ADVERTISEMENT

ಪರೀಕ್ಷಾ ವೇಳಾಪಟ್ಟಿ ಸಮಯ ಬದಲಾವಣೆ: ಪರೀಕ್ಷೆಯಿಂದ ಹೊರಗುಳಿದ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2023, 10:12 IST
Last Updated 15 ಮಾರ್ಚ್ 2023, 10:12 IST
   

ಶಿರಸಿ: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಪರೀಕ್ಷೆ ವೇಳಾ ಪಟ್ಟಿ ಸಮಯ ಬದಲಾವಣೆ ಎಡವಟ್ಟಿನಿಂದ ಇಲ್ಲಿನ ಸರ್ಕಾರಿ ಪದವಿ ಕಾಲೇಜ್ ನ 13 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆಯಿಂದ ಹೊರಗುಳಿದ ಪ್ರಸಂಗ ಬುಧವಾರ ನಡೆಯಿತು.

ಕಾಲೇಜಿನಲ್ಲಿ ಅರ್ಥಶಾಸ್ತ್ರ ಅಭ್ಯಸಿಸುತ್ತಿದ್ದ 13 ವಿದ್ಯಾರ್ಥಿಗಳು ತಮಗೆ ನೀಡಿದ್ದ ಪರೀಕ್ಷಾ ಪ್ರವೇಶ ಪತ್ರದಲ್ಲಿ ನಮೂದಿಸಿದಂತೆ, ಮಧ್ಯಾಹ್ನ 2ರಿಂದ 5ರ ಪರೀಕ್ಷೆಗೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದರು. ಆದರೆ ಆಗಲೇ ಬೆಳಿಗ್ಗೆ 9ರಿಂದ 12 ರವೆಗೆ ಸಮಯ ನೀಡಿದ್ದ ಅರ್ಥಶಾಸ್ತ್ರ ಪರೀಕ್ಷೆ ಮುಗಿಯುವ ಹಂತದಲ್ಲಿತ್ತು. ಇದರಿಂದ ಪರೀಕ್ಷಾರ್ಥಿಗಳು ಕಂಗಾಲಾದರು.

'ಪರೀಕ್ಷಾ ಪ್ರವೇಶ ಪತ್ರ (ಹಾಲ್ ಟಿಕೆಟ್) ದಲ್ಲಿ ಇರುವ ಸಮಯದಂತೆ ಪರೀಕ್ಷೆ ಬರೆಯಲು ಕಾಲೇಜ್ ಗೆ ಬಂದಿದ್ದೆವು. ಆದರೆ ಅದಾಗಲೇ ಪರೀಕ್ಷೆ ಬಹುತೇಕ ಮುಕ್ತಾಯದ ಹಂತದಲ್ಲಿತ್ತು. ಇದನ್ನು ಪ್ರಾಚಾರ್ಯರ ಬಳಿ ಪ್ರಶ್ನಿಸಿದರೆ, ವಿಶ್ವವಿದ್ಯಾಲಯದಿಂದ ಬಂದ ಬದಲಾದ ವೇಳಾ ಪಟ್ಟಿ ಸೂಚನಾ ಫಲಕಕ್ಕೆ ಅಂಟಿಸಲಾಗಿದೆ. ಅದನ್ನು ನೋಡಿ' ಎಂಬ ಉತ್ತರ ನೀಡಿದ್ದಾರೆ. 'ಪರೀಕ್ಷಾ ಪ್ರವೇಶ ಪತ್ರ ತೆಗೆದುಕೊಂಡು ಹೋದ ನಂತರದಲ್ಲಿ ಇಂದು ನೇರವಾಗಿ ಪರೀಕ್ಷೆಗೆ ಬಂದಿದ್ದೇವೆ. ನಂತರದಲ್ಲಿ ಸಮಯ ಬದಲಾದ ಮಾಹಿತಿಯನ್ನೂ ನೀಡಿಲ್ಲ. ಪರೀಕ್ಷಾ ಪ್ರವೇಶ ಪತ್ರದಲ್ಲಿ ನಮೂದಿಸಿರುವ ಸಮಯಕ್ಕಿಂತ ಮೊದಲು ಬಂದರೂ ಪರೀಕ್ಷೆ ಬರೆಯಲು ಆಗದ ಸ್ಥಿತಿ ಬಂದಿದೆ. ಇದು ನಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರಿದೆ' ಎಂದು ಪರೀಕ್ಷೆ ವಂಚಿತ ವಿದ್ಯಾರ್ಥಿಗಳು ತಮ್ಮ ನೋವು ಹೊರ ಹಾಕಿದರು.' ಪ್ರತ್ಯೇಕ ದಿನಾಂಕ ನಿಗದಿ ಮಾಡಿ ಪರೀಕ್ಷೆ ನಡೆಸಿದರೆ ಅನುಕೂಲ ಆಗುತ್ತದೆ. ಅದಕ್ಕೆ ಅವಕಾಶ ನೀಡಬೇಕು' ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

ADVERTISEMENT

'ಬದಲಾದ ಸಮಯವನ್ನು ಕಾಲೇಜ್ ಸೂಚನಾ ಫಲಕಕ್ಕೆ ಹಾಕಲಾಗಿತ್ತು. ಆದರೆ ವಿದ್ಯಾರ್ಥಿಗಳು ಅದನ್ನು ಗಮನಿಸದ ಕಾರಣ ಗೊಂದಲ ಉಂಟಾಗಿದೆ. ವಿಶ್ವವಿದ್ಯಾಲಯದ ನಿಯಮಾವಳಿಯಂತೆ ನಾವು ನಡೆದುಕೊಂಡಿದ್ದೇವೆ' ಎಂದು ಕಾಲೇಜಿನ ಪ್ರಾಚಾರ್ಯೆ ದಾಕ್ಷಾಯಿಣಿ ಹೆಗಡೆ ಪ್ರತಿಕ್ರಿಯಿಸಿದರು/

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.