಗಿದ್ದು, ಕಾಂಗ್ರೆಸ್‌ ಪಕ್ಷಕ್ಕೆ ಜಾತಿ, ಧರ್ಮವಿಲ್ಲ. ಭಿನ್ನಾಭಿಪ್ರಾಯಕ್ಕೆ ಅವಕಾಶ ಮಾಡಿಕೊಡದೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟಿಸಬೇಕು. ಎಲ್ಲ ವರ್ಗದವರನ್ನು ಸಮಾನತೆಯಿಂದ ನೋಡಿ ಸಾಮಾಜಿಕ ನ್ಯಾಯ ಸಿಗುವಂತೆ ಮಾಡಬೇಕು ಎಂದರು.

ಮುಖಂಡ ವಿ.ಎಸ್. ಪಾಟೀಲ ಮಾತನಾಡಿ, ಅಧಿಕಾರ ಸಿಕ್ಕಾಗ ಸದ್ಬಳಕೆ ಮಾಡಿಕೊಂಡು ಸೇವಕರಂತೆ ಕೆಲಸ ಮಾಡಬೇಕು. ನೂತನವಾಗಿ ನೇಮಕಗೊಂಡಿರುವ ಕೃಷ್ಣ ಹಿರೇಹಳ್ಳಿ ಅವರು ಈ ಹಿಂದೆ ಪಕ್ಷವನ್ನು ತಳಮಟ್ಟದಿಂದ ಸಂಘಟನೆ ಮಾಡಿದ್ದಾರೆ. ಸ್ಥಳೀಯ ಕಾಂಗ್ರೆಸ್ ಪಕ್ಷದಲ್ಲಿ ಯಾವುದೆ ಭಿನ್ನಾಭಿಪ್ರಾಯಗಳಿಲ್ಲ ಎಂದರು.

ನೂತನ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ ಅಧಿಕಾರ ಸ್ವೀಕರಿಸಿ, ಪಕ್ಷದಲ್ಲಿ ಸಿಪಾಯಿ ಆಗಿ ಕೆಲಸ ಮಾಡಿದ್ದೇನೆ. ಹಾಗಾಗಿ ಎರಡನೇ ಬಾರಿ ಅಧ್ಯಕ್ಷ ಸ್ಥಾನ ದೊರಕಿದೆ. ನಿಷ್ಠೆಯಿಂದ ಕೆಲಸ ಮಾಡಿದರೆ ಪಕ್ಷದ ಹುದ್ದೆ ತಾನಾಗಿಯೇ ಆರಿಸಿಕೊಂಡು ಬರುತ್ತದೆ. ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುತ್ತೇನೆ ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ಸಾಯಿ ಗಾಂವಕರ, ಕೆಪಿಸಿಸಿ ಸದಸ್ಯ ವಿವೇಕ ಹೆಬ್ಬಾರ, ಎಚ್.ಎಂ.ನಾಯ್ಕ, ಸುಜಾತಾ ಗಾಂವಕರ, ನಾಗರಾಜ ನಾರ್ವೇಕರ, ದೀಪಕ ದೊಡ್ಡೂರ, ಸಲ್ಮಾಂ ಕಿರಣ ಶೆರಖಾನೆ, ರಾಮಕೃಷ್ಣ ಮೂಲಿಮನಿ, ರಾಜಶೇಖರ ಹಿರೇಮಠ, ಧರ್ಮರಾಜ ನಡಗೇರಿ, ಗುಡ್ಡಪ್ಪ ಕಾತೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.