ADVERTISEMENT

ಕಾರವಾರ: ಮಳೆಗಾಲದಲ್ಲಿ ಹಳ್ಳಿ ರಸ್ತೆ ‘ಕೆಸರು ಗದ್ದೆ’

ಸಂಪರ್ಕ ವ್ಯವಸ್ಥೆ ಕಡಿದುಕೊಂಡು ದ್ವೀಪದಂತಾಗುವ ಸ್ಥಿತಿ

ಗಣಪತಿ ಹೆಗಡೆ
Published 24 ಜೂನ್ 2024, 4:21 IST
Last Updated 24 ಜೂನ್ 2024, 4:21 IST
ಕಾರವಾರ ತಾಲ್ಲೂಕಿನ ಗೋಯರ್ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯು ಮಳೆಗಾಲದಲ್ಲಿ ಕೆಸರು ಗದ್ದೆಯಂತಾಗುತ್ತಿದೆ
ಕಾರವಾರ ತಾಲ್ಲೂಕಿನ ಗೋಯರ್ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯು ಮಳೆಗಾಲದಲ್ಲಿ ಕೆಸರು ಗದ್ದೆಯಂತಾಗುತ್ತಿದೆ   

ಕಾರವಾರ: ಮಳೆಗಾಲದಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಲವು ಹಳ್ಳಿಗಳು ದಿಗ್ಭಂಧನಕ್ಕೆ ಒಳಗಾಗುತ್ತವೆ. ಜಲಾವೃತಕ್ಕಿಂತ, ಮಳೆಯ ರಭಸಕ್ಕೆ ಇಲ್ಲಿನ ರಸ್ತೆಗಳು ಕೆಸರುಗದ್ದೆಯಾಗಿ ಮಾರ್ಪಡುವ ಕಾರಣಕ್ಕೆ ಜನರು ಹೊರಜಗತ್ತಿನ ಸಂಪರ್ಕ ಕಡಿದುಕೊಳ್ಳುವ ಅನಿವಾರ್ಯತೆ ಉಂಟಾಗುತ್ತಿದೆ.

ಜಿಲ್ಲೆಯ ಸುಮಾರು 300ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಈ ರೀತಿಯ ಸಮಸ್ಯೆ ಕಾಣಸಿಗುತ್ತದೆ. ಅಭಿವೃದ್ಧಿ ಕೆಲಸಗಳೂ ಎಷ್ಟೇ ನಡೆದರೂ ಜಿಲ್ಲೆಯಲ್ಲಿ ಮಾತ್ರ ಇದುವರೆಗೂ ಸಂಪರ್ಕ ವ್ಯವಸ್ಥೆಗೆ ಕಚ್ಚಾ ರಸ್ತೆಯನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಈ ಹಳ್ಳಿಗಳಲ್ಲಿ ಯಾರಾದರೂ ಅನಾರೋಗ್ಯಕ್ಕೆ ತುತ್ತಾದರೆ ಆಸ್ಪತ್ರೆಗೆ ಕರೆತರಲಾಗದಷ್ಟು ತೊಂದರೆ ಎದುರಿಸುತ್ತಿದ್ದಾರೆ.

ಕಾರವಾರ ತಾಲ್ಲೂಕಿನ ಗೋಯರ್, ಬಾಳೆಮನೆ, ಸೇರಿದಂತೆ ಕದ್ರಾ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳು ಡಾಂಬರು ರಸ್ತೆ ಕಂಡಿಲ್ಲ. ಮಳೆಗಾಲದಲ್ಲಿ ಗೋಯರ್ ಗ್ರಾಮಕ್ಕೆ ಬಸ್ ಸಂಚರಿಸಲು ಹಿಂದೇಟು ಹಾಕುತ್ತದೆ. ಸಾರಿಗೆ ಸಂಪರ್ಕ ಇಲ್ಲದೇ ಇಲ್ಲಿಯ ಜನರು ಪ್ರತಿ ಮಳೆಗಾಲದಲ್ಲಿ ಪರದಾಡುವುದು ಮುಂದುವರಿದಿದೆ.

ADVERTISEMENT

ಶಿರಸಿ ತಾಲ್ಲೂಕಿನ ಹೆಗಡೆಕಟ್ಟಾ ಕೊಡೆಮನೆ ರಸ್ತೆ, ಕೊಡ್ನಗದ್ದೆ ಪಂಚಾಯಿತಿಯ ತೆಂಗಿನಮುಡಿ, ಜಾಜಿಗುಡ್ಡೆ, ಮಿಂಟೆಪಾಲ್, ಬೇಕೇಮಠ, ಹೊನ್ನೆಹಕ್ಲು, ತಟ್ಟಿಗದ್ದೆ, ಅಗ್ರಹಾರ, ಸವಲಹಕ್ಲು ಭಾಗದಲ್ಲಿ ಮಳೆ ಆರಂಭದೊಂದಿಗೆ ರಸ್ತೆಗಳು ಕೆಸರಿನಿಂದ ಕೂಡಿ ಸಂಚಾರಕ್ಕೆ ಸಮಸ್ಯೆ ನೀಡುತ್ತಿವೆ.

ಭಟ್ಕಳ ತಾಲ್ಲೂಕಿನ ಗ್ರಾಮೀಣ ಭಾಗದ ರಸ್ತೆಗಳು ಅಲ್ಲಲ್ಲಿ ಹೊಂಡಮಯವಾಗಿದ್ದು, ಅದನ್ನು ಮುಚ್ಚುವ ಕೆಲಸ ಈವರೆಗೂ ನಡೆದಿಲ್ಲ. ರಸ್ತೆಗೆ ಅಪಾಯವಾಗುವ ಮರಗಳ ಕಟಾವು ಕಾರ್ಯವೂ ನಡೆದಿಲ್ಲ. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಯೋಜನೆಗಾಗಿ ರಸ್ತೆಯನ್ನು ಅಗೆದು ಹಾಕಲಾಗಿದ್ದು ಮಳೆಗಾಲದಲ್ಲಿ ಕೆಸರುಮಯವಾಗಿದೆ.

ಮುಂಡಗೋಡ ತಾಲ್ಲೂಕಿನಲ್ಲಿ ಮುಂಡಗೋಡ-ಶಿರ ರಾಜ್ಯ ಹೆದ್ದಾರಿಯ ಬಾಣಂತಿದೇವಿ ದೇವಸ್ಥಾನದ ಎದುರಿಗೆ, ಜೋಗೇಶ್ವರ ಹಳ್ಳ, ಮಹಾಲೆ ಮಿಲ್‌ ಸನಿಹ, ಕಾತೂರ ಬಸ್‌ ನಿಲ್ದಾಣದ ಎದುರಿಗೆ, ಶಿಂಗನಳ್ಳಿ ಊರಾಚೆ ಸೇರಿದಂತೆ ಹಲವೆಡೆ ಪ್ರತಿ ವರ್ಷ ಗುಂಡಿಗಳು ಬಿದ್ದಿರುತ್ತವೆ. ಮಳೆಗಾಲದಲ್ಲಿ ಇಲ್ಲಿ ಬೈಕ್‌ ಸವಾರರು ಆಯತಪ್ಪಿ ಬೀಳುವ ಘಟನೆಗಳು ಜರುಗಿವೆ.

ಗೋಕರ್ಣ ಓಂ ಬೀಚ್ ಮತ್ತು ಗೋಕರ್ಣದಿಂದ ಕುಡ್ಲೆ ಬೀಚ್‍ಗೆ ಸಂಪರ್ಕಿಸುವ ರಸ್ತೆ ರಭಸದ ಮಳೆಗೆ ಕಳೆದೆರಡು ವರ್ಷಗಳಿಂದ ಸಂಪೂರ್ಣ ಹಾಳಾಗಿದ್ದು ವಾಹನ ಚಲಾಯಿಸಲು ಕಷ್ಟವಾಗಿದೆ. ಇದರಿಂದ ಪ್ರವಾಸಿಗರಿಗೆ ತೊಂದರೆಯಾಗುತ್ತಿದೆ. ಹೊಸ ರಸ್ತೆ ನಿರ್ಮಿಸುವಂತೆ ಆಟೊ ಚಾಲಕರು, ರೆಸಾರ್ಟ್ ಮಾಲೀಕರು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದನೆ ಸಿಕ್ಕಿಲ್ಲ.

ಯಲ್ಲಾಪುರ ತಾಲ್ಲೂಕಿನಲ್ಲಿ ಗ್ರಾಮಗಳ ಒಳ ರಸ್ತೆಗಳ ಸ್ಥಿತಿ ಉತ್ತಮವಾಗಿಲ್ಲ. ಹೆಚ್ಚಿನ ಒಳ ರಸ್ತೆಗಳು ಮಣ್ಣಿನಿಂದ ಕೂಡಿದ್ದು ಮಳೆಗಾಲದ ಅವಧಿಯಲ್ಲಿ ಸಂಚಾರ ಕಷ್ಟಸಾಧ್ಯವಾಗಿವೆ. ಉಪಳೇಶ್ವರದಿಂದ ದೇಸಾಯಿಮನೆ ಮೂಲಕ ತಾರೀಮಕ್ಕಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮೇಲ್ದರ್ಜೆಗೇರಿಸಲು ಬೇಡಿಕೆ ಇದೆ. ವಜ್ರಳ್ಳಿ ಗ್ರಾಮ ಪಂಚಾಯಿತಿಯ ಕಂಚಿಮನೆ ರಸ್ತೆಯ ಡಾಂಬರು ಸಂಪೂರ್ಣ ಕಿತ್ತುಹೋಗಿದೆ. ಚಂದಗುಳಿಯ ಚನಗಾರ ರಸ್ತೆ, ಉಮ್ಮಚಗಿಯ ಶಾಲ್ಮಲಾ ನದಿತೀರದ ಭೀಮನಪಾದಕ್ಕೆ ಹೋಗುವ ರಸ್ತೆ, ಮಲವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪದ್ಮಾಪುರ ಹೆಗ್ಗಾರ ರಸ್ತೆ ಹದಗೆಟ್ಟಿವೆ.

‘ರಸ್ತೆ ಸರಿಯಿಲ್ಲದ ಕಾರಣಕ್ಕೆ ಬಾಗಿನಕಟ್ಟಾಕ್ಕೆ ಬರುತ್ತಿದ್ದ ಬಸ್‌ ಸದ್ಯ ಬರುತ್ತಿಲ್ಲ. ರಸ್ತೆಯನ್ನು ಸರಿಪಡಿಸಿ ಬಸ್‌ ಸಂಪರ್ಕ ಪುನಃ ಆರಂಭಿಸಬೇಕು’ ಎನ್ನುತ್ತಾರೆ ಬಾಗಿನಕಟ್ಟಾದ ಪರಶುರಾಮ ದೇವಳಿ.

ದಾಂಡೇಲಿ ತಾಲ್ಲೂಕಿನ ಕಾಮಸೇತುವಾಡ ಮತ್ತು ಜಮಖಂಡಾ ಗೌಳಿ ವಾಡದ ಸಂಪರ್ಕ ರಸ್ತೆ ಸಂಪೂರ್ಣ ಹಾಳಾಗಿದ್ದು ದುರಸ್ತಿಗೆ ಹಾಗೂ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಗ್ರಾಮಸ್ಥರು ಪ್ರಧಾನಿ ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಈವರೆಗೂ ಸ್ಪಂದನೆ ಸಿಕ್ಕಿಲ್ಲ’ ಎಂದು ಕಾಮಸೇತವಾಡಾದ ನಿವಾಸಿ ಬಾಬು ಜೋರೆ ಹೇಳುತ್ತಾರೆ.

‘ಬಡಕಾನಶಿರಡಾ, ಚಮ್ಮರವಾಡ, ಕೊಗಿಲಬನ ಗ್ರಾಮಕ್ಕೆ ಹೊಸ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿದ್ದು ತಾಂತ್ರಿಕ ಸಮಸ್ಯೆ ಮತ್ತು ರೈತರ ಅಸಹಕಾರದಿಂದಾಗಿ ರಸ್ತೆ ನಿರ್ಮಾಣ ಸಾಧ್ಯವಾಗುತ್ತಿಲ್ಲ’ ಎಂದು ಬಡಕಾನಶಿರಡಾ ಗ್ರಾಮ ಪಂಚಾಯಿತಿ ಪಿಡಿಒ ಸುರೇಶ ಮಡಿವಾಳ ಪ್ರತಿಕ್ರಿಯಿಸಿದ್ದಾರೆ.

ಸಿದ್ದಾಪುರ ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ಇಂದಿಗೂ ಕಚ್ಚಾ ರಸ್ತೆಯನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಇದೆ. ದಾಸನಗದ್ದೆ, ಕಲಕೈ, ಹಲಗೇರಿ, ಕಾರೇಸಾಲು, ಭಾನ್ಕುಳಿ ಹೀಗೆ ಹಲವು ಕಡೆ ಮಳೆಗಾಲದಲ್ಲಿ ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗಿಲ್ಲ ಎನ್ನುತ್ತಾರೆ ದಾಸನಗದ್ದೆ ನಿವಾಸಿ ಗಜಾನನ ಗೌಡ.

ಅಂಕೋಲಾ ತಾಲ್ಲೂಕಿನ ಹಡವ, ಅಡ್ಲೂರು, ಬೆತ್ತದಹಳ್ಳ, ಕೇಣಿ, ಅಲಗೇರಿ ಮುಂತಾದ ಹಳ್ಳಿಗಳಲ್ಲಿ ಮಳೆಗಾಲದಲ್ಲಿ ಸಂಚಾರಕ್ಕೆ ಸರಿಯಾದ ರಸ್ತೆಯಿಲ್ಲದೇ ಜನರು ಸಮಸ್ಯೆ ಎದುರಿಸುತ್ತಿದ್ದಾರೆ.

ಶಿರಸಿ ತಾಲ್ಲೂಕಿನ ಹೊನ್ನೆಹಕ್ಲು ಗ್ರಾಮ ಸಂಪರ್ಕಿಸುವ ರಸ್ತೆಯ ದುಸ್ಥಿತಿ
ಮುಂಡಗೋಡ ತಾಲ್ಲೂಕಿನ ಸುಳ್ಳಳ್ಳಿ ಗ್ರಾಮದ ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದು
ಗೋಕರ್ಣದ ಮುಖ್ಯ ಕಡಲತೀರ ಸಮೀಪದಿಂದ ಕುಡ್ಲೆ ಕಡಲತೀರಕ್ಕೆ ಸಾಗುವ ರಸ್ತೆ ಹೆದಗೆಟ್ಟಿರುವುದು

ಮಳೆ ಜಾಸ್ತಿಯಾದರೆ ರಸ್ತೆ ಹೊಳೆಯಂತಾಗುತ್ತದೆ. ಮಕ್ಕಳು ಶಾಲೆಗಳಿಗೆ ನಡೆದು ಹೋಗಬೇಕಾದ ಪರಿಸ್ಥಿತಿ ಇರುವುದರಿಂದ ರಸ್ತೆಯಲ್ಲಿ ಮಕ್ಕಳು ಸಂಚರಿಸುವುದು ಕಷ್ಟವಾಗುತ್ತದೆ.

-ಚಂದ್ರಕಾಂತ ಕಲಕೈ ಗ್ರಾಮಸ್ಥ (ಸಿದ್ದಾಪುರ)

ಗೋಕರ್ಣದಿಂದ ಕುಡ್ಲೆ ಬೀಚ್‍ಗೆ ಸಂಪರ್ಕಿಸುವ ರಸ್ತೆ ಹಾಳಾಗಿರುವುದು ಈವರೆಗೆ ನನ್ನ ಗಮನಕ್ಕೆ ಬಂದಿರಲಿಲ್ಲ. ರಸ್ತೆ ದುರಸ್ತಿ ಮಾಡಲು ಕೂಡಲೇ ಕ್ರಮ ತೆಗೆದುಕೊಳ್ಳಲಾಗುವುದು.

-ದಿನಕರ ಶೆಟ್ಟಿ ಕುಮಟಾ ಶಾಸಕ

ಸುಳ್ಳಳ್ಳಿ ಕಲಕೇರಿ ಮಾರ್ಗದಲ್ಲಿ ರಸ್ತೆಯು ಹಲವು ಗುಂಡಿಗಳಿಂದ ತುಂಬಿದ್ದು ಬೇಸಿಗೆ ಕಾಲದಲ್ಲಿಯೂ ಗುಂಡಿ ಮುಚ್ಚುವ ಕೆಲಸ ಮಾಡಿಲ್ಲ. ಮಳೆಗಾಲದಲ್ಲಿ ನೀರಿನಿಂದ ಗುಂಡಿಗಳು ತುಂಬುವುದರಿಂದ ಬೈಕ್‌ ಸವಾರರಿಗೆ ಗುಂಡಿ ಯಾವುದು ರಸ್ತೆ ಯಾವುದು ಎಂದು ಗೊತ್ತಾಗದೇ ಬಿದ್ದು ಗಾಯ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

-ಆನಂದ ಸುಳ್ಳೊಳ್ಳಿ ಗ್ರಾಮಸ್ಥ (ಮುಂಡಗೋಡ)

ಗ್ರಾಮೀಣ ಭಾಗದ ಕೆಲ ರಸ್ತೆಗಳನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸಲು ಪ್ರಸ್ತಾವ ಸಲ್ಲಿಸಲಾಗುವುದು. -ದುರ್ಗಾದಾಸ ಪಿಡಬ್ಲ್ಯೂಡಿ ಇಇ ಕಾರವಾರ ವಿಭಾಗ

ಜೊಯಿಡಾ: ಹದಗೆಟ್ಟ ರಸ್ತೆಗಳೇ ಅಧಿಕ

ಜೊಯಿಡಾ ತಾಲ್ಲೂಕಿನ ಬಹುತೇಕ ಭಾಗದ ರಸ್ತೆಗಳು ಕಚ್ಚಾ ರಸ್ತೆಗಳಾಗಿದ್ದು ಪ್ರತಿವರ್ಷವೂ ಮಳೆಗಾಲದಲ್ಲಿ ಹಲವು ಹಳ್ಳಿಗಳ ಜನರು ಸಂಚಾರಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ. ಡಿಗ್ಗಿ ಕರಂಜೆ ದುದಮಳಾ ಕಟ್ಟೆ ಕಾಡಪೋಡ ಸಾವಂತ ಮಾತ್ಕರ್ಣಿ ನಿಗುಂಡಿ ಅಂಬಾಳಿ ಕುಮಗಾಳಿ ತೇರಾಳಿ ಪಾತಾಗುಡಿ ದುಪೇವಾಡಿ ಕಸಬೆ ಶಿವಪುರ ಮುಂತಾದ ಹಳ್ಳಿಗಳ ರಸ್ತೆಗಳು ಮಳೆಗಾಲದಲ್ಲಿ ಕೆಸರುಗದ್ದೆಯಂತಾಗುತ್ತವೆ. ಹೀಗಾಗಿ ಇಲ್ಲಿಯ ಜನರು ನಾಲ್ಕು ತಿಂಗಳಿಗೆ ಸಾಕಾಗುವಷ್ಟು ದಿನಸಿ ಸಾಮಗ್ರಿ ದಾಸ್ತಾನು ಮಾಡಿಕೊಳ್ಳುತ್ತಾರೆ. ಆರೋಗ್ಯ ಹದಗೆಟ್ಟರೆ ಆಸ್ಪತ್ರೆಗೆ ಕರೆದೊಯ್ಯುವುದೂ ಕಷ್ಟವಾಗಿದೆ. ‘ಬಜಾರಕುಣಂಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ರಸ್ತೆಗಳು ಹದಗೆಟ್ಟಿದ್ದು ಒಂದೂ ಹಳ್ಳಿಗೂ ಸಂಪರ್ಕ ಕಲ್ಪಿಸಲು ರಸ್ತೆ ಸರಿ ಇಲ್ಲ’ ಎನ್ನುತ್ತಾರೆ ಬಜಾರಕುಣಂಗ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಸದಾನಂದ ಸಾವಂತ. ‘ಕಳೆದ ವರ್ಷ ತೆರಾಳಿ ನಿಗುಂಡಿ  ಸೇರಿದಂತೆ ಹಲವು ರಸ್ತೆಗಳನ್ನು ದುರಸ್ತಿ ಮಾಡಲಾಗಿತ್ತು. ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಹುತೇಕ ಎಲ್ಲ ರಸ್ತೆಗಳು ಬರುವುದರಿಂದ ಡಾಂಬರೀಕರಣ ಕಾಮಗಾರಿ ಸಾಧ್ಯವಾಗುತ್ತಿಲ್ಲ’ ಎಂದು ಪಂಚಾಯತರಾಜ್ ಎಂಜಿನಿಯರಿಂಗ್ ಇಲಾಖೆಯ ಎಇಇ ಮಹಮ್ಮದ್ ಇಜಾನ ಸಬೂರ ಹೇಳುತ್ತಾರೆ.

12 ಕಿ.ಮೀ ಕಾಲ್ನಡಿಗೆ ಅನಿವಾರ್ಯ

ಹೊನ್ನಾವರ ತಾಲ್ಲೂಕಿನ ಮಹಿಮೆ ಗ್ರಾಮಕ್ಕೆ ತೆರಳುವ ರಸ್ತೆ ಮಳೆಗಾಲದಲ್ಲಿ ಹಳ್ಳವಾಗಿ ಮಾರ್ಪಟ್ಟಿದೆ. ರಸ್ತೆ ಸರಿ ಇರದ ಕಾರಣ ಮಹಿಮೆ ಆರ್ಮುಡಿ ಮೊದಲಾದೆಡೆಗಳ ಬಸ್ ಸಂಚಾರ ಮಳೆಗಾಲ ಕಾಲಿಟ್ಟೊಡನೆ ಸ್ಥಗಿತವಾಗಿದೆ. ಕುಗ್ರಾಮಗಳಾದ ಬೈಲಗದ್ದೆ ಕಲ್ಕಟ್ಟೆ ಹಾಡವಳ್ಳಿ ಹಾಡಗೇರಿ ಮೊದಲಾದೆಡೆಗಳಲ್ಲೂ ರಸ್ತೆಯ ಪರಿಸ್ಥಿತಿ ಹದಗೆಟ್ಟಿರುವುದರಿಂದ ಜನರಿಗೆ ಸಂಚಾರ ದುಸ್ತರವಾಗಿದೆ. ‘ಗ್ರಾಮೀಣ ರಸ್ತೆಗಳ ನಿರ್ವಹಣೆಗಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಆಗಸ್ಟ್ ತಿಂಗಳಲ್ಲಿ ನಿರ್ವಹಣಾ ಕಾರ್ಯ ಆರಂಭಿಸಲಾಗುವುದು’ ಎಂದು ಪಂಚಾಯತರಾಜ್ ಎಂಜಿನಿಯರಿಂಗ್ ಇಲಾಖೆಯ ಎಇಇ ರಾಘವೇಂದ್ರ ನಾಯ್ಕ ತಿಳಿಸಿದರು. ‘ಮಹಿಮೆಗೆ ಸರ್ವಋತು ರಸ್ತೆ ನಿರ್ಮಿಸಿಕೊಡುವಂತೆ ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತ ಬಂದಿದ್ದೇವೆ. ರಸ್ತೆ ದುರವಸ್ಥೆಯ ಕಾರಣ ಮಳೆಗಾಲದಲ್ಲಿ ಹೆದ್ದಾರಿಗೆ ತಲುಪಲು 12 ಕಿ.ಮೀ.ನಡೆಯಬೇಕಾದ ದುಃಸ್ಥಿತಿ ಉಂಟಾಗಿದೆ’ ಎಂದು ಮಹಿಮೆ ಗ್ರಾಮದ ರಾಜೇಶ ನಾಯ್ಕ ಹೇಳಿದರು.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಶಾಂತೇಶ ಬೆನಕನಕೊಪ್ಪ, ಎಂ.ಜಿ.ಹೆಗಡೆ, ಜ್ಞಾನೇಶ್ವರ ದೇಸಾಯಿ, ರವಿ ಸೂರಿ, ಪ್ರವೀಣಕುಮಾರ ಸುಲಾಖೆ, ಮೋಹನ ನಾಯ್ಕ, ವಿಶ್ವೇಶ್ವರ ಗಾಂವ್ಕರ, ಸುಜಯ್ ಭಟ್, ಮೋಹನ ದುರ್ಗೇಕರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.