ಕಾರವಾರ: ಇಲ್ಲಿನ ನಗರಸಭೆಯು ಆರ್ಥಿಕ ವರ್ಷದ ಮೊದಲ ನಾಲ್ಕು ತಿಂಗಳಿನಲ್ಲೇ ಒಟ್ಟು ಗುರಿಯ ಶೇ.71 ರಷ್ಟು ಆಸ್ತಿ ತೆರಿಗೆ ಸಂಗ್ರಹಿಸುವುದರೊಂದಿಗೆ ಇದೇ ಮೊದಲ ಬಾರಿಗೆ ದಾಖಲೆ ಮಾಡಿದೆ.
2024–25ನೇ ಆರ್ಥಿಕ ವರ್ಷಕ್ಕೆ ನಗರಸಭೆಯು ನಗರ ವ್ಯಾಪ್ತಿಯ ಸುಮಾರು 22 ಸಾವಿರಕ್ಕೂ ಹೆಚ್ಚು ಅಧಿಕೃತ ಆಸ್ತಿಗಳಿಂದ ₹5.70 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿಯನ್ನು ಇಟ್ಟುಕೊಂಡಿತ್ತು. ಈ ಪೈಕಿ ಜುಲೈ ಅಂತ್ಯಕ್ಕೆ ₹4.02 ಕೋಟಿ ಮೊತ್ತದಷ್ಟು ತೆರಿಗೆ ಸಂಗ್ರಹವಾಗಿದೆ. ಅಲ್ಪ ಅವಧಿಯಲ್ಲಿ ಅತಿ ಹೆಚ್ಚು ಆಸ್ತಿ ತೆರಿಗೆ ಸಂಗ್ರಹಗೊಂಡಿದ್ದು ಇದೇ ಮೊದಲು ಎನ್ನುತ್ತಾರೆ ಅಧಿಕಾರಿಗಳು.
‘ಆಸ್ತಿ ತೆರಿಗೆ ತ್ವರಿತ ಸಂಗ್ರಹಕ್ಕೆ ಮೊದಲ ನಾಲ್ಕು ತಿಂಗಳಿನಲ್ಲಿಯೂ ಆಸ್ತಿ ಮಾಲೀಕರಿಗೆ ಒಟ್ಟು ತೆರಿಗೆಯ ಮೇಲೆ ಶೇ 5ರಷ್ಟು ರಿಯಾಯಿತಿ ನೀಡಲಾಗಿತ್ತು. ಇದು ತೆರಿಗೆ ಸಂಗ್ರಹಕ್ಕೆ ಅನುಕೂಲವಾಯಿತು. ರಿಯಾಯಿತಿ ಇದ್ದ ಅವಧಿಯಲ್ಲೇ ಹೆಚ್ಚು ಜನರು ತೆರಿಗೆ ಪಾವತಿಸಿದರು ಎಂಬುದಾಗಿಯೂ ತಿಳಿಸಿದರು.
‘ಆಸ್ತಿ ತೆರಿಗೆ ಸಂಗ್ರಹದ ಸಲುವಾಗಿ ಏಪ್ರಿಲ್ 1 ರಿಂದ ಮೇ 31ರ ವರೆಗೆ ಶೇ 5ರಷ್ಟು ರಿಯಾಯಿತಿ ನೀಡಲಾಗಿತ್ತು. ಲೋಕಸಭೆ ಚುನಾವಣೆ, ಬಿಸಿಲ ಝಳದ ಪರಿಣಾಮ ಈ ಅವಧಿಯಲ್ಲಿ ಜನರು ತೆರಿಗೆ ಪಾವತಿಸಲು ಕಚೇರಿಗೆ ಬರಲು ಹಿಂದೇಟು ಹಾಕಿದ್ದರು. ಆದರೂ, ಮೊದಲ ತಿಂಗಳು ಶೇ 14ರಷ್ಟು ತೆರಿಗೆ ಸಂಗ್ರಹವಾಗಿತ್ತು. ರಿಯಾಯಿತಿ ಅವಧಿಯನ್ನು ಇದೇ ಮೊದಲ ಬಾರಿಗೆ ನಾಲ್ಕು ತಿಂಗಳವರೆಗೆ ನೀಡಿದ್ದು ತೆರಿಗೆ ಪಾವತಿದಾರರನ್ನು ಆಕರ್ಷಿಸಲು ಅನುಕೂಲವಾಯಿತು’ ಎಂದು ನಗರಸಭೆಯ ಅಧಿಕಾರಿಯೊಬ್ಬರು ತಿಳಿಸಿದರು.
‘ನಗರಸಭೆ ಕಚೇರಿಯ ಪ್ರವೇಶದ್ವಾರದಲ್ಲೇ ಆಸ್ತಿ ತೆರಿಗೆ, ನೀರಿನ ಕರ ಪಾವತಿಯ ವಿಶೇಷ ಕೌಂಟರ್ ಸ್ಥಾಪಿಸಲಾಗಿತ್ತು. ಹಿರಿಯ ನಾಗರಿಕರಿಗೆ ಪ್ರತ್ಯೇಕ ಕೌಂಟರ್ ಕೂಡ ತೆರೆದಿದ್ದೆವು. ನಗರಸಭೆ ವ್ಯಾಪ್ತಿಯಲ್ಲಿರುವ, ಬಿಣಗಾದ ಗ್ರಾಸಿಮ್ ಇಂಡಸ್ಟ್ರಿ ₹59 ಲಕ್ಷದಷ್ಟು ಆಸ್ತಿ ತೆರಿಗೆ ಏಕಕಾಲಕ್ಕೆ ಪಾವತಿಸಿದ್ದು, ತೆರಿಗೆ ಸಂಗ್ರಹ ಪ್ರಮಾಣ ಹೆಚ್ಚಳವಾಯಿತು. ಜುಲೈ ತಿಂಗಳಿನಲ್ಲೇ ಅಂದಾಜು ₹1 ಕೋಟಿ ಮೊತ್ತದಷ್ಟು ತೆರಿಗೆ ಸಂಗ್ರಹವಾಗಿದೆ’ ಎಂದೂ ತಿಳಿಸಿದರು.
22 ಸಾವಿರಕ್ಕೂ ಹೆಚ್ಚು ಅಧಿಕೃತ ಆಸ್ತಿಗಳು ಹಿರಿಯ ನಾಗರಿಕರಿಗೆ ಪ್ರತ್ಯೇಕ ಕೌಂಟರ್ ಜುಲೈ ತಿಂಗಳಿನಲ್ಲೇ ₹1 ಕೋಟಿಯಷ್ಟು ಆಸ್ತಿ ತೆರಿಗೆ ಸಂಗ್ರಹ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.