ADVERTISEMENT

ಕಾರವಾರ | ಬೇಲೆಕೇರಿ ಅದಿರು ಕಳ್ಳತನ–ರಫ್ತು ಪ್ರಕರಣ: ಜನಜೀವನ ನಲುಗಿಸಿದ್ದ ಅಕ್ರಮ

ಜಿಲ್ಲೆಯ ರಾಜಕೀಯ ಚಿತ್ರಣ ಬದಲಿಸಿದ್ದ ‘ಬಳ್ಳಾರಿ ದೂಳು’

ಗಣಪತಿ ಹೆಗಡೆ
Published 27 ಅಕ್ಟೋಬರ್ 2024, 3:58 IST
Last Updated 27 ಅಕ್ಟೋಬರ್ 2024, 3:58 IST
<div class="paragraphs"><p>2010ರಲ್ಲಿ ಲೋಕಾಯುಕ್ತ ನಿರ್ದೇಶನದ ಮೇರೆಗೆ ಕಾರವಾರದ ಅಲಿಗದ್ದಾದಲ್ಲಿ ಕಬ್ಬಿಣದ ಅದಿರು ಸಂಗ್ರಹಿಸಿಟ್ಟಿದ್ದ ಸ್ಥಳ ಪರಿಶೀಲಿಸಲು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದ ವೇಳೆ ಸ್ಥಳೀಯ ಮಹಿಳೆಯರು ಸಮಸ್ಯೆಗಳನ್ನು ಹೇಳಿಕೊಂಡಿದ್ದರು</p></div>

2010ರಲ್ಲಿ ಲೋಕಾಯುಕ್ತ ನಿರ್ದೇಶನದ ಮೇರೆಗೆ ಕಾರವಾರದ ಅಲಿಗದ್ದಾದಲ್ಲಿ ಕಬ್ಬಿಣದ ಅದಿರು ಸಂಗ್ರಹಿಸಿಟ್ಟಿದ್ದ ಸ್ಥಳ ಪರಿಶೀಲಿಸಲು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದ ವೇಳೆ ಸ್ಥಳೀಯ ಮಹಿಳೆಯರು ಸಮಸ್ಯೆಗಳನ್ನು ಹೇಳಿಕೊಂಡಿದ್ದರು

   

(ಸಂಗ್ರಹ ಚಿತ್ರ)

ಕಾರವಾರ: ಜಿಲ್ಲೆಯ ರಾಜಕೀಯ ಕ್ಷೇತ್ರ, ಜನಜೀವನದ ಮೇಲೆ ಇನ್ನಿಲ್ಲದ ಪರಿಣಾಮ ಬೀರಿದ ಕಬ್ಬಿಣದ ಅದಿರು ಈಗ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಶಾಸಕ ಸತೀಶ ಸೈಲ್ ಅವರು ಅದಿರು ಅಕ್ರಮ ಸಾಗಾಟ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುವಂತೆ ಆಗಿರುವುದು ಇದಕ್ಕೆ ಕಾರಣ.

ADVERTISEMENT

2006ರಿಂದ 2009ರ ಅವಧಿಯ ವರೆಗೆ ಲಕ್ಷಾಂತರ ಟನ್ ಕಬ್ಬಿಣದ ಅದಿರು ಬಳ್ಳಾರಿ, ಚಿತ್ರದುರ್ಗ ಜಿಲ್ಲೆಯ ವಿವಿಧೆಡೆಯಿಂದ ರಸ್ತೆ ಮಾರ್ಗವಾಗಿ ಅಂಕೋಲಾ ತಾಲ್ಲೂಕಿನ ಬೇಲೆಕೇರಿ, ಕಾರವಾರದ ವಾಣಿಜ್ಯ ಬಂದರಿಗೆ ಸಾಗಾಟಗೊಳ್ಳುತ್ತಿತ್ತು. ಬಂದರಿನಿಂದ ಹಡಗಿನ ಮೂಲಕ ವಿದೇಶಗಳಿಗೆ ರಫ್ತು ಆಗುತ್ತಿತ್ತು.

‘ಕಬ್ಬಿಣದ ಅದಿರು ತುಂಬಿಕೊಂಡು ಬರುವ ಲಾರಿಗಳಿಂದ ಹುಬ್ಬಳ್ಳಿ–ಅಂಕೋಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆ ನೋಡಿ ಅಚ್ಚರಿ ಮತ್ತು ಆಘಾತ ಆಗುತ್ತಿದೆ. ಪ್ರತಿ ಕಿ.ಮೀ ಅಂತದಲ್ಲಿ ಕನಿಷ್ಠ 70 ರಿಂದ 80 ಲಾರಿಗಳು ನಿಲ್ಲುತ್ತಿರುವುದನ್ನು ನೋಡಿ ದಿಗ್ಭ್ರಮೆಗೆ ಒಳಗಾದೆವು’ ಎಂದು 2010ರಲ್ಲಿ ಅದಿರು ದಾಸ್ತಾನುಗಳ ಕುರಿತು ಲೋಕಾಯುಕ್ತ ಸಂಸ್ಥೆಯ ಆದೇಶದ ಮೇರೆಗೆ ತಪಾಸಣೆಗೆ ಬಂದಿದ್ದ ಅಂದಿನ ಧಾರವಾಡ ಅರಣ್ಯ ವೃತ್ತದ ಸಿಸಿಎಫ್ ಉದಯವೀರ್ ಸಿಂಗ್ ಹೇಳಿದ್ದರು.

‘ಜನವಸತಿ ಪ್ರದೇಶಗಳ ಸಮೀಪದಲ್ಲೇ ಗುಡ್ಡಗಳನ್ನು ಕೊರೆದು, ಬಯಲಾಗಿಸಿ ಕಬ್ಬಿಣದ ಅದಿರು ದಾಸ್ತಾನು ಮಾಡುತ್ತಿದ್ದಾರೆ. ದೂಳಿನಿಂದ ಉಸಿರಾಟದ ಸಮಸ್ಯೆ ಹೆಚ್ಚುತ್ತಿದೆ. ಜಲಮೂಲಗಳು ಕೆಸರಾಗಿದ್ದು, ಕುಡಿಯಲು ಶುದ್ಧ ನೀರು ಸಿಗದಂತಾಗಿದೆ’ ಎಂದು ಅಲಿಗದ್ದಾ ನಿವಾಸಿಗಳು ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ್ದರು.

‘ಅದಿರು ಸಾಗಾಟದ ವೇಳೆ ನಿತ್ಯ ರಾಷ್ಟ್ರೀಯ ಹೆದ್ದಾರಿ–63ರಲ್ಲಿ ಸಾವಿರಕ್ಕೂ ಹೆಚ್ಚು ಲಾರಿಗಳು ಓಡಾಟ ನಡೆಸುತ್ತಿದ್ದವು. ನಿಗದಿಗಿಂತಲೂ ಹೆಚ್ಚು ಭಾರ ಹೊತ್ತು ಬರುತ್ತಿದ್ದ ಅವು ನಿಯಮಗಳನ್ನು ಉಲ್ಲಂಘಿಸಿ ಸಾಗುತ್ತಿದ್ದವು. ಹೀಗೆ ಸಾಗುವಾಗ ಉಂಟಾಗಿದ್ದ ಅಪಘಾತಕ್ಕೆ ಲೆಕ್ಕವಿಲ್ಲ. ನೂರಾರು ಜನರು ಕೇವಲ ಮೂರ್ನಾಲ್ಕು ವರ್ಷದಲ್ಲಿ ಜೀವ ತೆತ್ತಿದ್ದಾರೆ’ ಎಂಬ ದೂರು ಕೂಡ ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿತ್ತು.

2009ರ ಜ.26 ರಂದು ನಿಗದಿಗಿಂತ ಹೆಚ್ಚು ಭಾರ ಹೊತ್ತು ಕಾರವಾರದಿಂದ ಗೋವಾ ಕಡೆಗೆ ಲಾರಿಯೊಂದು ಅದಿರು ಸಾಗಿಸುವ ವೇಳೆ ವಕೀಲ ಕಿಶೋರ ದೇಸಾಯಿ, ಇತರರು ಕಾಳಿ ಸೇತುವೆ ಬಳಿ ತಡೆಹಿಡಿದಿದ್ದರು. ಪರವಾನಗಿ ಇಲ್ಲದೆ ಅದಿರು ಸಾಗುತ್ತಿದ್ದ ಕಾರಣ ಹಾಗೂ ಅದಿರು ಸಾಗಾಟದಿಂದ ಉಂಟಾಗುತ್ತಿದ್ದ ಸಮಸ್ಯೆಗಳ ಕುರಿತು ಲೋಕಾಯುಕ್ತಕ್ಕೆ ದೂರು ನೀಡಿದ್ದರು.

‘ದೂರು ಆಧರಿಸಿ ತನಿಖೆ ಆರಂಭಿಸಿದ್ದ ವೇಳೆ ಅಕ್ರಮವಾಗಿ ಅದಿರು ಸಾಗಾಟ ಆಗುತ್ತಿರುವುದು ಬೆಳಕಿಗೆ ಬಂದಿತ್ತು. ನಂತರ ಹಂತ ಹಂತವಾಗಿ ಹಲವು ಆಯಾಮದಲ್ಲಿ ತನಿಖೆ ಕೈಗೊಂಡಾಗ ಅಕ್ರಮ ಬಯಲಿಗೆ ಬಂತು’ ಎನ್ನುತ್ತಾರೆ ಅಕ್ರಮ ವಿರುದ್ಧ ಹೋರಾಟ ನಡೆಸಿದ್ದ ಸಾಮಾಜಿಕ ಕಾರ್ಯಕರ್ತರೊಬ್ಬರು.

ಅಕ್ರಮ ಅದಿರು ಪ್ರಕರಣದ ಬೆಳವಣಿಗೆಗಳು

  • 2009ರಲ್ಲಿ ಅದಿರು ರಫ್ತು ವ್ಯವಹಾರದಲ್ಲಿ ತೊಡಗಿದ್ದ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸತೀಶ ಸೈಲ್ ಮೊದಲ ಬಾರಿಗೆ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧೆ

  • 2009ರ ಮಾರ್ಚ್ 20ರಂದು ₹350 ಕೋಟಿ ಮೌಲ್ಯದ 8.5 ಲಕ್ಷ ಟನ್ ಅದಿರು ಬೇಲೆಕೇರಿಯಲ್ಲಿ ಅರಣ್ಯ ಇಲಾಕೆಯಿಂದ ವಶ

  • 2009ರ ಜೂನ್ 2ರಂದು ₹250 ಕೋಟಿ ಮೌಲ್ಯದ ಅದಿರು ನಾಪತ್ತೆಯಾಗಿರುವುದು ಪತ್ತೆ

  • 2013ರ ಮೇನಲ್ಲಿ ಕಾರವಾರ ಕ್ಷೇತ್ರದಿಂದ ಪಕ್ಷೇತರ ಶಾಸಕರಾಗಿ ಸತೀಶ ಸೈಲ್ ಆಯ್ಕೆ

  • ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ 2013ರ ಸೆ.25 ರಂದು ಶಾಸಕರಾಗಿದ್ದ ಸೈಲ್ ಸಿಬಿಐನಿಂದ ಬಂಧನ

  • 2014ರ ಡಿ.4 ರಂದು ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದ ಶಾಸಕ ಸತೀಶ ಸೈಲ್

  • 2023ರ ಮೇನಲ್ಲಿ ಕಾಂಗ್ರೆಸ್‍ನಿಂದ ಸೈಲ್ ಶಾಸಕರಾಗಿ ಆಯ್ಕೆ

  • 2024ರ ಅ.24 ರಂದು ಅಪರಾಧಿ ಎಂಬುದು ಸಾಬೀತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.