ADVERTISEMENT

ಕಾರವಾರ: ಸರ್ಕಾರಿ ಕಚೇರಿಗಳಳ ಆವರಣ ಗುಜರಿ ವಾಹನ ನಿಲ್ದಾಣ

ಗಣಪತಿ ಹೆಗಡೆ
Published 30 ಸೆಪ್ಟೆಂಬರ್ 2024, 5:25 IST
Last Updated 30 ಸೆಪ್ಟೆಂಬರ್ 2024, 5:25 IST
ಕಾರವಾರದ ಅಬಕಾರಿ ಇಲಾಖೆ ಉಪ ಆಯುಕ್ತರ ಕಚೇರಿ ಆವರಣದಲ್ಲಿ ನಿಲುಗಡೆ ಮಾಡಿರುವ ವಾಹನಗಳು ದುಸ್ಥಿತಿಯ ಹಂತ ತಲುಪಿದ್ದು, ಅದರ ಸುತ್ತ ಗಿಡಗಂಟಿ ಬೆಳೆದು ನಿಂತಿದೆ
ಕಾರವಾರದ ಅಬಕಾರಿ ಇಲಾಖೆ ಉಪ ಆಯುಕ್ತರ ಕಚೇರಿ ಆವರಣದಲ್ಲಿ ನಿಲುಗಡೆ ಮಾಡಿರುವ ವಾಹನಗಳು ದುಸ್ಥಿತಿಯ ಹಂತ ತಲುಪಿದ್ದು, ಅದರ ಸುತ್ತ ಗಿಡಗಂಟಿ ಬೆಳೆದು ನಿಂತಿದೆ   

ಕಾರವಾರ: ಜಿಲ್ಲೆಯ ಹಲವು ಇಲಾಖೆಗಳ ಕಚೇರಿ ಆವರಣಗಳು ಕಚೇರಿಯೊ ಅಥವಾ ಗುಜರಿ ಅಡ್ಡೆಯೋ? ಎಂಬ ಶಂಕೆ ಮೂಡಲು ಆಸ್ಪದ ನೀಡುತ್ತಿವೆ. ವರ್ಷಾನುಗಟ್ಟಲೆಯಿಂದ, ತುಕ್ಕು ಹಿಡಿದ ವಾಹನಗಳ ನಿಲುಗಡೆ ಇಂಥ ಅನುಮಾನ ಮೂಡಲು ಕಾರಣವಾಗುತ್ತಿದೆ.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೇ ಬಳಕೆಗೆ ಬಾರದ ಜೀಪುಗಳ ನಿಲುಗಡೆ ಮಾಡಲಾಗಿದೆ. ಅಬಕಾರಿ ಇಲಾಖೆ ಕಚೇರಿ, ಪೊಲೀಸ್ ಠಾಣೆಗಳ ಆವರಣ ಗುಜರಿ ವಾಹನಗಳ ನಿಲುಗಡಗೆ ಮೀಸಲಿಟ್ಟಂತಾಗಿದೆ. ವಿವಿಧ ಅಪರಾಧ ಪ್ರಕರಣದಲ್ಲಿ ವಶಕ್ಕೆ ಪಡೆದ ವಾಹನಗಳನ್ನು ಅತ್ತ ವಿಲೇವಾರಿಯೂ ಮಾಡಲಾಗದೆ, ಇತ್ತ ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಲಾಗದೆ ಸಿಬ್ಬಂದಿ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಮಾಜಾಳಿಯ ಚೆಕ್‍ಪೋಸ್ಟ್ ಸುತ್ತಮುತ್ತ 35ಕ್ಕೂ ಹೆಚ್ಚು ವಾಹನಗಳು ಹೆದ್ದಾರಿಯ ಎರಡೂ ಬದಿಯಲ್ಲಿಯೂ ನಿಲುಗಡೆಯಾಗಿದೆ. ಲಾರಿ, ಕಾರು ಸೇರಿದಂತೆ ಐದಾರು ವರ್ಷಗಳಿಂದ ನಿಂತ ವಾಹನಗಳೂ ಇಲ್ಲಿವೆ.

ADVERTISEMENT

‘ಅಪರಾಧ ಪ್ರಕರಗಳಲ್ಲಿ ವಶಕ್ಕೆ ಪಡೆಯಲಾಗುವ ವಾಹನಗಳನ್ನು ಶೆಡ್‍ನಲ್ಲಿ ನಿಲುಗಡೆ ಮಾಡಲು ವ್ಯವಸ್ಥೆ ಇಲ್ಲ. ಶೆಡ್ ನಿರ್ಮಾಣಕ್ಕೆ ಪ್ರತ್ಯೇಕ ಅನುದಾನ ಸಿಗದು. ಅಲ್ಲದೆ ವಾಹನಗಳನ್ನು ಬಳಕೆ ಮಾಡಲು ನಿರ್ಬಂಧವೂ ಇರುವ ಕಾರಣಕ್ಕೆ ಅವು ಹಾಳಾಗುತ್ತಿವೆ. ವಾಹನ ಮಾಲೀಕರು ಷರತ್ತು ಪಾಲಿಸಿ ವಾಹನ ಒಯ್ಯಲೂ ಅವಕಾಶವಿದೆ. ಬಹುತೇಕ ಮಂದಿ ಒಯ್ಯಲು ಮನಸ್ಸು ಮಾಡುವುದಿಲ್ಲ’ ಎಂದು ಅಬಕಾರಿ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು. 

ಶಿರಸಿ ತಾಲ್ಲೂಕಿನ ವಿವಿಧ ಸರ್ಕಾರಿ ಇಲಾಖೆಗಳ ವ್ಯಾಪ್ತಿಯಲ್ಲಿ ಅಪಘಾತ, ಅಪರಾಧ ಹಾಗೂ ಇನ್ನಿತರ ಪ್ರಕರಣಗಳಲ್ಲಿ ವಶಪಡಿಸಿಕೊಂಡ ವಾಹನಗಳ ನಿಲುಗಡೆಗೆ ಸರಿಯಾದ ಶೆಡ್ ವ್ಯವಸ್ಥೆ ಇಲ್ಲದ ಕಾರಣ ಬಹುತೇಕ ವಾಹನಗಳು ಹಾಳಾಗಿವೆ. ಅರಣ್ಯ, ಅಬಕಾರಿ ಹಾಗೂ ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ 75ಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆದು ಇಲಾಖೆ ಕಚೇರಿ ಸುತ್ತಮುತ್ತಲ ಖಾಲಿ ಜಾಗದಲ್ಲಿ ಇಡಲಾಗಿದೆ. ಮಳೆ, ಬಿಸಿಲಿಗೆ ಬಹುತೇಕ ವಾಹನಗಳು ತುಕ್ಕು ಹಿಡಿದು ಬಣ್ಣ ಕಳೆದುಕೊಂಡಿವೆ.

ಭಟ್ಕಳ ಅರಣ್ಯ ಇಲಾಖೆಯಲ್ಲಿ 8ಕ್ಕಿಂತ ಹೆಚ್ಚೂ ವಾಹನಗಳನ್ನು ವಶಕ್ಕೆ ಪಡೆದು ವರ್ಷಗಳೇ ಕಳೆದರೂ ಇನ್ನೂ ತನಕ ವಿಲೇವಾರಿ ಮಾಡಿಲ್ಲ. ಇವುಗಳಲ್ಲಿ ಕೆಲವು ವಾಹನಗಳು ತುಕ್ಕು ಹಿಡಿದು ಗುಜರಿಯಾಗಿದೆ. ಪುರಸಭೆಯಲ್ಲಿ ಚಲಿಸಲು ಸುಸ್ಥಿತಿಯಲ್ಲಿರದ ಜೆಸಿಬಿ ಸೇರಿದಂತೆ 7 ವಾಹವನ್ನು ಪುರಸಭೆಯ ವಾಹನ ಶೇಡ್‍ನಲ್ಲಿ ಇರಿಸಲಾಗಿದೆ.

ಹೊನ್ನಾವರ ಪೊಲೀಸ್ ಠಾಣೆಯ ಪಕ್ಕದ ಜಾಗ ಹೆಸರಿಗೆ ಮಾತ್ರ ಪೊಲೀಸ್ ಪರೇಡ್ ಮೈದಾನವಾಗಿದ್ದು ಅಸಲಿಗೆ ಇದು ಗುಜರಿ ವಾಹನಗಳ ಸಂತೆಯಾಗಿದೆ. ವಶಕ್ಕೆ ಪಡೆದ ವಾಹನಗಳು ಇಟ್ಟಲ್ಲೇ ಇವೆ, ಅವುಗಳ ಎಂಜಿನ್ ಮಾತ್ರ ಮಾಯವಾಗಿವೆ ಎಂದು ಜನರು ದೂರುತ್ತಿದ್ದಾರೆ.

ಅಂಕೋಲಾ ಅಬಕಾರಿ ಇಲಾಖೆ ಕಚೇರಿ ಆವರಣದಲ್ಲಿ 20 ರಷ್ಟು ವಾಹನಗಳು ವಿಲೇವಾರಿ ಮಾಡಲಾಗದೆ ತುಕ್ಕು ಹಿಡಿದು ನಿಂತಿವೆ. ಪೊಲೀಸ್ ಠಾಣೆ ಆವರಣದಲ್ಲಿಯೂ ಇಂತದ್ದೇ ಸ್ಥಿತಿ ಕಾಣಸಿಗುತ್ತಿದೆ.

‘12 ವಾಹನಗಳ ಹರಾಜು ಪ್ರಕ್ರಿಯೆಗೆ ಒಳಪಡಿಸಲಾಗುತ್ತಿದ್ದು, ಉಪ ಆಯುಕ್ತರ ಅನುಮತಿಗೆ ಕಾಯಲಾಗುತ್ತಿದೆ’ ಎನ್ನುತ್ತಾರೆ ಅಬಕಾರಿ ಉಪ ನಿರೀಕ್ಷಕಿ ಮಧುರಾ ಪಿ.

ಜೊಯಿಡಾ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ–4ಎನ ಅನಮೋಡ ಅಬಕಾರಿ ತನಿಖಾ ಠಾಣೆಯ ಆವರಣದಲ್ಲಿ ತುಕ್ಕು ಹಿಡಿಯುತ್ತ ನಿಂತ ವಾಹನಗಳು

ಕುಮಟಾ ತಾಲ್ಲೂಕಿನ ವಿವಿಧ ಇಲಾಖೆಗಳಲ್ಲಿ ವರ್ಷದ ಹಿಂದೆ ಹಲವು ವಾಹನಗಳು ಗುಜರಿಗೆ ಬಿದ್ದಂತೆ ಇದ್ದವು. ಆದರೆ, ಅವುಗಳನ್ನು ಈಚೆಗೆ ವ್ಯವಸ್ಥಿತಿ ರೀತಿಯಲ್ಲಿ ವಿಲೇವಾರಿ ಮಾಡಲಾಗಿದೆ ಎಂಬುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ‘ಬಳಕೆಗೆ ಬಾರದ ಒಂದು ಆಂಬುಲೆನ್ಸ್ ಅನ್ನು ಎರಡು ವರ್ಷಗಳ ಹಿಂದೆ ವಿಲೇವಾರಿ ಮಾಡಲಾಗಿದೆ’ ಎಂದು ತಾಲ್ಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಗಣೇಶ ನಾಯ್ಕ ತಿಳಿಸಿದರು.

ದಾಂಡೇಲಿ ನಗರಸಭೆ ಆವರಣದಲ್ಲಿ ತುಕ್ಕು ಹಿಡಿದ ಸ್ಥಿತಿಯಲ್ಲಿ ನಿಂತ ಶೌಚಾಲಯ ತ್ಯಾಜ್ಯ ಸಂಗ್ರಹಿಸುವ ಕಂಟೇನರ್

ಸಿದ್ದಾಪುರ ತಾಲ್ಲೂಕಿನ ಪೊಲೀಸ್ ಠಾಣೆಯಲ್ಲಿ ಪ್ರಕರಣಕರಣ ದಾಖಲೆಗೊಂಡ 10 ನಾಲ್ಕು ಚಕ್ರದ ವಾಹನಗಳು, 22 ದ್ವಿಚಕ್ರ ವಾಹನಗಳು ಇವೆ. ವಶಪಡಿಸಿಕೊಂಡಿರುವ ವಾಹನಗಳ ಮಾಲಿಕರಿಗೆ ಈಗಾಗಲೇ ನೋಟೀಸ್ ನೀಡಿದ್ದು, ಸರಿಯಾದ ದಾಖಲಾತಿಗಳ ಕೊರತೆ ಇರುವುದರಿಂದ ಹಲವು ಮಾಲಿಕರು ವಾಹನಗಳನ್ನು ಬಿಡಿಸಿಕೊಳ್ಳಲು ಆಸಕ್ತಿ ತೋರುತ್ತಿಲ್ಲ. ನೋಟೀಸ್ ಅವಧಿ ಮುಗಿದ ಬಳಿಕ ನ್ಯಾಯಾಲಯದ ಒಪ್ಪಿಗೆ ಪಡೆದು ಆರ್.ಟಿ.ಒ ಅವರಿಂದ ದರ ನಿಗದಿಪಡಿಸಿ ಹರಾಜು ಪ್ರಕ್ರಿಯೆಯನ್ನು ನಡೆಸುತ್ತೇವೆ ಎಂದು ಸಿಪಿಐ ಕುಮಾರ್ ಕೆ. ಮಾಹಿತಿ ನೀಡಿದರು.

ವಿವಿಧ ಪ್ರಕರಣಗಳಲ್ಲಿ ಹೊನ್ನಾವರ ಠಾಣೆ ಪೊಲೀಸರು ವಶಪಡಿಸಿಕೊಂಡಿರುವ ದ್ವಿಚಕ್ರ ವಾಹನಗಳು ಠಾಣೆಯ ಆವರಣದಲ್ಲಿ ಮಳೆ ಬಿಸಿಲಿಗೆ ಸಿಲುಕಿ ಹಾಳಾಗಿದೆ

ದಾಂಡೇಲಿ ನಗರಸಭೆ ಪೌರಾಯುಕ್ತರು ಉಪಯೋಗಿಸುವ ವಾಹನವು ಮೂರು ವರ್ಷದಿಂದ ಮೂಲೆ ಸೇರಿದೆ. ಕಸ ವಿಲೇವಾರಿಯ 2  ಕಂಟೇನರ್ ಸೇರಿದಂತೆ ಒಟ್ಟು 6 ವಾಹನಗಳು ನಗರಸಭೆ ಆವರಣದಲ್ಲಿ ನಿಂತಿವೆ. ಅಬಕಾರಿ ಇಲಾಖೆ, ಆರ್.ಟಿ.ಓ ಹಾಗೂ ಪೋಲೀಸ ಠಾಣೆಯಲ್ಲಿ ವಿವಿಧ ಪ್ರಕರಣಗಳಲ್ಲಿ ವಶ ಪಡಿಸಿಕೊಂಡು ವಾಹನಗಳೇ ಅಧಿಕವಾಗಿದ್ದು, ಕಚೇರಿಯು ಗುಜರಿ ಅಂಗಡಿಯಂತೆ ಕಾಣುತ್ತಿವೆ ಎಂಬುದು ಸಾರ್ವಜನಿಕರ ಟೀಕೆ.

ಸಿದ್ದಾಪುರ ಪೊಲೀಸ್ ಠಾಣೆ ಆವರಣದಲ್ಲಿ ಕಾರು ಜೀಪುಗಳು ತುಕ್ಕು ಹಿಡಿದು ಹಾಳಾದ ಸ್ಥಿತಿಯಲ್ಲಿ ನಿಂತಿವೆ
ಮುಂಡಗೋಡ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಬಳಕೆ ಆಗದೇ ಅನಾಥ ಸ್ಥಿತಿಯಲ್ಲಿ ನಿಂತಿರುವ ಸರ್ಕಾರಿ ಇಲಾಖೆಯ ವಾಹನಗಳು 
ವಶಕ್ಕೆ ಪಡೆದ ವಾಹನಗಳನ್ನು ನಿಲ್ಲಿಸಲು ಪ್ರತ್ಯೇಕ ಶೆಡ್ ಆಯಾ ಇಲಾಖೆಯಲ್ಲಿ ನಿರ್ಮಿಸಿದರೆ ಅನುಕೂಲವಾಗುತ್ತದೆ
ಮಂಜುನಾಥ ನಾಯ್ಕ ಶಿರಸಿ ಸಾಮಾಜಿಕ ಕಾರ್ಯಕರ್ತ
ಮೂರು ಬಾರಿ ಗುಜರಿ ವಾಹನ ವಿಲೇವಾರಿಗೆ ಹರಾಜು ಕರೆಯಲಾಗಿತ್ತು. ಯಾರೂ ಭಾಗವಹಿಸದ ಕಾರಣ ಶೆಡ್‍ನಲ್ಲಿ ಹಾಗೆ ಉಳಿದುಕೊಂಡಿದೆ
ನೀಲಕಂಠ ಮೇಸ್ತ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ಗೋವಾ ರಾಜ್ಯದಿಂದ ಕರ್ನಾಟಕ ಪ್ರವೇಶಿಸಿದ ತಕ್ಷಣ ಗುಜರಿ ವಾಹನಗಳೇ ಜನರನ್ನು ಸ್ವಾಗತಿಸುತ್ತವೆ. ಗಡಿಭಾಗದ ಹೆದ್ದಾರಿ ಅಂಚಿನಲ್ಲಿರುವ ತುಕ್ಕು ಹಿಡಿದ ವಾಹನಗಳನ್ನು ವಿಳಂಬವಿಲ್ಲದೆ ವಿಲೇವಾರಿ ಮಾಡಲಿ
ಸುಜಿತ್ ಬಾಡಕರ ಕಾರವಾರ ನಿವಾಸಿ

ಗಡಿಭಾಗದಲ್ಲಿ ಗುಜರಿ ವಾಹನ

ಜೊಯಿಡಾ ತಾಲ್ಲೂಕಿನ ರಾಜ್ಯದ ಗಡಿಯಲ್ಲಿರುವ ಅನಮೋಡ್ ಅಬಕಾರಿ ತನಿಖಾ ಠಾಣೆಯ ಆವರಣದಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ  ಹಲವು ವರ್ಷಗಳಿಂದ ಗೋವಾದಿಂದ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಗೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ  ಅಬಕಾರಿ ಇಲಾಖೆ ವಶಕ್ಕೆ ಪಡೆದ ಹಲವು ವಾಹನಗಳು ವಿಲೇವಾರಿ ಆಗದೆ ನಿಂತಿವೆ. ಸುಮಾರು 30ಕ್ಕೂ ಹೆಚ್ಚು ವಾಹನಗಳು ಇಲ್ಲಿವೆ ಎಂದು ಅಂದಾಜಿಸಲಾಗಿದೆ. ಜೊಯಿಡಾ ಮತ್ತು ರಾಮನಗರ ಪೊಲೀಸ್ ಠಾಣೆ ಆವರಣದಲ್ಲಿ ಅಪಘಾತಕ್ಕೆ ತುತ್ತಾದ ಕಾರುಗಳು ಮಾಲಿಕರು ಅಥವಾ ಗುಜರಿಗೂ ಸೇರದೆ ನಿಂತಲ್ಲಿಯೇ ಹಾಳಾಗುತ್ತಿದೆ.

ತಹಶೀಲ್ದಾರ ಕಚೇರಿ ಪಶು ಸಂಗೋಪನಾ ಇಲಾಖೆ ಆವರಣದಲ್ಲಿಯೂ ಹಳೆಯ ಬೊಲೆರೋ ವಾಹನ ನಿಂತಲ್ಲಿಯೇ ತುಕ್ಕು ಹಿಡಿದು ಹಾಳಾಗಿದೆ. ‘ಕಾಲ ಕಾಲಕ್ಕೆ ಪ್ರಕರಣ ದಾಖಲಾದ ವಾಹನಗಳ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಗುಜರಿ ವಾಹನಗಳ ವಿಲೇವಾರಿಗೂ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ’ ಎನ್ನುತ್ತಾರೆ ಅನಮೋಡ ಅಬಕಾರಿ ಠಾಣೆಯ ಸಬ್ ಇನ್‍ಸ್ಪೆಕ್ಟರ್ ಮಹೇಂದ್ರ ನಾಯ್ಕ.

ಮೂಲೆ ಸೇರಿದ ಅಧಿಕಾರಿಯ ಜೀಪು

ಮುಂಡಗೋಡ ಶಿಶು ಯೋಜನಾ ಅಭಿವೃದ್ಧಿ ಅಧಿಕಾರಿ ಕಚೇರಿಯ ಜೀಪು ದುರಸ್ತಿಯಾಗದೇ ಕೆಲವು ವರ್ಷಗಳಿಂದ ಕಚೇರಿಯ ಎದುರುಗಡೆ ಅನಾಥ ಸ್ಥಿತಿಯಲ್ಲಿ ನಿಂತಿತ್ತು. ಗುಜರಿ ಹಂತಕ್ಕೆ ಬಂದಿದ್ದ ಜೀಪು ಸದ್ಯ ಗೋಡೌನ್‌ನಲ್ಲಿ ನಿಂತಿದೆ. ಪಟ್ಟಣ ಪಂಚಾಯಿತಿ ಆವರಣದಲ್ಲಿ ಹೊಸದಾಗಿ ಖರೀದಿಸಿರುವ ಶೌಚ ಸಂಗ್ರಹಣಾ ಟ್ಯಾಂಕರ್‌ ಸಹ ಕಳೆದ ಕೆಲವು ವರ್ಷಗಳಿಂದ ಬಳಕೆ ಆಗದೇ ಕಚೇರಿ ಹಿಂಬದಿಯಲ್ಲಿ ನಿಂತಿದೆ. ‘ಸರ್ಕಾರಿ ಜೀಪು ಬಳಕೆಗೆ ಯೋಗ್ಯವಲ್ಲ ಎಂದು ಸಾರಿಗೆ ಅಧಿಕಾರಿಗಳು ಹೇಳಿದ್ದರಿಂದ ಬಳಕೆ ಮಾಡುತ್ತಿಲ್ಲ. ಅದನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಲಿದ್ದೇವೆ’ ಎಂದು ಸಿಡಿಪಿಒ ರಾಮು ಬಯಲಸೀಮೆ ಹೇಳಿದರು.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಶಾಂತೇಶ ಬೆನಕನಕೊಪ್ಪ, ಜ್ಞಾನೇಶ್ವರ ದೇಸಾಯಿ, ಎಂ.ಜಿ.ಹೆಗಡೆ, ಎಂ.ಜಿ.ನಾಯ್ಕ, ಮೋಹನ ನಾಯ್ಕ, ಸುಜಯ್ ಭಟ್, ಪ್ರವೀಣಕುಮಾರ ಸುಲಾಖೆ, ಮೋಹನ ದುರ್ಗೇಕರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.