ADVERTISEMENT

ನರ್ಸಿಂಗ್ ವಿದ್ಯಾರ್ಥಿಗಳಿಗೆ ಅನ್ಯಾಯ: ಸಚಿವರಿಗೆ ದೂರು

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 14:45 IST
Last Updated 13 ಜೂನ್ 2024, 14:45 IST
ಸತೀಶ ಸೈಲ್
ಸತೀಶ ಸೈಲ್   

ಪ್ರಜಾವಾಣಿ ವಾರ್ತೆ

ಕಾರವಾರ: ‘ಖಾಸಗಿ ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆಗೆ ಕ್ರಿಮ್ಸ್ ಅವಕಾಶ ಕೊಡುತ್ತಿಲ್ಲ. ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವರನ್ನು ಖುದ್ದು ಭೇಟಿಯಾಗಿ ದೂರು ನೀಡಲಾಗುವುದು’ ಎಂದು ಶಾಸಕ ಸತೀಶ ಸೈಲ್ ಹೇಳಿದರು.

‘ಸದಾಶಿವಗಡದಲ್ಲಿರುವ ಸುಮತಿ ನಾಯ್ಕ ನರ್ಸಿಂಗ್ ಸಂಸ್ಥೆಯ ವಿದ್ಯಾರ್ಥಿಗಳು ಕಳೆದ 22 ವರ್ಷಗಳಿಂದಲೂ ಜಿಲ್ಲಾಸ್ಪತ್ರೆಯಲ್ಲಿ ಪ್ರಾಯೋಗಿಕ ತರಬೇತಿ ನಡೆಸುತ್ತಿದ್ದರು. ಈ ಬಾರಿಯೂ ತರಬೇತಿಗೆ ಸಂಸ್ಥೆಯು ಸರ್ಕಾರಕ್ಕೆ ಶುಲ್ಕವನ್ನೂ ಭರಿಸಿದೆ. ಆದರೆ, ಅವರಿಗೆ ಮಾತ್ರ ಅವಕಾಶ ನಿರಾಕರಿಸಲಾಗಿದೆ’ ಎಂದು ಗುರುವಾರ ಇಲ್ಲಿ ಸುದ್ದಿಗೋಷ್ಠಿ ನಡೆಸಿ ದೂರಿದರು.

ADVERTISEMENT

‘ಕ್ರಿಮ್ಸ್ ನಿರ್ದೇಶಕರನ್ನು ವಿಚಾರಿಸಿದರೆ ವೈದ್ಯಕೀಯ ಶಿಕ್ಷಣ ಸಚಿವರ ಆದೇಶವಿದೆ ಎನ್ನುತ್ತಾರೆ. ನೇರವಾಗಿ ವೈದ್ಯಕೀಯ ಶಿಕ್ಷಣ ಸಚಿವರಿಗೆ ದೂರವಾಣಿ ಕರೆ ಮಾಡಿದಾಗ ಅಂತಹ ಯಾವುದೇ ಆದೇಶ ನೀಡಿಲ್ಲ ಎನ್ನುತ್ತಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು ಸಚಿವರನ್ನು ನೇರವಾಗಿ ಭೇಟಿ ಮಾಡಿ ಕ್ರಿಮ್ಸ್ ಅವ್ಯವಸ್ಥೆಯ ಬಗ್ಗೆ ದೂರುತ್ತೇನೆ’ ಎಂದರು.

‘ಅಧಿಕಾರಿಗಳೊಂದಿಗೆ ಮಳೆಗಾಲದ ಪೂರ್ವಭಾವಿ ಸಭೆ ನಡೆಸಿದ್ದೇನೆ. ಕೆ.ಪಿ.ಟಿ.ಸಿ.ಎಲ್, ಕೆ.ಪಿ.ಸಿ ಜತೆ ಸಭೆಯಾಗಿದೆ. ಕದ್ರಾ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಕಾಯ್ದುಕೊಳ್ಳಲು ಸೂಚಿಸಲಾಗಿದೆ. ಚತುಷ್ಪಥ ಹೆದ್ದಾರಿ ನಿರ್ಮಿಸುತ್ತಿರುವ ಐ.ಆರ್.ಬಿ ಕಂಪನಿಯು ಬೀದಿದೀಪ ಅಳವಡಿಕೆ, ತಂಗುದಾಣ ನಿರ್ಮಾಣದ ಭರವಸೆ ಈಡೇರಿಸಿಲ್ಲ. ಕಾಮಗಾರಿಯನ್ನೂ ಸರಿಯಾಗಿ ನಡೆಸುತ್ತಿಲ್ಲ’ ಎಂದು ದೂರಿದರು.

ಗಣಪತಿ ಮಾಂಗ್ರೆ, ಸಮೀರ ನಾಯ್ಕ, ಕಿಶೋರ ರಾಣೆ, ಮಂಜುನಾಥ ಸಾವಂತ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.