ಶಿರಸಿ: ಕೆಡಿಸಿಸಿ ಬ್ಯಾಂಕ್ ಶತಮಾನೋತ್ಸವ ಕಾರ್ಯಕ್ರಮವನ್ನು ಕೋವಿಡ್ ನಿಯಮ ಪಾಲಿಸಿ ಸೆ.6 ರಂದು ಆಡಳಿತ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಬ್ಯಾಂಕ್ ಅಧ್ಯಕ್ಷರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, '1920ರಲ್ಲಿ ಬ್ಯಾಂಕ್ ಸ್ಥಾಪನೆಯಾಯಿತು. ಶತಮಾನೋತ್ಸವ ದಾಟಿ ಬಂದಿದೆ. ರೈತರು, ಸಹಕಾರ ಕ್ಷೇತ್ರದ ಪ್ರಗತಿಗೆ ದೊಡ್ಡ ಕೊಡುಗೆ ನೀಡಿದೆ' ಎಂದರು.
'ಈ ಹಿಂದೆ ಎರಡು ಬಾರಿ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ನಡೆದಿತ್ತು. ಕೋವಿಡ್ ಅಡ್ಡಿಯಾಗಿತ್ತು. ಈಗ ಆಚರಣೆ ಅನಿವಾರ್ಯವಾಗಿದೆ. ನೂರು ವರ್ಷದ ಇತಿಹಾಸದಲ್ಲಿ ಬ್ಯಾಂಕ್ ನಡೆದು ಬಂದ ದಾರಿಯನ್ನು ಮೆಲಕು ಹಾಕುವ ಗಳಿಗೆ ಇದಾಗಲಿದೆ' ಎಂದರು.
'ಶತಮಾನೋತ್ಸವ ಕಾರ್ಯಕ್ರಮದಲ್ಲಿ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಕೃಷಿ ಸಚಿವ ಬಿ.ಸಿ.ಪಾಟೀಲ್, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಇನ್ನಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ' ಎಂದು ವಿವರಿಸಿದರು.
'ನಷ್ಟ ಕಾಣದೆ ಲಾಭದಲ್ಲಿ ಮುನ್ನಡೆದ ಬ್ಯಾಂಕ್ ಇದಾಗಿದ್ದು ಎರಡು ಬಾರಿ ನಬಾರ್ಡ್ ನೀಡುವ ರಾಷ್ಟ್ರಮಟ್ಟದ ಪ್ರಶಸ್ತಿಗೆ ಭಾಜನವಾಗಿದೆ. 42 ಬಾರಿ ಅಪೆಕ್ಸ್ ಬ್ಯಾಂಕ್ ಅತ್ಯುತ್ತಮ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಎಂದು ಪ್ರಶಸ್ತಿ ನೀಡಿದೆ' ಎಂದು ತಿಳಿಸಿದರು.
'₹29 ಸಾವಿರ ಶೇರು ಬಂಡವಾಳದೊಂದಿಗೆ ಸ್ಥಾಪನೆಯಾದ ಬ್ಯಾಂಕ್ 2020-21ನೇ ಹೊತ್ತಿಗೆ ₹79.18 ಕೋಟಿ ಶೇರು ಬಂಡವಾಳಕ್ಕೆ ತಲುಪಿದೆ. ₹9.44 ಕೋಟಿ ಲಾಭ ಗಳಿಸಿದೆ. ಮೂರು ಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ಗಳಿಸಿದೆ' ಎಂದರು.
'₹2536.46 ಕೋಟಿ ಠೇವಣಿ ಇದೆ. ₹1837.31 ಕೋಟಿ ಸಾಲ ನೀಡಲಾಗಿದೆ. ₹3181.63 ಕೋಟಿ ದುಡಿಯುವ ಬಂಡವಾಳ ಹೊಂದಿರುವ ಆರ್ಥಿಕವಾಗಿ ಬಲಾಢ್ಯ ಸಂಸ್ಥೆಯಾಗಿದೆ' ಎಂದರು.
'ಜಿಲ್ಲೆಯ ಹದಿನೈದು ಕಡೆಗಳಲ್ಲಿ ಹೊಸ ಶಾಖೆ ಆರಂಭಿಸಲು ನಿರ್ಧರಿಸಲಾಗಿದೆ. ಅನುಮತಿಗೆ ಪ್ರಸ್ತಾವ ಸಲ್ಲಿಸಿದ್ದೇವೆ' ಎಂದರು.
'ಕೋವಿಡ್ ಹಿನ್ನೆಲೆಯಲ್ಲಿ ಸೀಮಿತ ಜನರಿಗೆ ಮಾತ್ರ ಪಾಲ್ಗೊಳ್ಳಲು ಸೂಚಿಸಲಾಗಿದೆ. ಪ್ರಾಥಮಿಕ ಸಹಕಾರ ಸಂಘಗಳಿಂದ ತಲಾ ಒಬ್ಬರಿಗೆ ಮಾತ್ರ ಬರಲು ಅವಕಾಶ ನೀಡಲಾಗಿದೆ. ಸೊಸೈಟಿಗಳಿಗೆ ಕಪಾಟು ನೀಡುತ್ತಿದ್ದೇವೆ' ಎಂದರು.
ಉಪಾಧ್ಯಕ್ಷ ಮೋಹನದಾಸ ನಾಯಕ, ನಿರ್ದೇಶಕರಾದ ರಾಮಕೃಷ್ಣ ಹೆಗಡೆ ಕಡವೆ, ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಆರ್.ಎಂ.ಹೆಗಡೆ ಬಾಳೆಸರ, ಜಿ.ಆರ್.ಹೆಗಡೆ ಸೋಂದಾ, ಪ್ರಕಾಶ ಗುನಗಿ, ಬಾಬು ಸುಂಕೇರಿ, ಕೃಷ್ಣಾ ದೇಸಾಯಿ,ಪ್ರಮೋದ ಧವಳೆ, ಪ್ರಧಾನ ವ್ಯವಸ್ಥಾಪಕ ಆರ್.ಜಿ.ಭಾಗ್ವತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.