ADVERTISEMENT

ಕೆಎಸ್‌ಎನ್ ಸಾಹಿತ್ಯದಿಂದ ಮನಸ್ಸಿಗೆ ಚೈತನ್ಯ

ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಬಿ.ಎ. ವಿವೇಕ ರೈ ಅಭಿಮತ

​ಪ್ರಜಾವಾಣಿ ವಾರ್ತೆ
Published 21 ಜುಲೈ 2018, 14:26 IST
Last Updated 21 ಜುಲೈ 2018, 14:26 IST
ಶಿರಸಿಯಲ್ಲಿ ಆಯೋಜಿಸಿರುವ ವಸಂತೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಬಿ.ಎ. ವಿವೇಕ ರೈ ಮಾತನಾಡಿದರು
ಶಿರಸಿಯಲ್ಲಿ ಆಯೋಜಿಸಿರುವ ವಸಂತೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಬಿ.ಎ. ವಿವೇಕ ರೈ ಮಾತನಾಡಿದರು   

ಶಿರಸಿ: ಕೆ.ಎಸ್‌.ನರಸಿಂಹಸ್ವಾಮಿ ಅವರ ದಾರ್ಶನಿಕ ಸಾಹಿತ್ಯವು ಮನಸ್ಸಿಗೆ ಚೈತನ್ಯ ನೀಡುತ್ತದೆ. ಸಮಾಜದಲ್ಲಿರುವ ಕೌಟುಂಬಿಕ ಪದ್ಧತಿಯನ್ನು ಗಟ್ಟಿಗೊಳಿಸುವಲ್ಲಿ ಅವರ ಸಾಹಿತ್ಯ ಪೂರಕವಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಬಿ.ಎ. ವಿವೇಕ ರೈ ಹೇಳಿದರು.

ಮಂಡ್ಯದ ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್, ಇಲ್ಲಿನ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಆಯೋಜಿಸಿರುವ ಎರಡು ದಿನಗಳ ವಸಂತೋತ್ಸವವನ್ನು ಶನಿವಾರ ಸಂಜೆ ಉದ್ಘಾಟಿಸಿ, ಅವರು ಮಾತನಾಡಿದರು. ಮಾನವ ಬದುಕಿನ ಮಗ್ಗುಲುಗಳನ್ನು ಸಾಹಿತ್ಯದ ಮೂಲಕ ಬಿಚ್ಚಿಡುವ ಕೆ.ಎಸ್.ಎನ್ ಅವರ ಸಾಹಿತ್ಯದ ಕ್ರಮ ಅನನ್ಯವಾಗಿದೆ. ಸಾಹಿತ್ಯ ಚೌಕಟ್ಟಿನೊಳಗೆ ರಚನೆಯಾಗಿರುವ ಅವರ ಕವಿತೆಗಳು ಖಿನ್ನತೆ ದೂರ ಮಾಡುತ್ತವೆ. ಅವರ ಬರಹ ಶೈಲಿ ಅನುಕರಣೀಯವಾಗಿದೆ. ಕನ್ನಡಕ್ಕೆ ಸುದೀರ್ಘ ಸಾಹಿತ್ಯ ಪರಂಪರೆಯಿದೆ. ಈ ಪರಂಪರೆಯಲ್ಲಿ ಜರುಗುತ್ತಿರುವ ವಸಂತೋತ್ಸವವು ಮನರಂಜನೆ ಜತೆಗೆ, ಜ್ಞಾನೋತ್ಸವವಾಗಿದೆ ಎಂದರು.

ಕೆ.ಎಸ್.ಎನ್ ಟ್ರಸ್ಟ್ ಅಧ್ಯಕ್ಷ ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡಿ, ‘ಕರ್ನಾಟಕ ಸಮಗ್ರವಾಗಿ ಒಂದಾಗಬೇಕು, ಕನ್ನಡ ಮನಸ್ಸುಗಳನ್ನು ಸಂಘಟಿಸಬೇಕು. ಕನ್ನಡ ಪರಂಪರೆ ಅರಿತು ಭಾಷೆ ಕಟ್ಟುವ ಕೆಲಸ ಆಗಬೇಕು ಎಂಬ ಉದ್ದೇಶದಿಂದ ಕೆ.ಎಸ್.ಎನ್ ಟ್ರಸ್ಟ್ ಕೆಲಸ ಮಾಡುತ್ತಿದೆ’ ಎಂದರು.

ADVERTISEMENT

ನರಸಿಂಹ ಸ್ವಾಮಿ ಅವರು ಸಮಯದ ಒಳಗಣ್ಣು ತೆರೆಸುವ ಕಾರ್ಯ ಮಾಡಿದ್ದರು. ಕೌಟುಂಬಿಕ ಪರಿಕಲ್ಪನೆಗೆ ಹೆಚ್ಚಿನ ಮಹತ್ವ ನೀಡಿದ್ದರು. ಅದೇ ಮಾರ್ಗದಲ್ಲಿ ಟ್ರಸ್ಟ್ ಸಾಗುತ್ತಿದೆ. ವಸಂತೋತ್ಸವದ ಮಾದರಿಯಲ್ಲೇ ರೈತೋತ್ಸವ ಕೂಡ ಆಯೋಜಿಸುವ ಚಿಂತನೆಯಿದೆ ಎಂದು ಹೇಳಿದರು.

ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಕಿಕ್ಕೇರಿ ಕೃಷ್ಣಮೂರ್ತಿ, ಉಪವಿಭಾಗಾಧಿಕಾರಿ ಕೆ.ರಾಜು ಮೊಗವೀರ, ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ, ಟ್ರಸ್ಟ್ ಖಜಾಂಚಿ ಕೆ.ಜೆ. ನಾರಾಯಣ, ಸದಸ್ಯ ರವಿಕುಮಾರ, ಶ್ರೀನಿವಾಸ ಉಡುಪ, ಜಾವಗಲ್ ಪ್ರಸನ್ನಕುಮಾರ, ಮಾರಿಕಾಂಬಾ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ವೆಂಕಟೇಶ ನಾಯ್ಕ, ಉಪಾಧ್ಯಕ್ಷ ಮನೋಹರ ಮಲ್ಮನೆ, ಲಯನ್ಸ್ ಕ್ಲಬ್ ಅಧ್ಯಕ್ಷೆ ಪ್ರತಿಭಾ ಹೆಗಡೆ ಇದ್ದರು.

ಮಾರಿಕಾಂಬಾ ಪ್ರೌಢಶಾಲೆ, ಲಯನ್ಸ್‌ ಶಾಲೆ, ಸುಗಮ ಸಂಗೀತ ಪರಿಷತ್ ಘಟಕದ ಪದಾಧಿಕಾರಿಗಳಿಂದ ಸಮೂಹ ಗಾಯನ, ಶಿರಸಿ ದೃಷ್ಟಿ ತಂಡ, ಡಾನ್ಸ್ ರೇಂಜರ್ಸ್ ತಂಡ, ನಾಟ್ಯಂ ತಂಡ ಹಾಗೂ ಹುಲೇಕಲ್ ಪೂಜಾ ತಂಡದ ಕಲಾವಿದರಿಂದ ನೃತ್ಯ ವೈಭವ ಕಾರ್ಯಕ್ರಮ ನಡೆಯಿತು. ಕೆ.ಎಸ್.ಎನ್ ಗೀತೆಗಳಿಗೆ ಬಾಲ ಕಲಾವಿದೆ ತುಳಸಿ ಹೆಗಡೆ ಯಕ್ಷಗಾನದ ಹೆಜ್ಜೆ ಹಾಕಿದಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.