ಕಾರವಾರ: ‘ಕಾರವಾರ ವಾಣಿಜ್ಯ ಬಂದರನ್ನು ಐದು ಹಂತದಲ್ಲಿ ವಿಸ್ತರಿಸಲಾಗುತ್ತಿದೆ. ರಾಷ್ಟ್ರೀಯ ಹಸಿರು ಪೀಠದ ಅನುಮತಿ ಸಿಕ್ಕ ತಕ್ಷಣವೇ ಬಂದರು ವಿಸ್ತರಣೆ ಕಾರ್ಯ ಆರಂಭಗೊಳ್ಳಲಿದೆ. ಮುಂದಿನ ಐದು ವರ್ಷಗಳಲ್ಲಿ ಈ ಕಾರ್ಯಗಳು ಪೂರ್ಣಗೊಳ್ಳುವ ವಿಶ್ವಾಸವಿದೆ’ ಎಂದು ಬಂದರು, ಜಲಸಾರಿಗೆ ಮಂಡಳಿ ಸಿಇಒ ಜಯರಾಮ ರಾಯಪುರ ಹೇಳಿದರು.
ಇಲ್ಲಿನ ಬಂದರು ಮತ್ತು ಒಳನಾಡು ಜಲಸಾರಿಗೆ ಮಂಡಳಿ ಕಚೇರಿ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 61ನೇ ರಾಷ್ಟ್ರೀಯ ಜಲಸಾರಿಗೆ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಖಾಸಗಿ ಸಹಕಾರದಲ್ಲಿ ಕೇಣಿ, ಪಾವಿನಕುರ್ವೆಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಬಂದರು ನಿರ್ಮಾಣಕ್ಕೆ ತಯಾರಿ ನಡೆದಿದೆ. ಮಂಕಿಯಲ್ಲಿಯೂ 5 ಎಂಟಿಪಿ ಸಾಮರ್ಥ್ಯದ ಬಂದರು ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ. ಮಂಗಳೂರಿನಲ್ಲಿ ದೇಶದಲ್ಲೇ ಮೊದಲ ಕ್ರೂಸ್ ಬಂದರು ನಿರ್ಮಾಣ ಆಗಲಿದೆ’ ಎಂದರು.
ನೌಕಾದಳದ ಕರ್ನಾಟಕ ವಿಭಾಗದ ಮುಖ್ಯಸ್ಥ ರಿಯರ್ ಅಡ್ಮಿರಲ್ ಕೆ.ಎಂ.ರಾಮಕೃಷ್ಣನ್, ‘ದೇಶದ ಶೇ 90 ರಷ್ಟು ಆರ್ಥಿಕತೆ ಜಲಸಾರಿಗೆಯ ಮೇಲೆ ನಿಂತಿದೆ. ಈ ಕ್ಷೇತ್ರದ ಏಳ್ಗೆಯು ಆರ್ಥಿಕತೆಯನ್ನು ಉತ್ತೇಜಿಸಬಲ್ಲದು. ಹಡಗುಗಳ ಅವಘಡ ಸಂಭವಿಸಿದರೆ ಹಲವು ದೇಶಗಳಿಗೆ ನಷ್ಟ ಉಂಟಾಗುತ್ತದೆ. ಹೀಗಾಗಿ ಅವುಗಳ ರಕ್ಷಣೆ ಕಾರ್ಯ ಮುಖ್ಯವಾಗಿದೆ’ ಎಂದರು.
ಕಾರವಾರ ನೌಕಾನೆಲೆಯ ಸಿಬ್ಬಂದಿ ವಿಭಾಗದ ಮುಖ್ಯಸ್ಥ ಕಮೊಡೋರ್ ಆಶಿಶ್ ಗೋಯಲ್, ಬಂದರು ಜಲಸಾರಿಗೆ ಮಂಡಳಿಯ ಮುಖ್ಯ ಲೆಕ್ಕಾಧಿಕಾರಿ ಸಂಗೀತಾ ಭಟ್, ಮಂಗಳೂರು ಬಂದರಿನ ಹಿರಿಯ ಅಧಿಕಾರಿ ಆಹಿನ್ ನಂದಿ, ಗ್ರಾಸಿಮ್ ಇಂಡಸ್ಟ್ರೀಸ್ ಘಟಕ ಮುಖ್ಯಸ್ಥ ಕುಶ್ ಶರ್ಮಾ, ರಾಜವೀರ ಸಿಂಗ್, ಮುಖ್ಯ ಎಂಜಿನಿಯರ್ ಪ್ರಮೀತ್, ಬಂದರು ಅಧಿಕಾರಿ ರಾಜಕುಮಾರ ಹೆಡೆ ಇದ್ದರು.
ಬಂದರು, ಒಳಸಾರಿಗೆ ಮಂಡಳಿಯ ನಿರ್ದೇಶಕ ಕ್ಯಾಪ್ಟನ್ ಸಿ.ಸ್ವಾಮಿ ಸ್ವಾಗತಿಸಿದರು. ಬಂದರು ಅಧೀಕ್ಷಕ ಸುರೇಶ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.