ಕಾರವಾರ: ಆಸ್ತಿ, ನೀರು, ವ್ಯಾಪಾರಿ ತೆರಿಗೆ ಪಾವತಿಗೆ ಜನರು ನಗರಸಭೆ ಕಚೇರಿ ಆವರಣದಲ್ಲಿ ಸರತಿಯಲ್ಲಿ ನಿಲ್ಲುವ ಸಮಸ್ಯೆ ತಪ್ಪಿಸಲು ನಗರಸಭೆ ಮುಂದಾಗಿದೆ. ಜನರಿಗೆ ಅನುಕೂಲ ಕಲ್ಪಿಸಲು ಮನೆ ಬಾಗಿಲಲ್ಲೇ ತೆರಿಗೆ ಸಂಗ್ರಹಣೆಗೆ ಇದೇ ಮೊದಲ ಬಾರಿಗೆ ವ್ಯವಸ್ಥೆ ಕಲ್ಪಿಸಿದೆ.
ಆಸ್ತಿ ದಾಖಲೆಯೊಂದಿಗೆ ನಗರಸಭೆ ಕಚೇರಿಗೆ ಬಂದು ಇಲ್ಲಿನ ತೆರಿಗೆ ಸಂಗ್ರಹಣೆ ಕೌಂಟರ್ ನಲ್ಲಿ ತೆರಿಗೆ ಪ್ರಮಾಣದ ಚಲನ್ ಪಡೆದು ಆ ಬಳಿಕ ಬ್ಯಾಂಕ್‍ಗೆ ತೆರಳಿ ಹಣ ಪಾವತಿಸುವ ವ್ಯವಸ್ಥೆ ಇದೆ. ಏಪ್ರಿಲ್ ತಿಂಗಳಲ್ಲಿ ಆಸ್ತಿ ತೆರಿಗೆ ಮೇಲೆ ಶೇ.5ರಷ್ಟು ರಿಯಾಯಿತಿ ನೀಡುವ ಕಾರಣ ತೆರಿಗೆ ಪಾವತಿಗೆ ಬರುವವರ ಸಂಖ್ಯೆ ಹೆಚ್ಚು. ಇದರಿಂದ ಜನದಟ್ಟಣೆಯೂ ಅಧಿಕವಾಗಿದೆ.
ಬಿಸಿಲ ಝಳದಿಂದಾಗಿ ಸರತಿಯಲ್ಲಿ ನಿಲ್ಲಲು ಜನರು ಪರದಾಡುತ್ತಿದ್ದರೆ, ಸರತಿಯಲ್ಲಿ ನಿಂತು ಕಾಯಬೇಕು ಎಂಬ ಚಿಂತೆಯಿಂದ ತೆರಿಗೆ ಪಾವತಿಗೆ ಹಿಂದೇಟು ಹಾಕುತ್ತಿದ್ದರು. ಇಂತಹ ಸಮಸ್ಯೆ ದೂರಮಾಡುವ ಉದ್ದೇಶದಿಂದ ನಗರಸಭೆ ಮನೆ ಬಾಗಿಲಿನಲ್ಲಿಯೇ ಆಸ್ತಿ ತೆರಿಗೆ ಸಂಗ್ರಹದ ವ್ಯವಸ್ಥೆಯನ್ನೂ ಪರಿಚಯಿಸಿದೆ.
ಹೊಸ ವ್ಯವಸ್ಥೆ ಹೇಗಿದೆ?
‘ಆಸ್ತಿ, ನೀರು, ವ್ಯಾಪಾರಿ (ಟ್ರೇಡ್) ತೆರಿಗೆಗಳ ಪಾವತಿಗೆ ಜನರು ನಗರಸಭೆ ಕಚೇರಿಗೆ ಬಂದು ಚಲನ್ ಪಡೆದುಕೊಂಡು ಆ ಬಳಿಕ ಬ್ಯಾಂಕ್ ಖಾತೆಗೆ ಭರಣ ಮಾಡುವ ಪದ್ಧತಿ ಇದೆ. ಹೀಗೆ ಪಾವತಿಸಲು ಬರುವ ಜನರು ಎದುರಿಸುವ ತೊಂದರೆ ಗಮನಿಸಿ ಅವರಿಗೆ ಅನುಕೂಲವಾಗಿಸಲು ಡೆಬಿಟ್, ಕ್ರೆಡಿಟ್ ಕಾರ್ಡ್ ಮೂಲಕ ಮನೆ ಬಾಗಿಲಿನಲ್ಲೇ ತೆರಿಗೆ ಸಂಗ್ರಹಿಸಲು ನಿರ್ಧರಿಸಿದ್ದೇವೆ’ ಎಂದು ಪೌರಾಯುಕ್ತ ಜುಬಿನ್ ಮಹಾಪಾತ್ರ ‘ಪ್ರಜಾವಾಣಿ’ಗೆ ತಿಳಿಸಿದರು.
‘ಆಸ್ತಿ ತೆರಿಗೆಯನ್ನು ಮನೆಯಿಂದಲೇ ಪಾವತಿಸುವವರು ಆಸ್ತಿ ನೊಂದಣಿ ಸಂಖ್ಯೆ ತಿಳಿಸಿದರೆ ಚಲನ್ ರಚಿಸಿ ಅದನ್ನು ವಾಟ್ಸಾಪ್ ಮೂಲಕ ಮಾಲೀಕರಿಗೆ ಕಳುಹಿಸಲಾಗುತ್ತದೆ. ಜತೆಗೆ ಕ್ಯೂ ಆರ್ ಕೋಡ್ ಕೂಡ ಕಳಿಸಲಾಗುತ್ತದೆ. ಅವರು ಅದನ್ನು ಬಳಸಿ ಆನ್‍ಲೈನ್ ಮೂಲಕ ಹಣ ಪಾವತಿಸಬಹುದು. ಕಾರ್ಡ್ ಮೂಲಕ ಹಣ ಪಾವತಿಸುವುದಾದರೆ ಬಿಲ್ ಕಲೆಕ್ಟರ್‌ಗಳು ಮನೆ ಬಾಗಿಲಿಗೆ ತೆರಳಿ ಸ್ವೈಪಿಂಗ್ ಯಂತ್ರದ ಮೂಲಕ ಹಣ ಪಾವತಿಸಿಕೊಳ್ಳಲಿದ್ದಾರೆ’ ಎಂದೂ ತಿಳಿಸಿದರು.
Quote - ಜನರು ಆಸ್ತಿ ತೆರಿಗೆ ಭರಿಸಲು ಕಚೇರಿಗೆ ಅಲೆದಾಡುವ ಸಮಸ್ಯೆ ತಪ್ಪಿಸುವ ಜತೆಗೆ ತ್ವರಿತವಾಗಿ ತೆರಿಗೆ ಸಂಗ್ರಹಣೆಗೆ ಅನುಕೂಲವಾಗಲಿ ಎಂಬ ಉದ್ದೇಶಕ್ಕೆ ಹೊಸ ವ್ಯವಸ್ಥೆ ಪರಿಚಯಿಸಲಾಗಿದೆ ಜುಬಿನ್ ಮಹಾಪಾತ್ರ ನಗರಸಭೆ ಪೌರಾಯುಕ್ತ
ಜನರ ಆತಂಕ ನಿವಾರಣೆ ‘ಕಳೆದ ಸೆಪ್ಟೆಂಬರ್ ನಲ್ಲಿ ಪೌರಾಡಳಿತ ಇಲಾಖೆ ಭಾರತ್ ಬಿಲ್ ಪೇಮೆಂಟ್ ಸಿಸ್ಟಮ್ (ಬಿ.ಬಿ.ಪಿ.ಎಸ್) ಪರಿಚಯಿಸಿದ್ದು ಆಸ್ತಿ ತೆರಿಗೆಯನ್ನು ಆ್ಯಪ್ ಬಳಸಿ ಗೂಗಲ್ ಪೇ ಅಥವಾ ಫೋನ್ ಪೇ ಮೂಲಕವೂ ಭರಿಸಲು ಅವಕಾಶ ಇದೆ. ಆದರೆ ಸೈಬರ್ ವಂಚನೆಯ ಭಯದಲ್ಲಿ ಬಹುತೇಕ ಜನರು ಹೀಗೆ ಪಾವತಿಸಲು ಹಿಂದೇಟು ಹಾಕುತ್ತಿದ್ದಾರೆ. ಜನರಲ್ಲಿ ವಿಶ್ವಾಸ ತುಂಬಲು ಸ್ವೈಪಿಂಗ್ ಯಂತ್ರವನ್ನೇ ಮನೆ ಬಳಿಗೆ ಒಯ್ಯಲಾಗುತ್ತಿದೆ’ ಎಂದು ಕಂದಾಯ ಅಧಿಕಾರಿ ರವಿ ನಾಯ್ಕ ತಿಳಿಸಿದರು. ‘ಏಳು ಬಿಲ್ ಕಲೆಕ್ಟರ್‌ಗಳಿದ್ದು ಅವರು ಆಯಾ ವಾರ್ಡ್ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ತೆರಿಗೆ ಪಾವತಿಗೆ ನೆರವಾಗುತ್ತಿದ್ದಾರೆ. ವ್ಯಾಪಾರಿ ತೆರಿಗೆ ಸಂಗ್ರಹಣೆಗೂ ಅನುಕೂಲವಾಗುತ್ತಿದೆ. ಹೊಸ ವಿಧಾನದಿಂದ ತೆರಿಗೆ ಸಂಗ್ರಹಣೆ ಪ್ರಮಾಣ ಶೇ.40ರಷ್ಟು ಏರಿಕೆಯಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.