ಕಾರವಾರ : ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಕಟ್ಟಡ, ಮೂಲ ಸೌಕರ್ಯಗಳಿದ್ದರೂ ಕಾಯಂ ಉಪನ್ಯಾಸಕರ ಕೊರತೆಯ ಸಮಸ್ಯೆ ಜೀವಂತವಾಗಿದೆ. 200ಕ್ಕೂ ಹೆಚ್ಚು ಉಪನ್ಯಾಸಕರ ಕೊರತೆ ಇದ್ದು ಹಾಲಿ ಕೆಲಸ ಮಾಡುತ್ತಿರುವ ಉಪನ್ಯಾಸಕರು ಹೆಚ್ಚು ಕಾರ್ಯಭಾರ ಹೊರುವಂತಾಗಿದೆ.
ಜಿಲ್ಲೆಯಲ್ಲಿ 37 ಸರ್ಕಾರಿ, 31 ಅನುದಾನಿತ ಮತ್ತು 35 ಖಾಸಗಿ ಪದವಿಪೂರ್ವ ಕಾಲೇಜುಗಳಿವೆ. ಸದ್ಯ 340ಕ್ಕೂ ಹೆಚ್ಚು ಕಾಯಂ ಉಪನ್ಯಾಸಕರು ಸರ್ಕಾರಿ ಹಾಗೂ ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹುದ್ದೆಯ ಕೊರತೆ ಇರುವ ಕಡೆಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಂಡು ತರಗತಿ ನಡೆಸಲಾಗುತ್ತಿದೆ.
ಕಾರ್ಯಭಾರ ಆಧರಿಸಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತದೆ. ಬಕಾಯಂ ಉಪನ್ಯಾಸಕರಿಗೆ ಪ್ರತಿವಾರಕ್ಕೆ 20 ತಾಸು, ಅತಿಥಿ ಉಪನ್ಯಾಸಕರಿಗೆ 10 ತಾಸುಗಳಂತೆ ಕಾರ್ಯಭಾರ ನೀಡಲಾಗುತ್ತದೆ. ಆದರೆ, ಜಿಲ್ಲೆಯಲ್ಲಿ 210 ರಷ್ಟು ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ. ಸರ್ಕಾರ 140 ಅತಿಥಿ ಉಪನ್ಯಾಸಕರ ನೇಮಕಕ್ಕೆ ಅನುಮತಿ ನೀಡಿದೆ.
‘ಕಾಲೇಜುಗಳಲ್ಲಿ ವಿಷಯ, ವಿದ್ಯಾರ್ಥಿಗಳ ಸಂಖ್ಯೆ ಆಧರಿಸಿ ಕಾರ್ಯಭಾರ ನಿಗದಿಯಾಗುತ್ತದೆ. ವರ್ಷದಿಂದ ವರ್ಷಕ್ಕೆ ಇದು ವ್ಯತ್ಯಾಸಗೊಳ್ಳುತ್ತದೆ. ಈ ಬಾರಿ ಅತಿಥಿ ಉಪನ್ಯಾಸಕರ ನೇಮಕಕ್ಕೆ ಹಿಂದಿನ ವರ್ಷದ ಕಾರ್ಯಭಾರ ಆಧರಿಸಿ ಅನುಮತಿ ನೀಡಿದ್ದಾರೆ. ಆದರೆ ಈ ಬಾರಿ ಕಾರ್ಯಭಾರದ ಪ್ರಮಾಣ ಹೆಚ್ಚಿದೆ’ ಎಂದು ಸರ್ಕಾರಿ ಕಾಲೇಜಿನ ಪ್ರಾಚಾರ್ಯರೊಬ್ಬರು ತಿಳಿಸಿದರು.
‘ಇಂಗ್ಲಿಷ್ ವಿಷಯಕ್ಕೆ ಕಾಲೇಜಿನಲ್ಲಿ ವಾರಕ್ಕೆ 60 ತಾಸು ಪಾಠ ಮಾಡಬೇಕಾಗುತ್ತದೆ. ಸದ್ಯ ಒಬ್ಬರೇ ಕಾಯಂ ಉಪನ್ಯಾಸಕರಿದ್ದು, ಒಬ್ಬರು ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗಿದೆ. ಇಬ್ಬರೂ ಸೇರಿ 30 ತಾಸು ಮಾತ್ರ ಪಾಠ ಮಾಡಲು ಸಾಧ್ಯವಾಗುತ್ತದೆ. ಆದರೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇಬ್ಬರಿಗೂ ಉಳಿದ 30 ತಾಸು ಪಾಠ ಮಾಡಲು ಸೂಚಿಸಿದ್ದೇವೆ’ ಎಂದು ಉದಾಹರಣೆ ಮೂಲಕ ಉಂಟಾಗುತ್ತಿರುವ ಸಮಸ್ಯೆ ವಿವರಿಸಿದರು.
‘ವಿದ್ಯಾರ್ಥಿಗಳ ಪ್ರವೇಶಾತಿ ಪ್ರಕ್ರಿಯೆ ಇನ್ನೂ ಪ್ರಗತಿಯಲ್ಲಿದೆ. ಪ್ರತಿ ವರ್ಷ ಆಗಸ್ಟ್ ವೇಳೆಗೆ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿತ್ತು. ಈ ಬಾರಿ ಎರಡು ತಿಂಗಳ ಮುಂಚಿತವಾಗಿ ಪ್ರಕ್ರಿಯೆ ಆರಂಭಿಸಲಾಗಿದೆ. ಹೀಗಾಗಿ ಕಳೆದ ವರ್ಷದ ಕಾರ್ಯಭಾರ ಆಧರಿಸಿ ಅತಿಥಿ ಉಪನ್ಯಾಸಕರ ನಿಯೋಜನೆಯಾಗಿದೆ. ವಾಣಿಜ್ಯ ವಿಭಾಗದಲ್ಲಿ ಸಮಸ್ಯೆ ಹೆಚ್ಚಿದೆ’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯಿಸಿದರು.
48 ಉಪನ್ಯಾಸಕರ ನಿಯೋಜನೆ ರದ್ದು
ಅನುದಾನಿತ ಮತ್ತು ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರನ್ನು ನಿಯೋಜನೆ ಮೂಲಕ ಬದಲಿಸಿ ಕಾರ್ಯಭಾರದ ಒತ್ತಡ ತಗ್ಗಿಸಲಾಗುತ್ತಿತ್ತು. ಕಡಿಮೆ ಕಾರ್ಯಭಾರ ಹೊಂದಿರುವ ಕಾಲೇಜುಗಳ ಉಪನ್ಯಾಸಕರನ್ನು ಹೆಚ್ಚು ಕಾರ್ಯಭಾರ ಇರುವ ಕಾಲೇಜುಗಳಿಗೆ ನಿಯೋಜನೆ ಮಾಡಲಾಗಿತ್ತು. ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಸೇರಿದಂತೆ ಕಲಾ, ವಾಣಿಜ್ಯ ವಿಭಾಗದ ವಿಷಯಗಳ ಉಪನ್ಯಾಸಕರು ನಿಯೋಜನೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಈ ಬಾರಿ ಹೀಗೆ ನಿಯೋಜನೆಗೊಂಡಿದ್ದ ಎಲ್ಲ 48 ಉಪನ್ಯಾಸಕರನ್ನು ಮೂಲ ಸ್ಥಳಕ್ಕೆ ತೆರಳಲು ಸೂಚಿಸಲಾಗಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.