ಕಾರವಾರ: ‘ಸರ್, ನಮ್ಮ ಮನೆ ಕುಸಿದಿದೆ. ಶಾಲೆಗೆ ಹೋಗಲಾಗ್ತಿಲ್ಲ. ನನ್ನ ವಿದ್ಯಾಭ್ಯಾಸದ ಗತಿಯೇನು..? ಏನಾದ್ರೂ ಮಾಡಿ ನಮ್ಮೂರು ಸರಿ ಮಾಡ್ಸಿ ಪ್ಲೀಸ್...’ ಯಲ್ಲಾಪುರ ತಾಲ್ಲೂಕಿನ ವಜ್ರಳ್ಳಿ ಗ್ರಾಮ ಪಂಚಾಯಿತಿಯ ಕಳಚೆಯಲ್ಲಿ ಆಗಿರುವ ಭಾರಿ ಭೂಕುಸಿತವನ್ನು ಪರಿಶೀಲಿಸಲು ಗುರುವಾರ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಎದುರು ಹತ್ತನೇ ತರಗತಿ ವಿದ್ಯಾರ್ಥಿನಿ ವಾಣಿ ಗಜಾನನ ಭಟ್ ಕಣ್ಣೀರಿಡುತ್ತ ಅಳಲು ತೋಡಿಕೊಂಡಳು. ಅವಳನ್ನು ಸಮಾಧಾನಿಸಲು ಮುಖ್ಯಮಂತ್ರಿ ಪ್ರಯತ್ನಿಸಿದರೂ ಪರಿಣಾಮ ಬೀರಲಿಲ್ಲ.
ಮುಖ್ಯಮಂತ್ರಿಯಾಗಿ ಬುಧವಾರ ಅಧಿಕಾರ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ ಅವರು ಮರುದಿನವೇ ಪ್ರವಾಹ ಪೀಡಿತ ಉತ್ತರ ಕನ್ನಡದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದರು. ಅವರು ಹೋದಲ್ಲೆಲ್ಲ ಭೇಟಿಯಾದವರು ತಮ್ಮ ನೋವು, ಸಂಕಟಗಳನ್ನು ಹೇಳುತ್ತ ಕಣ್ಣೀರು ಸುರಿಸಿದರು.
ಯಲ್ಲಾಪುರ ತಾಲ್ಲೂಕಿನ ತಳಕೇಬೈಲ್‌ನಲ್ಲಿ ರಾಜ್ಯ ಹೆದ್ದಾರಿ 6ರಲ್ಲಿ ಗುಡ್ಡ ಕುಸಿದ ಜಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಇದೇವೇಳೆ, ಅಲ್ಲಿ ಸೇರಿದ್ದ 500-600 ಗ್ರಾಮಸ್ಥರು ಭೂಕುಸಿತದಿಂದ ಆಗಿರುವ ಹಾನಿಯನ್ನು ವಿವರಿಸಿದರು.
ಗ್ರಾಮಸ್ಥರ ನೋವಿನ ನುಡಿ ಆಲಿಸಿದ ಅವರು, ‘ನಿಮ್ಮೆಲ್ಲ ಕಷ್ಟಗಳೂ ನನಗೆ ಅರ್ಥವಾಗುತ್ತವೆ. ಸೂಕ್ತ ಪರಿಹಾರದ ಬಗ್ಗೆ ಅಧ್ಯಯನ ನಡೆಸಿ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ’ ಎಂದು ಭರವಸೆ ನೀಡಿದರು.
ಇದಕ್ಕೂ ಮೊದಲು ಯಲ್ಲಾಪುರದಲ್ಲಿ, ಭೂಕುಸಿತದಿಂದ ಸಂಪೂರ್ಣವಾಗಿ ಮನೆ ಕುಸಿದ ಹಲವು ಕುಟುಂಬಗಳಿಗೆ ಸಾಂಕೇತಿಕವಾಗಿ ಪರಿಹಾರ ವಿತರಿಸಿದರು. ತಳಕೇಬೈಲ್‌ನಿಂದ ಅರಬೈಲ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿದ ಜಾಗವನ್ನು ಪರಿಶೀಲಿಸಿದರು. ಬಳಿಕ ಯಲ್ಲಾಪುರ ತಾಲ್ಲೂಕಿನ ಗುಳ್ಳಾಪುರದಲ್ಲಿ ಗಂಗಾವಳಿ ನದಿಯ ಪ್ರವಾಹದಲ್ಲಿ ಸೇತುವೆ ಕೊಚ್ಚಿಕೊಂಡು ಹೋದ ಪ್ರದೇಶ, ಶಿರೂರಿನಲ್ಲಿ ಮನೆಗಳು ಮುಳುಗಡೆಯಾಗಿ ಹಾನಿಯಾದ ಪ್ರದೇಶವನ್ನು ವೀಕ್ಷಿಸಿದರು.
ಶಾಸಕರಾದ ಶಿವರಾಮ ಹೆಬ್ಬಾರ, ಸುನೀಲ ನಾಯ್ಕ, ವಿಧಾನಪರಿಷತ್ ಸದಸ್ಯ ಶಾಂತರಾಮ ಸಿದ್ದಿ, ಆಡಳಿತ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಪ್ರಮೋದ ಹೆಗಡೆ, ಗ್ರಾಮ ಪಂಚಾಯಿತಿ ಪದಾಧಿಕಾರಿಗಳು, ವಿವಿಧ ಅಧಿಕಾರಿಗಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.