ADVERTISEMENT

ಕಾರವಾರ: ನಿರ್ಗತಿಕರ ತಾಣವಾದ ವಾಣಿಜ್ಯ ಮಳಿಗೆ

ಗಣಪತಿ ಹೆಗಡೆ
Published 14 ಅಕ್ಟೋಬರ್ 2024, 5:28 IST
Last Updated 14 ಅಕ್ಟೋಬರ್ 2024, 5:28 IST
ಕಾರವಾರ ನಗರದ ಹೂವಿನಚೌಕ ಸಮೀಪ ನಗರಸಭೆ ನಿರ್ಮಿಸಿದ ವಾಣಿಜ್ಯ ಮಳಿಗೆ ಖಾಲಿ ಉಳಿದುಕೊಂಡಿದೆ
ಕಾರವಾರ ನಗರದ ಹೂವಿನಚೌಕ ಸಮೀಪ ನಗರಸಭೆ ನಿರ್ಮಿಸಿದ ವಾಣಿಜ್ಯ ಮಳಿಗೆ ಖಾಲಿ ಉಳಿದುಕೊಂಡಿದೆ   

ಕಾರವಾರ: ಜಿಲ್ಲಾ ಕೇಂದ್ರವೂ ಸೇರಿದಂತೆ ಜಿಲ್ಲೆಯ ವಿವಿಧ ನಗರ, ಪಟ್ಟಣಗಳ ವ್ಯಾಪ್ತಿಯಲ್ಲಿ ನಗರ ಸ್ಥಳೀಯ ಸಂಸ್ಥೆ ಕೋಟ್ಯಂತರ ವೆಚ್ಚ ಮಾಡಿ ನಿರ್ಮಿಸಿದ ವಾಣಿಜ್ಯ ಮಳಿಗೆಗಳು ಬಾಡಿಗೆಗೆ ನೀಡಲ್ಪಡದ ಪರಿಣಾಮ ಅತ್ತ ಆದಾಯವೂ ಬರದೆ, ಇತ್ತ ಖಾಲಿ ಕಟ್ಟಡಗಳು ಕುಡುಕರ ಅಡ್ಡೆಯಾಗಿ, ನಿರ್ಗತಿಕರ ವಾಸಸ್ಥಾನವಾಗಿ ಬದಲಾಗುತ್ತಿರುವ ದೂರು ಹೆಚ್ಚಿದೆ.

ಹರಾಜು ಪ್ರಕ್ರಿಯೆ ನಡೆಸುವ ವೇಳೆ ಅತಿಯಾದ ದರ ನಿಗದಿಪಡಿಸುತ್ತಿರುವುದು ಮತ್ತು ಅದರೊಂದಿಗೆ ದುಬಾರಿ ಪ್ರಮಾಣದಲ್ಲಿ ಸರಕು ಸೇವಾ ತೆರಿಗೆ ವಿಧಿಸುತ್ತಿರುವುದು ಬಾಡಿಗೆದಾರರು ಹಿಂದೇಟು ಹಾಕಲು ಇನ್ನೊಂದು ಕಾರಣವಾಗುತ್ತಿದೆ.

ನಗರದಲ್ಲಿ ನಗರಸಭೆಯ 100ಕ್ಕೂ ಹೆಚ್ಚು ಮಳಿಗೆಗಳಿವೆ. ಅವುಗಳ ಪೈಕಿ ಸುಮಾರು 12 ಮಳಿಗೆಗಳು ಖಾಲಿ ಉಳಿದುಕೊಂಡಿವೆ. ಹೂವಿನ ಚೌಕದ ಬಳಿಕ ಕೆಲವು ವರ್ಷದ ಹಿಂದೆ ಮಳಿಗೆ ನಿರ್ಮಿಸಿದ್ದು ಅದರ ಬಳಕೆ ಪ್ರಶ್ನಿಸಿ ಖಾಸಗಿ ವ್ಯಕ್ತಿಯೊಬ್ಬರು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಬಳಕೆಗೆ ಹಿನ್ನಡೆ ಉಂಟಾಗಿದೆ. ಗ್ರೀನ್ ಸ್ಟ್ರೀಟ್‍ನಲ್ಲಿನ ಮಳಿಗೆ ತೆರವುಗೊಳಿಸುವಂತೆ ಈಚೆಗಷ್ಟೆ ಕೋರ್ಟ್ ಆದೇಶಿಸಿದ್ದು, 38 ಮಳಿಗೆಗಳನ್ನು ಕಳೆದುಕೊಳ್ಳುವ ಆತಂಕವನ್ನು ನಗರಸಭೆ ಎದುರಿಸುತ್ತಿದೆ.

ADVERTISEMENT

‘ಹೂವಿನ ಚೌಕದ ಮಳಿಗೆ ಪ್ರಕರಣದಲ್ಲಿ ನಗರಸಭೆ ಪರವಾಗಿ ಆದೇಶ ಬಂದಿದ್ದರಿಂದ ಶೀಘ್ರವೇ ಹರಾಜು ಕರೆದು ಮಳಿಗೆ ವಿತರಿಸುತ್ತೇವೆ. ಮಳಿಗೆ ತೆರವಿಗೆ ಸಂಬಂಧಿಸಿದಂತೆ ಕೋರ್ಟ್ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೊರೆಹೋಗಲು ನಿರ್ಧರಿಸಲಾಗಿದೆ. ಉಳಿದಂತೆ ಖಾಲಿ ಇರುವ ಮಳಿಗೆಗಳನ್ನು ಮರುಹರಾಜು ಕರೆದು ವ್ಯಾಪಾರಿಗಳಿಗೆ ನೀಡಲಾಗುತ್ತದೆ’ ಎಂದು ನಗರಸಭೆ ಕಂದಾಯ ಅಧಿಕಾರಿ ರವಿ ನಾಯ್ಕ ಹೇಳುತ್ತಾರೆ.

ಭಟ್ಕಳ ಪುರಸಭೆಯ ಒಡೆತನದ ನವಾಯತ್ ಕಾಲೋನಿ, ಹೂವಿನ ಮಾರುಕಟ್ಟೆ, ಹಳೇ ಬಸ್ ನಿಲ್ದಾಣ ಹಾಗೂ ಅರ್ಬನ ಬ್ಯಾಂಕ್ ಬಳಿ ಇರುವ ಖಾಲಿ ಅಂಗಡಿಗಳನ್ನು ಪುರಸಭೆಯವರು ಮರುಹರಾಜು ಕರೆದು ವಿಲೇವಾರಿ ಮಾಡದ ಕಾರಣ ಅಂಗಡಿಗಳು ಖಾಲಿ ಉಳಿದಿವೆ.

ಹಳೆ ಬಸ್ ನಿಲ್ದಾಣ ಮೀನು ಮಾರುಕಟ್ಟೆ ಒಳಗಡೆ ಇರುವ ವಾಣಿಜ್ಯ ಸಂಕೀರ್ಣ ಶಿಥಿಲಾವಸ್ಥೆ ಹೊಂದಿದ್ದು, ಹರಾಜು ಪ್ರಕ್ರಿಯೆಯಲ್ಲಿ ಯಾರೊಬ್ಬರೂ ಭಾಗವಹಿಸದೇ ಹಾಗೆಯೇ ಖಾಲಿ ಇದೆ. ಅರ್ಬನ್ ಬ್ಯಾಂಕ್ ಹಾಗೂ ನವಾಯತ್ ಕಾಲೋನಿ ಬಳಿಯ ವಾಣಿಜ್ಯ ಸಂಕೀರ್ಣದ ಕೆಲವೊಂದು ಮಳಿಗೆಗಳು ಹಿಂದಿನ ಬಾಡಿಗೆದಾರರು ಅಂಗಡಿ ಖಾಲಿ ಮಾಡಿ ಬಾಡಿಗೆ ಬಾಕಿ ಉಳಿಸಿಕೊಂಡಿದ್ದು, ಮರು ಹರಾಜು ಕರೆಯಲು ಸಾಧ್ಯವಾಗಿಲ್ಲ ಎಂದು ಪುರಸಭೆ ಸಿಬ್ಬಂದಿಯೊರ್ವರು ಮಾಹಿತಿ ನೀಡಿದ್ದಾರೆ.

ಯಲ್ಲಾಪುರ ಪಟ್ಟಣ ಪಂಚಾಯಿತಿ ಹೊಸ ತರಕಾರಿ ಮಾರುಕಟ್ಟೆಯಲ್ಲಿ ನಿರ್ಮಿಸಿದ 43 ವಾಣಿಜ್ಯ ಮಳಿಗೆಗಳಲ್ಲಿ 7 ಮಳಿಗೆಗಳು ಖಾಲಿ ಇವೆ. ಈ ವಾಣಿಜ್ಯ ಮಳಿಗೆಗಳು ಮುಖ್ಯರಸ್ತೆಯಿಂದ ಒಳಭಾಗದಲ್ಲಿರುವ ಕಾರಣ ಬಾಡಿಗೆ ಪಡೆಯಲು ಗ್ರಾಹಕರು ಆಸಕ್ತಿ ತೋರಿಸುತ್ತಿಲ್ಲ. ಬಸವೇಶ್ವರ ವೃತ್ತದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ವಾಣಿಜ್ಯ ಮಳಿಗೆಯ ಕಾಮಗಾರಿ ತಾಂತ್ರಿಕ ಕಾರಣದಿಂದ ಅರ್ಧಕ್ಕೆ ನಿಂತಿದೆ.

‘ತರಕಾರಿ ಮಾರುಕಟ್ಟೆಯಲ್ಲಿ ಖಾಲಿ ಇರುವ ಮಳಿಗೆಗೆ 3 ಸಲ ಹರಾಜು ಕರೆಯಲಾದರೂ ಒಳ ಭಾಗದಲ್ಲಿರುವ ಕಾರಣ ಗ್ರಾಹಕರು ಆಸಕ್ತಿ ತೋರಿಸುತ್ತಿಲ್ಲ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುನೀಲ ಗಾವಡೆ ಹೇಳುತ್ತಾರೆ.

ಅಂಕೋಲಾ ಪಟ್ಟಣದ ಕೆಲವು ವಾಣಿಜ್ಯ ಮಳಿಗೆಗಳ ಕಟ್ಟಡಗಳು ವ್ಯಾಪರಸ್ಥರು ಖರೀದಿ ಮಾಡದೆ ಖಾಲಿ ಬಿದ್ದಿವೆ. ಮೀನು ಮಾರುಕಟ್ಟೆಯ ಮಳಿಗೆ, ಮಾರ್ಕೆಟ್ ಮಳಿಗೆಗಳು ಖಾಲಿ ಇದ್ದು, ಈ ಕಟ್ಟಡಗಳು ಕುಡುಕರ, ಭಿಕ್ಷುಕರ ತಾಣವಾಗಿ ಮಾರ್ಪಟ್ಟಿದೆ.

ಹೊನ್ನಾವರ ಪಟ್ಟಣ ಪಂಚಾಯಿತಿ ಮಾಲಿಕತ್ವದ 110 ಅಂಗಡಿಗಳ ಪೈಕಿ ಹತ್ತಾರು ಅಂಗಡಿಗಳು ಹೆಚ್ಚಿನ ದಿನ ಮುಚ್ಚಿದ ಸ್ಥಿತಿಯಲ್ಲಿರುತ್ತವೆ. ಕೋರ್ಟ್ ರಸ್ತೆಯಲ್ಲಿ 12 ಅಂಗಡಿಗಳ ಪೈಕಿ 1, ಬಂದರಿನಲ್ಲಿ 8 ಅಂಗಡಿಗಳ ಪೈಕಿ 1 ಹಾಗೂ ಪ್ರಭಾತನಗರದಲ್ಲಿ 5 ಅಂಗಡಿಗಳ ಪೈಕಿ 1 ಖಾಲಿ ಇವೆ. ಬಜಾರ್‌ನಲ್ಲಿರುವ ಎಲ್ಲ 21 ಅಂಗಡಿಗಳನ್ನು ಪಟ್ಟಣ ಪಂಚಾಯಿತಿ ಬಾಡಿಗೆಗೆ ನೀಡಿದೆ.

‘ಕೆಲ ಅಂಗಡಿಗಳು ಮುಚ್ಚಿದ ಸ್ಥಿತಿಯಲ್ಲಿದ್ದರೂ ಅವುಗಳಿಂದ ಪಟ್ಟಣ ಪಂಚಾಯಿತಿಗೆ ಬಾಡಿಗೆ ಬರುತ್ತಿದೆ.ಕೆಲವು ಕಟ್ಟಡಗಳಿಗೆ ರಿಪೇರಿ ಅಗತ್ಯವಿದೆ’ ಎನ್ನುತ್ತಾರೆ ಪಟ್ಟಣ ಪಂಚಾಯಿತಿ ಕಂದಾಯ ಅಧಿಕಾರಿ ಮಂಜುನಾಥ ನಾಯ್ಕ.

ಶಿರಸಿ ನಗರಸಭೆಯ ಸುಭಾಶ್ಚಂದ್ರ ವಾಣಿಜ್ಯ ಸಂಕೀರ್ಣದಲ್ಲಿ ನಿರ್ಗತಿಕ ವ್ಯಕ್ತಿ ನಿದ್ದೆಗೆ ಜಾರಿರುವುದು

ಕುಮಟಾ ಪುರಸಭೆ ಮಾಲೀಕತ್ವದ ಅಂಗಡಿ ಮಳಿಗೆಗಳ ಪೈಕಿ ಹೆಚ್ಚಿನವುಗಳನ್ನು ಉದ್ಯಮಿಗಳಿಗೆ ಬಾಡಿಗೆಗೆ ನೀಡಿದ್ದು, ಉಳಿದವು ನಿರ್ವಹಣೆ ಕೊರತೆ, ಹೆಚ್ಚಿನ ಮೊತ್ತದ ಬಾಡಿಗೆಯ ಕಾರಣದಿಂದಾಗಿ ಹಾಗೇ ಉಳಿದಿವೆ.

‘ಪಟ್ಟಣದ ಅಲ್ಲಲ್ಲಿ ನೆಲ ಅಂತಸ್ತಿನಲ್ಲಿರುವ 46 ಅಂಗಡಿ ಮಳಿಗೆಗಳನ್ನು ಬಾಡಿಗೆಗೆ ನೀಡಲಾಗಿದೆ. ಹಲವು ಮಳಿಗೆಗಳನ್ನು ದುರಸ್ತಿಗೊಳಿಸಿ ಬಾಡಿಗೆ ಕಡಿಮೆ ಮಾಡಿ ಹರಾಜು ಹಾಕುವ ಪ್ರಕ್ರಿಯೆ ನಡೆದಿದೆ. 6 ಮಳಿಗೆಗಳ ಪ್ರಕರಣ ನ್ಯಾಯಾಲಯದಲ್ಲಿದೆ’ ಎಂದು ಕುಮಟಾ ಪುರಸಭೆ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ ಹೇಳುತ್ತಾರೆ.

ಬಾಡಿಗೆ ದರ ಹೆಚ್ಚಳವಾಗಿದೆ ಎಂಬ ಜನರ ದೂರಿನ ಹಿನ್ನೆಲೆಯಲ್ಲಿ ಶೇ.25 ರಷ್ಟು ದರ ಕಡಿಮೆ ಮಾಡಲು ಆಡಳಿತ ಮಂಡಳಿಯ ಸಭೆಯಲ್ಲಿ ಠರಾವು ಮಾಡಿ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎ
ಚ್.ಅಕ್ಷತಾ ಅಂಕೋಲಾ ಪುರಸಭೆ ಮುಖ್ಯಾಧಿಕಾರಿ
ವಾಣಿಜ್ಯ ಮಳಿಗೆ ಸಂಕೀರ್ಣದ ಮೊದಲ ಮಹಡಿಯಲ್ಲಿನ 22 ಮಳಿಗೆಗಳನ್ನು 2017 ರಿಂದ ಈವರೆಗೆ 11 ಬಾರಿ ಹರಾಜು ಕರೆದರೂ ದುಬಾರಿ ಬಾಡಿಗೆಯ ಕಾರಣದಿಂದಾಗಿ ಬಾಡಿಗೆದಾರರು ಮುಂದೆ ಬಂದಿರಲಿಲ್ಲ
ವಿದ್ಯಾಧರ ಕಲಾದಗಿ ಕುಮಟಾ ಪುರಸಭೆ ಮುಖ್ಯಾಧಿಕಾರಿ

ಶುದ್ಧ ಕುಡಿಯುವ ನೀರಿನ ಘಟಕವಾದ ಮಳಿಗೆ

ಮುಂಡಗೋಡ ಪಟ್ಟಣ ಪಂಚಾಯಿತಿಗೆ ಸೇರಿರುವ ವಾಣಿಜ್ಯ ಮಳಿಗೆಗಳು ಬಂಕಾಪುರ ರಸ್ತೆ ಸಂತೆ ಮಾರುಕಟ್ಟೆ ಬನ್ನಿಕಟ್ಟೆ ಕಡೆಗಳಲ್ಲಿ ಒಟ್ಟು 47 ವಾಣಿಜ್ಯ ಮಳಿಗೆಗಳಿವೆ. ಇದರಲ್ಲಿ ನಾಲ್ಕು ಅಂಗಡಿಗಳನ್ನು ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಉಪಯೋಗಿಸಲಾಗುತ್ತಿದೆ.

ಬಂಕಾಪುರ ರಸ್ತೆಯಲ್ಲಿರುವ ವಾಣಿಜ್ಯ ಮಳಿಗೆಯ ಸಂಕಿರಣದಲ್ಲಿ ಎರಡನೇ ಮಹಡಿಯು ಸಂಪೂರ್ಣ ಖಾಲಿಯಿದೆ. ಸೌಲಭ್ಯ ಕೊರತೆ ಬಾಡಿಗೆ ಹೆಚ್ಚಳ ಇದಕ್ಕೆ ಕಾರಣ ಎಂಬುದು ವ್ಯಾಪಾರಿಗಳ ದೂರು. ಸಂತೆ ಮಾರುಕಟ್ಟೆಗೆ ತಾಗಿಯೇ ವಾಣಿಜ್ಯ ಮಳಿಗೆಯಿದ್ದು ಅದರಲ್ಲಿರುವ ಆರು ಅಂಗಡಿಗಳು ಎರಡು ವರ್ಷಗಳಿಂದ ಖಾಲಿ ಇವೆ. ನೂತನ ಸಂತೆ ಮಾರುಕಟ್ಟೆ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿರುವುದರಿಂದ ಅಂಗಡಿಗಳು ಜನರಿಗೆ ಉಪಯೋಗ ಇಲ್ಲದಂತಾಗಿವೆ. ಸಂತೆ ಮಾರುಕಟ್ಟೆ ನಿರ್ಮಾಣ ಕಾಮಗಾರಿ ವಿಳಂಬವಾಗಿರುವುದರಿಂದ ಪಟ್ಟಣ ಪಂಚಾಯಿತಿಗೆ ಬರಬೇಕಿದ್ದ ಆರು ಅಂಗಡಿಗಳ ಬಾಡಿಗೆಯೂ ಇಲ್ಲದಂತಾಗಿದೆ.

‘ವಾಣಿಜ್ಯ ಮಳಿಗೆಯಲ್ಲಿ ಅಂಗಡಿಯನ್ನು ಬಾಡಿಗೆ ರೂಪದಲ್ಲಿ ಟೆಂಡರ್‌ ಮೂಲಕ ಪಡೆದಿರುವೆ. ಕಳೆದ ವರ್ಷದಿಂದ ಜಿಎಸ್‌ಟಿ ವಿಧಿಸಿರುವುದರಿಂದ ಬಾಡಿಗೆಯ ಮೊತ್ತ ಹೆಚ್ಚಾಗಿದೆ. ವ್ಯಾಪಾರವೂ ಅಷ್ಟಕಷ್ಟೇ ಇದೆ. ವಾಣಿಜ್ಯ ಮಳಿಗೆಗಳು ಸುಣ್ಣ ಬಣ್ಣ ಕಾಣಬೇಕಿದೆ’ ಎಂದು ವ್ಯಾಪಾರಿಯೊಬ್ಬರು ಹೇಳಿದರು.

ಕುಡುಕರ ಅಡ್ಡೆಯಾದ ವಾಣಿಜ್ಯ ಸಂಕೀರ್ಣ

ಶಿರಸಿ ನಗರಸಭೆಯ ವಾಣಿಜ್ಯ ಸಂಕೀರ್ಣದಲ್ಲಿ ಮಳಿಗೆಗಳೇನೋ ಬಾಡಿಗೆ ನೀಡಲಾಗಿದ್ದರೂ ನಿರ್ಗತಿಕರು ಇದೇ ಆವರಣದಲ್ಲಿ ಬೀಡು ಬಿಡುವ ಕಾರಣಕ್ಕೆ ಅಂಗಡಿಕಾರರ ವ್ಯಾಪಾರಕ್ಕೆ ಹಿನ್ನಡೆಯಾಗುತ್ತಿದೆ ಎಂಬ ದೂರು ಕೇಳಿ ಬರುತ್ತಿದೆ.

‘ನಗರದ ಸುಭಾಶ್ಚಂದ್ರ ವಾಣಿಜ್ಯ ಸಂಕೀರ್ಣದಲ್ಲಿ 35ಕ್ಕೂ ಹೆಚ್ಚು ಅಂಗಡಿ ಬಾಡಿಗೆ ನೀಡಲಾಗಿದೆ. ಆದರೆ ನಿತ್ಯ ಏಳೆಂಟು ಅಪರಿಚಿತ ವ್ಯಕ್ತಿಗಳು ನಿದ್ದೆ ಮಾಡಲು ತಿಂಡಿ ತಿನ್ನಲು ಈ ಸಂಕೀರ್ಣದ ಆವರಣವನ್ನೇ ಸ್ಥಳ ಮಾಡಿಕೊಂಡಿದ್ದಾರೆ. ಇದರ ಜತೆ ಸಂಕೀರ್ಣದ ಮೇಲ್ಭಾಗ ಖಾಲಿ ಇದ್ದು ಕುಡುಕರ ತಾಣವಾಗಿ ಮಾರ್ಪಟ್ಟಿದೆ. ಹೀಗಾಗಿ ಈ ಸಂಕೀರ್ಣದಲ್ಲಿನ ಅಂಗಡಿಕಾರರಿಗೆ ವ್ಯಾಪಾರಕ್ಕೆ ಸಮಸ್ಯೆ ಆಗುತ್ತಿದೆ’ ಎನ್ನುತ್ತಾರೆ ಇಲ್ಲಿನ ವ್ಯಾಪಾರಿಗಳು. ‘ಈ ಹಿಂದೆ ನಿರ್ಗತಿಕರು ಇರುವ ಬಗ್ಗೆ ದೂರುಗಳು ಬಂದಾಗ ನಿವಾರಿಸಲಾಗಿತ್ತು. ಈಗಲೂ ಅಂಥ ಸನ್ನಿವೇಶವಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎನ್ನುತ್ತಾರೆ ಪೌರಾಯುಕ್ತ ಎಚ್.ಕಾಂತರಾಜ್.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಶಾಂತೇಶ ಬೆನಕನಕೊಪ್ಪ, ಎಂ.ಜಿ.ಹೆಗಡೆ, ಎಂ.ಜಿ.ನಾಯ್ಕ, ಮೋಹನ ನಾಯ್ಕ, ವಿಶ್ವೇಶ್ವರ ಗಾಂವ್ಕರ, ಮೋಹನ ದುರ್ಗೇಕರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.