ಕಾರವಾರ: ಇಲ್ಲಿನ ನಗರಸಭೆಯ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಆ.21 ರಂದು ಚುನಾವಣೆ ನಡೆಯಲಿದ್ದು, ಸಮಬಲ ಸದಸ್ಯರನ್ನು ಹೊಂದಿರುವ ಬಿಜೆಪಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಅಭ್ಯರ್ಥಿಗಳನ್ನು ಘೋಷಿಸಿವೆ. ಆದರೆ, ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು ಮೂರನೇ ವ್ಯಕ್ತಿ ಸ್ಪರ್ಧೆಗಿಳಿದರೂ ಅಚ್ಚರಿ ಇಲ್ಲ.
31 ಸದಸ್ಯ ಬಲದ ನಗರಸಭೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 11 ಸದಸ್ಯರನ್ನು ಹೊಂದಿವೆ. 4 ಜೆಡಿಎಸ್ ಮತ್ತು 5 ಮಂದಿ ಪಕ್ಷೇತರ ಸದಸ್ಯರಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ರವಿರಾಜ್ ಅಂಕೋಲೇಕರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಂದೀಪ ತಳೇಕರ ಕಣಕ್ಕೆ ಇಳಿಯುವುದು ನಿಚ್ಚಳವಾಗಿದೆ.
‘ಬಿಜೆಪಿ ಪಾಳಯದಿಂದ ಪ್ರಕಾಶ ಪಿ.ನಾಯ್ಕ, ಕಾಂಗ್ರೆಸ್‍ನಿಂದ ಮಕ್ಬುಲ್ ಶೇಖ್ ಸೇರಿ ಕೆಲವರು ಪ್ರಬಲ ಆಕಾಂಕ್ಷಿಗಳಾಗಿದ್ದರು. ಸದಸ್ಯರ ಬಳಿ ಈ ಕುರಿತು ಚರ್ಚೆಯನ್ನೂ ನಡೆಸಿದ್ದರು. ಬೇರೊಬ್ಬರಿಗೆ ಸ್ಪರ್ಧೆಗೆ ಅವಕಾಶ ನೀಡಿದ್ದರಿಂದ ಅವರು ಬಂಡಾಯ ಎದ್ದು ಸ್ಪರ್ಧಿಸುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ’ ಎಂದು ನಗರಸಭೆಯ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರವಿರಾಜ್ ಅಭ್ಯರ್ಥಿ ಎಂದು ಘೋಷಿಸಲು ನಿರ್ಣಯಿಸಲಾಗಿದೆ. ಜೆಡಿಎಸ್ ಸದಸ್ಯರು ಬೆಂಬಲಿಸುವುದಾಗಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರಿಗೆ ಲಿಖಿತ ಪತ್ರ ನೀಡಿದ್ದಾರೆ. ಸಭೆಯಲ್ಲಿ ಆ ಪಕ್ಷದ ಸದಸ್ಯರು ಪಾಲ್ಗೊಂಡಿರಲಿಲ್ಲ’ ಎಂದು ಬಿಜೆಪಿ ಪದಾಧಿಕಾರಿಯೊಬ್ಬರು ಹೇಳಿದರು.
‘ಶಾಸಕ ಸತೀಶ ಸೈಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಂದೀಪ ಅವರನ್ನು ಕಣಕ್ಕಿಳಿಸಲು ನಿರ್ಣಯಿಸಲಾಗಿದೆ. ಪಕ್ಷೇತರ ಸದಸ್ಯ ಪ್ರೇಮಾನಂದ ಗುನಗಾ ಸಭೆಯಲ್ಲಿ ಪಾಲ್ಗೊಂಡಿದ್ದರು. ಇನ್ನೂ ಕೆಲ ಪಕ್ಷೇತರ ಸದಸ್ಯರನ್ನು ಸೆಳೆಯಲು ಪ್ರಯತ್ನ ನಡೆದಿದೆ’ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಮಾಹಿತಿ ನೀಡಿದರು.
ಉಪಾಧ್ಯಕ್ಷ ಸ್ಥಾನದ ಕುತೂಹಲ!
‘ಜೆಡಿಎಸ್ ಬೆಂಬಲದೊಂದಿಗೆ ಅಧಿಕಾರ ಪಡೆಯಲು ಮುಂದಾಗುತ್ತಿರುವ ಕಾರಣಕ್ಕೆ ಆ ಪಕ್ಷದ ಸದಸ್ಯರಿಗೆ ಉಪಾಧ್ಯಕ್ಷ ಸ್ಥಾನ ಬಿಟ್ಟುಕೊಡುವ ಚರ್ಚೆ ನಡೆದಿದೆ. ಪ್ರೀತಿ ಜೋಶಿ ಅವರಿಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ’ ಎಂದು ಬಿಜೆಪಿ ಸದಸ್ಯರೊಬ್ಬರು ಹೇಳಿದರು. ‘ಕಾಂಗ್ರೆಸ್‍ನಲ್ಲಿ ಹಲವು ಮಹಿಳಾ ಸದಸ್ಯರಿದ್ದರೂ ಅಧಿಕಾರ ಪಡೆಯಲು ಪಕ್ಷೇತರರ ಬೆಂಬಲ ಪಡೆಯುವ ಅನಿವಾರ್ಯತೆ ಇದೆ. ಪಕ್ಷೇತರ ಅಭ್ಯರ್ಥಿಗಳನ್ನು ಸೆಳೆಯುವ ನಿಟ್ಟಿನಲ್ಲಿ ಸಂಧ್ಯಾ ಬಾಡ್ಕರ್ ಅವರಿಗೆ ಅವಕಾಶ ಮಾಡಿಕೊಡಲು ಚರ್ಚೆ ನಡೆದಿದೆ’ ಎಂದು ಕಾಂಗ್ರೆಸ್ ಸದಸ್ಯರೊಬ್ಬರು ತಿಳಿಸಿದರು. ಎರಡೂ ಪಕ್ಷಗಳು ಉಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಯಾರು ಎಂಬುದನ್ನು ಘೋಷಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.