ADVERTISEMENT

ಕಾರವಾರ | ನಿರ್ವಹಣೆಯಿಲ್ಲದೆ ಪಾಳುಬಿದ್ದ ಕಟ್ಟಡಗಳು: ವಸತಿಗೃಹದಲ್ಲಿ ಸರಿಸೃಪ ವಾಸ

ಗಣಪತಿ ಹೆಗಡೆ
Published 21 ಅಕ್ಟೋಬರ್ 2024, 8:07 IST
Last Updated 21 ಅಕ್ಟೋಬರ್ 2024, 8:07 IST
ಕಾರವಾರದ ವಿವೇಕಾನಂದ ನಗರದ ಬಳಿ ಬಳಕೆಯಾಗದೆ ಇರುವ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳ ವಸತಿಗೃಹದ ಕಟ್ಟಡದ ತುಂಬ ಗಿಡಗಂಟಿ ಬೆಳೆದು ನಿಂತಿದೆ
ಕಾರವಾರದ ವಿವೇಕಾನಂದ ನಗರದ ಬಳಿ ಬಳಕೆಯಾಗದೆ ಇರುವ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳ ವಸತಿಗೃಹದ ಕಟ್ಟಡದ ತುಂಬ ಗಿಡಗಂಟಿ ಬೆಳೆದು ನಿಂತಿದೆ   

ಕಾರವಾರ: ಉತ್ತರ ಕನ್ನಡ ಜಿಲ್ಲೆಗೆ ವರ್ಗಾವಣೆಗೊಂಡು ಬರಲು ಸರ್ಕಾರಿ ನೌಕರರು ಹಿಂದೇಟು ಹಾಕುವುದು ಒಂದೆಡೆಯಾದರೆ, ಇಲ್ಲಿಗೆ ಬಂದವರೂ ಬಾಡಿಗೆ ಮನೆ ಹುಡುಕಲು ಪರದಾಡುವ ಸ್ಥಿತಿ ಎದುರಾಗುತ್ತದೆ. ಏಕೆಂದರೆ ಸೀಮಿತ ಸರ್ಕಾರಿ ವಸತಿಗೃಹಗಳ (ಕ್ವಾಟ್ರಸ್) ಲಭ್ಯತೆ, ಇದ್ದರೂ ನಿರ್ವಹಣೆ ಕೊರತೆಯ ಕಾರಣಕ್ಕೆ ನೌಕರರು ಬಾಡಿಗೆ ಮನೆ ಮೊರೆಹೋಗುವಂತಾಗಿದೆ.

ಜಿಲ್ಲಾಕೇಂದ್ರ ಸೇರಿದಂತೆ ತಾಲ್ಲೂಕುಗಳಲ್ಲಿ ಹತ್ತಾರು ಅಧಿಕಾರಿಗಳು, ನೌಕರರ ವಸತಿಗೃಹ ಬಳಕೆ ಇಲ್ಲದೆ ಪಾಳುಬಿದ್ದಿದೆ. ಅವುಗಳನ್ನು ನೆಲಸಮಗೊಳಿಸುವ ಕೆಲಸ, ಇಲ್ಲವೇ ನಿರ್ವಹಣೆಯೂ ನಡೆಯದ ಕಾರಣದಿಂದ ಗಿಡಗಂಟಿ ಬೆಳೆದು ಅವು ಸರಿಸೃಪಗಳ ಆವಾಸವಾಗಿ, ಅಕ್ರಮ ಚಟುವಟಿಕೆಗೆ ತಾಣವಾಗಿ ಪರಿಣಮಿಸಿದೆ. ಇದರಿಂದ ಅಂಥ ಕಟ್ಟಡಗಳ ನೆರೆಹೊರೆಯಲ್ಲಿ ವಾಸ ಮಾಡುವವರು ತೊಂದರೆ ಅನುಭವಿಸುವ ದೂರು ಹೆಚ್ಚುತ್ತಿದೆ.

ಕಾರವಾರದ ಕೋಡಿಬಾಗದಲ್ಲಿ ರಾಷ್ಟ್ರೀಯ ಹೆದ್ದಾರಿ–66ರ ಅಂಚಿನಲ್ಲೇ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳ ವಸತಿಗೃಹಗಳು ಪಾಳುಬಿದ್ದು ಹಲವು ವರ್ಷ ಕಳೆದಿವೆ. ಅವುಗಳ ಸುತ್ತ ಗಿಡಗಂಟಿ ಬೆಳೆದು ನಿಂತು, ಸರಿಸೃಪ, ಹುಳಹುಪ್ಪಟೆಗಳ ಗೂಡಾಗಿದೆ. ಪಕ್ಕದಲ್ಲಿರುವ ವಿವೇಕಾನಂದ ನಗರದ ಮನೆಗಳ ಬಳಿ ಆಗಾಗ ಹಾವು, ಇನ್ನಿತರ ಪ್ರಾಣಿಗಳ ಕಾಟ ಹೆಚ್ಚಲು ಈ ಕಟ್ಟಡಗಳು ಕಾರಣ ಎಂಬುದು ಜನರ ದೂರು.

ADVERTISEMENT

‘ಅನುದಾನ ಇಲ್ಲದೆ ಕಟ್ಟಡ ಮರುನಿರ್ಮಾಣ ಸಾಧ್ಯವಾಗಿರಲಿಲ್ಲ. ಅನುದಾನಕ್ಕೆ ಬೇಡಿಕೆ ಇಡಲಾಗಿದ್ದು, ಮಂಜೂರಾದ ಬಳಿಕ ಹೊಸ ಕಟ್ಟಡ ನಿರ್ಮಿಸುತ್ತೇವೆ’ ಎಂಬುದಾಗಿ ತಾಲ್ಲೂಕು ಪಂಚಾಯಿತಿ ಇಒ ವೀರನಗೌಡರ ಏಗನಗೌಡರ್ ಹೇಳುತ್ತಾರೆ.

ಶಿರಸಿ ತಾಲ್ಲೂಕು ಪಂಚಾಯಿತಿ ಹಾಗೂ ಎಪಿಎಂಸಿಯ ಕೆಲ ವಸತಿ ಗೃಹಗಳು ಸಂಪೂರ್ಣ ಹಾಳು ಬಿದ್ದಿವೆ. ಯಲ್ಲಾಪುರ ರಸ್ತೆ ಪಕ್ಕದ ಸ್ತ್ರೀಶಕ್ತಿ ಭವನದ ಹಿಂಭಾಗದಲ್ಲಿ ತಾಲ್ಲೂಕು ಪಂಚಾಯಿತಿಗೆ ಸೇರಿದ 6, ಎಪಿಎಂಸಿ ಆವರಣದಲ್ಲಿರುವ 4 ವಸತಿ ಗೃಹಗಳು ಬಳಕೆಯಿಲ್ಲದೆ ಹಾಳಾಗಿವೆ.

‘ವಸತಿ ಗೃಹಗಳ ಮರು ನಿರ್ಮಾಣದ ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ. ಶೀಘ್ರವೇ ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎನ್ನುತ್ತಾರೆ ತಾಲ್ಲೂಕು ಪಂಚಾಯಿತಿ ಇಒ ಸತೀಶ ಹೆಗಡೆ.

ಭಟ್ಕಳ ಪಟ್ಟಣದ ಕೆ.ಎಚ್.ಬಿ ಕಾಲೊನಿಯಲ್ಲಿ ಪಿಡಬ್ಲ್ಯೂಡಿ ಸಿಬ್ಬಂದಿ ಹಾಗೂ ಕರಾವಳಿ ಪೊಲೀಸರು ಉಳಿಯುತ್ತಿದ್ದ ವಸತಿ ಮನೆಗಳು ಶಿಥಿಲಾವಸ್ಥೆ ಹೊಂದಿದ್ದು, ಪಾಳು ಬಿದ್ದ ಕಟ್ಟಡವಾಗಿದೆ. ದುರಸ್ತಿ ಇಲ್ಲದೆ ಪ್ರಾಣಿಗಳ ವಾಸಸ್ಥಾನವಾಗಿದೆ. ಸರ್ಕಾರಿ ಆಸ್ಪತ್ರೆಯ ಪಕ್ಕದಲ್ಲಿರುವ ಸಿಬ್ಬಂದಿ ಹಾಗೂ ವೈದ್ಯರ ವಾಸದ ಮನೆಗಳು ಶಿಥಿಲಗೊಂಡಿದ್ದ ಕಾರಣ ತೆರವುಗೊಳಿಸಿದ್ದು, ಹೊಸ ಕಟ್ಟಡ ನಿರ್ಮಿಸಿಲ್ಲ.

ಯಲ್ಲಾಪುರ ಪಟ್ಟಣದ ಹಳೆ ತಹಶೀಲ್ದಾರ್‌ ಕಾರ್ಯಾಲಯದ ಪಕ್ಕದಲ್ಲಿರುವ ಕಂದಾಯ ಇಲಾಖೆಯ ವಸತಿಗೃಹಗಳ ಸ್ಥಿತಿ ಉತ್ತಮವಾಗಿಲ್ಲ. ಇಲ್ಲಿನ ಒಂದೆರಡು ವಸತಿಗೃಹಗಳು ಬಳಕೆ ಇಲ್ಲದೆ ಪಾಳು ಬಿದ್ದಿವೆ. ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರಿಗಾಗಿ ನಿರ್ಮಿಸಲು ಉದ್ದೇಶಿಸಿದ್ದ ವಸತಿಗೃಹಗಳ ಕಾಮಗಾರಿ ಅನುದಾನದ ಕೊರತೆಯಿಂದ ಅರ್ಧಕ್ಕೆ ನಿಂತಿದೆ.

ಹೊನ್ನಾವರದಲ್ಲಿ ದಿನದಿಂದ ದಿನಕ್ಕೆ ಬಾಡಿಗೆ ಮನೆಗಳ ಬೇಡಿಕೆ ಹೆಚ್ಚುತ್ತಿದೆ. ಲೋಕೋಪಯೋಗಿ ಇಲಾಖೆಯ ಸುಪರ್ದಿಯಲ್ಲಿರುವ ಎಲ್ಲ 19 ವಸತಿಗೃಹ ಭರ್ತಿಯಾಗಿವೆ. ಅವು ನಿರ್ವಹಣೆ ಕೊರತೆ ಎದುರಿಸುತ್ತಿರುವ ದೂರುಗಳಿವೆ. ಹೌಸಿಂಗ್ ಬೋರ್ಡ್ ಕಾಲೊನಿಯಲ್ಲಿ ಸರ್ಕಾರಿ ನೌಕರರಿಗೆ ಮೀಸಲಿದ್ದ 20 ಮನೆಗಳಲ್ಲಿ ಸ್ಥಳೀಯ ನೌಕರರು ಹಾಗೂ ಅವರ ಸಂಬಂಧಿಕರು ದಶಕಗಳಿಂದ ಅಲ್ಲೇ ಠಿಕಾಣಿ ಹೂಡಿದ್ದಾರೆ. ಮನೆಗಳ ಬಾಡಿಗೆ ಗಗನ ಮುಖಿಯಾಗಿದ್ದು ಸರ್ಕಾರಿ ವಸತಿ ಗೃಹಗಳಿಗೆ ಸಂಬಂಧಿಸಿದ ಅವಾಂತರಗಳ ನಡುವೆ ಹೊರಗಿನಿಂದ ಬಂದ ನೌಕರರು ಬಾಡಿಗೆ ಮನೆ ಸಿಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

‘ಲೋಕೋಪಯೋಗಿ ಇಲಾಖೆ 19 ವಸತಿಗೃಹಗಳ ನಿರ್ವಹಣೆ ಮಾಡುತ್ತಿದೆ. ತಾಂತ್ರಿಕ ಸಮಸ್ಯೆ ಕಾರಣಕ್ಕೆ ಹೌಸಿಂಗ್ ಬೋರ್ಡ್ ಕಾಲೊನಿಯ ಮನೆಗಳ ನಿರ್ವಹಣೆ ನಿಲ್ಲಿಸಲಾಗಿದೆ’ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆ ಹೊನ್ನಾವರ ಉಪವಿಭಾಗದ ಎಇಇ ಎಂ.ಎಸ್.ನಾಯ್ಕ.

ದಾಂಡೇಲಿ ನಗರದಲ್ಲಿ ಸುಮಾರು 60 ವರ್ಷಗಳ ಹಿಂದೆ ಪೋಲೀಸ್ ವಸತಿ ನಿಗಮದ ವತಿಯಿಂದ ನಿರ್ಮಿಸಿದ್ದ 15ಕ್ಕೂ ಹೆಚ್ಚು ವಸತಿಗೃಹಗಳು ಹಾಗೂ ಎಸ್.ಬಿ.ಐ. ಬ್ಯಾಂಕ್ ನೌಕರರ 10 ವಸತಿ ಗೃಹಗಳು ನಗರದ ಹೃದಯ ಭಾಗದಲ್ಲಿದ್ದು ಸಂಪೂರ್ಣ ಹಾಳಾಗಿ ಅಕ್ರಮ ಚಟುವಟಿಕೆ ತಾಣಗಳಾಗಿವೆ. ಸಂಜೆ ಆಗುತ್ತಿದ್ದಂತೆ ಅನೇಕರು ಸಿಗರೇಟು, ಮದ್ಯಪಾನ ಮಾಡುವುದು ಹೆಚ್ಚಾಗಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸಿಸುವ ಜನರಿಗೆ ಇಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಹಾಗೂ ಹಾಳು ಬಿದ್ದು ಮನೆಗಳಿಂದ ಸರಿಸೃಪಗಳು ಅಕ್ಕಪಕ್ಕದ ಮನೆಗೆ ಹರಿದು ಬರುತ್ತಿರುವ ದೂರುಗಳಿವೆ.

ಅಂಕೋಲಾ ತಾಲ್ಲೂಕಿನಲ್ಲಿ ಹಲವು ವಸತಿ ಗೃಹಗಳಲ್ಲಿ ನೌಕರರು ವಾಸ ಮಾಡದೆ ವಸತಿ ಗೃಹಗಳು ಪಾಳು ಬಿದ್ದಿವೆ. ಹೊಸಗದ್ದೆಯಲ್ಲಿ ಲೋಕೋಪಯೋಗಿ ಇಲಾಖೆಯ ನೌಕರರಿಗಾಗಿ ನಿರ್ಮಾಣ ಮಾಡಿದ ವಸತಿ ಗೃಹ ಸುಮಾರು ವರ್ಷಗಳಿಂದ ಬಾಗಿಲು ಮುಚ್ಚಿದೆ. ಹಟ್ಟಿಕೇರಿಯ ಮೈದಾನದ ಪಕ್ಕ ವೈದ್ಯಕೀಯ ಸಿಬ್ಬಂದಿಗೆ ನಿರ್ಮಿಸಿದ್ದ ವಸತಿ ಗೃಹ ಪಾಳು ಬಿದ್ದು ಕುಡುಕರ ಅಡ್ಡವಾಗಿ ಬದಲಾಗಿದೆ. ಇಂತದ್ದೇ ಸ್ಥಿತಿ ಅಗಸೂರು, ಬೆಳಂಬಾರ ಮುಂತಾದ ಕಡೆಯಲ್ಲಿವೆ.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಶಾಂತೇಶ ಬೆನಕನಕೊಪ್ಪ, ಎಂ.ಜಿ.ಹೆಗಡೆ, ಜ್ಞಾನೇಶ್ವರ ದೇಸಾಯಿ, ಪ್ರವೀಣಕುಮಾರ ಸುಲಾಖೆ, ಮೋಹನ ನಾಯ್ಕ, ವಿಶ್ವೇಶ್ವರ ಗಾಂವ್ಕರ, ಮೋಹನ ದುರ್ಗೇಕರ.

ದಾಂಡೇಲಿ ನಗರದ ಸೋಮಾನಿ ವೃತ್ತದ ಸಮೀಪ ಇರುವ ಪಾಳು ಬಿದ್ದಿರುವ ಹಳೆಯ ಪೊಲೀಸ್ ವಸತಿ ಗೃಹಗಳ ಕಟ್ಟಡದ ತುಂಬ ಗಿಡ ಮರ ಬೆಳೆದುಕೊಂಡಿವೆ
ಜೊಯಿಡಾ ತಾಲ್ಲೂಕಿನ ಕುಂಬಾರವಾಡಾ ವನ್ಯ ಜೀವಿ ವಲಯ ವ್ಯಾಪ್ತಿಯ ಅರಣ್ಯ ಇಲಾಖೆ ಸಿಬ್ಬಂದಿ ವಸತಿ ಗೃಹಗಳು ನಿರ್ವಹಣೆ ಇಲ್ಲದೆ ಮೂಲೆಗುಂಪಾಗಿವೆ
ಬಾಡಿಗೆ ಮನೆಯಲ್ಲಿ ವಾಸವಿರುವ ನೌಕರರಿಗೆ ವಸತಿಗೃಹ ದುರಸ್ತಿಪಡಿಸಿ ಕೊಡಬೇಕು. ದುಸ್ಥಿತಿಯಲ್ಲಿರುವ ಕಟ್ಟಡ ತೆರವು ಮಾಡಿ ಹೊಸ ಸಂಕೀರ್ಣ ನಿರ್ಮಿಸಬೇಕು
ಮಂಜುನಾಥ ನಾಯ್ಕ ಶಿರಸಿ ನಿವಾಸಿ
ಬೆಲೆಬಾಳುವ ಜಾಗದಲ್ಲಿ ಪಾಳು ಬಿದ್ದಿರುವ ಸರ್ಕಾರಿ ಇಲಾಖೆಯ ವಸತಿಗೃಹಗಳನ್ನು ದುರಸ್ತಿಗೊಳಿಸಬೇಕು ಇಲ್ಲವೇ ನೆಲಸಮಗೊಳಿಸಿ ಅಂಥ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕೆ ಒದಗಿಸಬೇಕು
ಪ್ರಕಾಶ ಮುಂಡಗೋಡ ಸಾಮಾಜಿಕ ಕಾರ್ಯಕರ್ತ
ಬಾಡಿಗೆ ಮನೆಗೆ ಅಲೆದಾಟ
ಜೊಯಿಡಾ ಮತ್ತು ಇದೇ ತಾಲ್ಲೂಕಿನ ವಿವಿಧ ಭಾಗಗಳಲ್ಲಿರುವ ಪೊಲೀಸ್ ಅರಣ್ಯ ಇಲಾಖೆಯ ಸಿಬ್ಬಂದಿ ವಸತಿಗೃಹಗಳು ನಿರ್ವಹಣೆ ಕಾಣದೆ ಪಾಳು ಬಿದ್ದಿದೆ. ಸಿಬ್ಬಂದಿ ಬಾಡಿಗೆ ಮನೆಗಾಗಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ತಾಲ್ಲೂಕು ಕೇಂದ್ರ ಜೊಯಿಡಾದಲ್ಲಿರುವ ಕೆಲವು ಪೊಲೀಸ್ ವಸತಿ ಗೃಹಗಳು ಕುಂಬಾರವಾಡ ಗುಂದ ಪಣಸೋಲಿ ಜಗಲಪೇಟ ತಿನೈಘಾಟ ಉಳವಿ ಮುಂತಾದ ವಲಯಗಳಲ್ಲಿ ಇರುವ ಅರಣ್ಯ ಇಲಾಖೆ ಸಿಬ್ಬಂದಿ ವಸತಿ ಗೃಹಗಳು ಹಲವು ವರ್ಷಗಳಿಂದ ದುರಸ್ತಿ ಕಂಡಿಲ್ಲ ವಸತಿಗೃಹಗಳ ನಿರ್ವಹಣೆ ಸರಿಯಾಗಿಲ್ಲದ ಕಾರಣ ಹಲವು ನೌಕರರು ಜೊಯಿಡಾ ಮತ್ತು ದಾಂಡೇಲಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದಾರೆ ಎಂಬ ದೂರು ಇದೆ. ‘ಅನುದಾನ ಬಂದಂತೆ ಹಂತ ಹಂತವಾಗಿ ವಸತಿಗೃಹಗಳನ್ನು ದುರಸ್ತಿ ಮಾಡಲಾಗುತ್ತಿದೆ’ ಎನ್ನುತ್ತಾರೆ ಕುಂಬಾರವಾಡ ಆರ್.ಎಫ್.ಒ ಎಸ್.ಬೈಲಾ.
ಚಾವಣಿಗೆ ಪ್ಲಾಸ್ಟಿಕ್ ಹೊದಿಕೆ
ಮುಂಡಗೋಡ ಪಟ್ಟಣದ ಅರಣ್ಯ ಇಲಾಖೆ ಆವರಣ ಪೊಲೀಸ್‌ ಠಾಣೆಯ ಆವರಣ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಸಿಬ್ಬಂದಿಗಾಗಿ ಹಲವು ವರ್ಷಗಳ ಹಿಂದೆಯೇ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಆದರೆ ಅವುಗಳು ಆರಂಭವಾದಾಗ ಕಂಡಿದ್ದ ಸುಣ್ಣ ಬಣ್ಣವನ್ನು ಮತ್ತೆ ಕಂಡಿಲ್ಲ ಎಂಬಂತಿವೆ. ಇನ್ನೂ ಕೆಲವು ವಸತಿಗೆ ಯೋಗ್ಯವಲ್ಲದ ಸ್ಥಿತಿಯಲ್ಲಿದ್ದು ಇಂದೋ ನಾಳೆ ಬೀಳುವ ಸ್ಥಿತಿಯಲ್ಲಿವೆ. ಅಂತವುಗಳು ಹಾವು ಹಂದಿಗಳ ವಾಸಸ್ಥಾನವಾಗಿವೆ. ಪೊಲೀಸ್‌ ವಸತಿಗೃಹಗಳು ಶಿಥಿಲಗೊಂಡಿರುವುದನ್ನೇ ಕೆಲವು ಸಿಬ್ಬಂದಿ ದುರಸ್ತಿಗೊಳಿಸಿಕೊಂಡು ಮನೆಯ ಚಾವಣಿಗೆ ಪೂರ್ತಿಯಾಗಿ ಪ್ಲಾಸ್ಟಿಕ್‌ ಹೊದಿಕೆ ಹಾಕಿಸಿಕೊಂಡು ವಾಸಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.