ಶಿರಸಿ: ಕೊರೊನಾ ವೈರಸ್ ತಲ್ಲಣದ ನಡುವೆ ಹಳ್ಳಿಗರಲ್ಲಿ ಭಯ ಹುಟ್ಟಿಸಿರುವ ಕ್ಯಾಸನೂರು ಅರಣ್ಯ ಕಾಯಿಲೆ (ಕೆಎಫ್‌ಡಿ) ಮರೆಗೆ ಸರಿದಿದೆ. ಒಂದು ತಿಂಗಳ ಈಚೆಗೆ ಸಿದ್ದಾಪುರ ತಾಲ್ಲೂಕಿನಲ್ಲಿ 10 ಜನರಿಗೆ ಈ ಕಾಯಿಲೆ ಬಂದಿರುವುದು ದೃಢಪಟ್ಟಿದೆ. ಅವರಲ್ಲಿ ಒಬ್ಬ ರೋಗಿ ಮೃತಪಟ್ಟಿದ್ದಾರೆ.
ಕಳೆದ ವರ್ಷ ಬಾಳಗೋಡಿನಲ್ಲಿ ಆರ್ಭಟಿಸಿದ್ದ ಮಂಗನ ಕಾಯಿಲೆ, ಈ ಬಾರಿ ಅಲ್ಲಿಂದ 10 ಕಿ.ಮೀ ದೂರದ ಹೊನ್ನೇಘಟಕಿ ಹಾಗೂ ಕಾನಸೂರು ಸುತ್ತಮುತ್ತಲಿನ ಹಳ್ಳಿಗರ ನಿದ್ದೆಗೆಡಿಸಿದೆ. 60ಕ್ಕೂ ಹೆಚ್ಚು ಮಂಗಗಳು ಮೃತಪಟ್ಟಿರುವ ಈ ಭಾಗವನ್ನು ಆರೋಗ್ಯ ಇಲಾಖೆ ‘ರೆಡ್ ಅಲರ್ಟ್’ ಪ್ರದೇಶವೆಂದು ಘೋಷಿಸಿದೆ.
’ಕೆಎಫ್‌ಡಿಯಿಂದ ಕೃಷಿ ಚಟುವಟಿಕೆಗೆ ತೀವ್ರ ಹಿನ್ನಡೆಯಾಗಿದೆ. ರೈತರು ತೋಟಕ್ಕೆ ಹೋಗಲು, ಕೆಲಸಕ್ಕೆ ಕೃಷಿ ಕಾರ್ಮಿಕರನ್ನು ಕರೆಯಲು ಹಿಂದೇಟು ಹಾಕುತ್ತಿದ್ದಾರೆ. 150ಕ್ಕೂ ಹೆಚ್ಚು ಮನೆಗಳಿರುವ ಇಟಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆ ಜಾಗೃತಿ ಕಾರ್ಯ ನಡೆಸುತ್ತಿದೆ. ಆದರೆ, ಜನರಲ್ಲಿ ಅವ್ಯಕ್ತ ಆತಂಕ ಉಳಿದಿದೆ’ ಎನ್ನುತ್ತಾರೆ ಇಟಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಮೇಶ ಹೆಗಡೆ.
‘ಕೆಎಫ್‌ಡಿ ಪೀಡಿತ ಪ್ರದೇಶದ ಜನರು ಕನಿಷ್ಠ ಎರಡು ಬಾರಿ ಲಸಿಕೆ ಪಡೆಯಬೇಕು ಎಂಬ ವೈದ್ಯಕೀಯ ತಜ್ಞರ ಸಲಹೆಯನ್ನು ಜನರು ನಿರ್ಲಕ್ಷಿಸಬಾರದು. ಮಂಗನ ಕಾಯಿಲೆ ಯಾವ ಪ್ರಾಣಿಯಿಂದ ಬರುತ್ತದೆ ಎಂಬುದು ಇನ್ನೂ ದೃಢಪಟ್ಟಿಲ್ಲದ ಕಾರಣ, ಕ್ಷೇತ್ರ ಹಾಗೂ ಪ್ರಯೋಗಾಲಯ ಅಧ್ಯಯನ ಒಳಗೊಂಡ, (epidemiological study) ಸಮಗ್ರ ಅಧ್ಯಯನ ನಡೆಯಬೇಕು. ಮಂಗಗಳ ಚಲನವಲನ ಆಧರಿಸಿ ಕಾಯಿಲೆ ಹರಡುವುದರಿಂದ, ಅರಣ್ಯ ಇಲಾಖೆ ಈ ಸಂಗತಿಯನ್ನು ಸೂಕ್ಷ್ಮವಾಗಿ ಗಮನಿಸಬೇಕು’ ಎನ್ನುತ್ತಾರೆ ಸಸ್ಯಸಂರಕ್ಷಣಾ ಶಾಸ್ತ್ರಜ್ಞ ಡಾ.ಕೇಶವ ಕೊರ್ಸೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.