ADVERTISEMENT

ಕೃಷ್ಣ .ಜಿ ನಾಯ್ಕಗೆ ಯಕ್ಷಗಾನ ಅಕಾಡೆಮಿಯ ‘ಯಕ್ಷಸಿರಿ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2022, 16:21 IST
Last Updated 29 ಆಗಸ್ಟ್ 2022, 16:21 IST
ಕೃಷ್ಣ ಜಿ.ನಾಯ್ಕ
ಕೃಷ್ಣ ಜಿ.ನಾಯ್ಕ   

ಸಿದ್ದಾಪುರ: ತಾಲ್ಲೂಕಿನ ಬೇಡ್ಕಣಿಯ ಕೃಷ್ಣ. ಜಿ ನಾಯ್ಕ ಕರ್ನಾಟಕ ಯಕ್ಷಗಾನ ಅಕಾಡೆಮಿಯ 2022ರ ‘ಯಕ್ಷಸಿರಿ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಗೌರ್ಯ ಮತ್ತು ಶಿವಿ ನಾಯ್ಕ ಅವರ ಮಗನಾಗಿ 1957ರಲ್ಲಿ ಜನಿಸಿದ ಇವರು ತಮ್ಮ 14ನೇ ವರ್ಷಕ್ಕೆ ಬಾಲಗೋಪಾಲ ವೇಷದ ಮೂಲಕ ರಂಗಪ್ರವೇಶ ಮಾಡಿದರು.

ಬಡತನದ ನಡುವೆ ಯಕ್ಷಗಾನದ ಕಡೆ ಒಲವು ಹೊಂದಿ ಉಡುಪಿಯ ಶಿವಪ್ರಭಾ ಕಲಾಕೇಂದ್ರದಲ್ಲಿ ಒಂದು ವರ್ಷ ಯಕ್ಷಗಾನ ಅಭ್ಯಾಸ ನಡೆಸಿದರು. ನಂತರ ಕೋಟದ ಅಮೃತೇಶ್ವರಿ ಮೇಳದಲ್ಲಿ ಎರಡು ವರ್ಷ, ಪಂಚಲಿಂಗೇಶ್ವರ ಮೇಳದಲ್ಲಿ ಐದು ವರ್ಷ, ಹಿರೇಮಾಲಿಂಗೇಶ್ವರ ಮೇಳ, ಶಿರಸಿ ಮೇಳ, ಪೆರ್ಡೂರು, ಸಾಲಿಗ್ರಾಮ ಮೇಳಗಳಲ್ಲಿ ತಲಾ ಒಂದು ವರ್ಷ ಬಣ್ಣ ಹಚ್ಚಿದರು.

ವೈಯಕ್ತಿಕ ಕಾರಣಗಳಿಂದ ವೃತ್ತಿ ಮೇಳಗಳನ್ನು ಬಿಟ್ಟು ‘ಶ್ರೀ ಮಾರುತಿ ಪ್ರಸಾದಿತ ಯಕ್ಷಗಾನ ಮಂಡಳಿ ಬೇಡ್ಕಣಿ’ ಮೇಳ ಸ್ಥಾಪಿಸಿದರು. ಕೆರೆಮನೆಯ ಶ್ರೀಮಯ ಕಲಾಕೇಂದ್ರದಲ್ಲಿ ನೃತ್ಯ ಶಿಕ್ಷಕನಾಗಿ ಎರಡು ವರ್ಷ ಸೇವೆ ಸಲ್ಲಿಸಿದ್ದಾರೆ. ನಂತರ ಅನೇಕ ಕಾರಣಗಳಿಂದ ತಾವೇ ಕಟ್ಟಿ ಬೆಳೆಸಿದ್ದ ಬೇಡ್ಕಣಿ ಮೇಳ ಬಿಟ್ಟು ಮತ್ತೆ ವೃತ್ತಿ ಮೇಳಕ್ಕೆ ಸೇರ್ಪಡೆಗೊಂಡರು. ಪ್ರಸ್ತುತ ಮಂದಾರ್ತಿ ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

1988 ರಲ್ಲಿ ಶಿವಮೊಗ್ಗದ ಮೊರಾರ್ಜಿ ಶಾಲೆಯಲ್ಲಿ ರಾಜ್ಯಪಾಲರಿಂದ ಸನ್ಮಾನ, ಭುವನಗಿರಿಯ ಮಾತೃವಂದನಾ ಸಮಿತಿಯಿಂದ ಸನ್ಮಾನ, ಶ್ರೀಧರ್ ಹಂದೆ ಇವರಿಂದ ಯಕ್ಷರಾಜ ಪ್ರಶಸ್ತಿ, ಇಟಗಿಯ ಯಕ್ಷಭಾಸ್ಕರ ಸನ್ಮಾನ ಹೀಗೆ ನೂರಾರು ಸನ್ಮಾನಗಳು ಸಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.