ADVERTISEMENT

ಕಾರವಾರಕ್ಕಿಲ್ಲ ವಾಯು ಮಾಲಿನ್ಯದ ಅಪಾಯ!

ಗಾಳಿಯ ಗುಣಮಟ್ಟ ಪರಿಶೀಲಿಸಿದ್ದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ

ಗಣಪತಿ ಹೆಗಡೆ
Published 28 ನವೆಂಬರ್ 2023, 5:06 IST
Last Updated 28 ನವೆಂಬರ್ 2023, 5:06 IST
ಕಾರವಾರದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ ಕಟ್ಟಡದ ಮೇಲೆ ಅಳವಡಿಸಲಾದ ಪರಿವೇಷ್ಟಕ ವಾಯು ಮಾಪನ ಯಂತ್ರವನ್ನು ಉಪ ಪರಿಸರ ಅಧಿಕಾರಿ ಗಣಪತಿ ಹೆಗಡೆ ಪರಿಶೀಲಿಸಿದರು
ಕಾರವಾರದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ ಕಟ್ಟಡದ ಮೇಲೆ ಅಳವಡಿಸಲಾದ ಪರಿವೇಷ್ಟಕ ವಾಯು ಮಾಪನ ಯಂತ್ರವನ್ನು ಉಪ ಪರಿಸರ ಅಧಿಕಾರಿ ಗಣಪತಿ ಹೆಗಡೆ ಪರಿಶೀಲಿಸಿದರು   

ಕಾರವಾರ: ದೀಪಾವಳಿ ಹಬ್ಬಕ್ಕೆ ಕೆಲವು ದಿನದ ಮುಂಚೆ ಮತ್ತು ಹಬ್ಬದ ನಂತರ ನಗರ ವ್ಯಾಪ್ತಿಯಲ್ಲಿ ಗಾಳಿಯ ಗುಣಮಟ್ಟದ ತಪಾಸಣೆ ನಡೆಸಿದ್ದ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿಯು ಇಲ್ಲಿ ಮಾಲಿನ್ಯಕಾರಕ ಅಂಶಗಳ ಪ್ರಮಾಣ ಕಡಿಮೆ ಇದೆ ಎಂಬುದನ್ನು ದೃಢಪಡಿಸಿದೆ.

ನಗರದ ಕೆ.ಎಚ್.ಬಿ ಕಾಲೊನಿಯಲ್ಲಿರುವ ಮಂಡಳಿಯ ಪ್ರಾದೇಶಿಕ ಕಚೇರಿಯ ಕಟ್ಟಡದ ಮೇಲೆ ಗಾಳಿಯ ಗುಣಮಟ್ಟ ಅಳೆಯುವ ಪರಿವೇಷ್ಟಕ ವಾಯು ಮಾಪನ ಅಳವಡಿಸಲಾಗಿದೆ. ಈ ಯಂತ್ರದ ಸಹಾಯದೊಂದಿಗೆ ಪ್ರತಿ ವರ್ಷ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಗಾಳಿಯ ಗುಣಮಟ್ಟವನ್ನು ಪರಿಶೀಲಿಸಲಾಗುತ್ತದೆ.

‘ಗಾಳಿಯಲ್ಲಿ ಇರುವ ಧೂಳಿನ ಕಣ, ಸಲ್ಫರ್ ಆಕ್ಸೈಡ್, ನೈಟ್ರೋಜನ್ ಆಕ್ಸೈಡ್ ಪ್ರಮಾಣಗಳ ಮಟ್ಟವನ್ನು ಅಳೆಯಲಾಗುತ್ತದೆ. ಪ್ರತಿ ಘನ ಮೀಟರ್ ವ್ಯಾಪ್ತಿಯಲ್ಲಿರುವ ಕಣಗಳ ಪ್ರಮಾಣ ಆಧರಿಸಿ ಗುಣಮಟ್ಟ ನಿರ್ಧರಿಸಲಾಗುತ್ತದೆ’ ಎನ್ನುತ್ತಾರೆ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ಗಣಪತಿ ಹೆಗಡೆ.

ADVERTISEMENT

‘ನ.5 ರಿಂದ 11ರ ವರೆಗೆ ಒಂದು ಹಂತದಲ್ಲಿ ನಗರ ವ್ಯಾಪ್ತಿಯಲ್ಲಿ ಗಾಳಿಯ ಗುಣಮಟ್ಟ ಪರೀಕ್ಷೆಗೆ ಒಳಪಡಿಸಲಾಗಿತ್ತು. ನ.12 ರಿಂದ 19ರ ವರೆಗೆ ಎರಡನೇ ಹಂತದಲ್ಲಿ ಪರೀಕ್ಷೆ ನಡೆಯಿತು. ಯಂತ್ರದ ಮಾಹಿತಿಯನ್ನು, ಪರೀಕ್ಷೆಗೆ ಬಳಸಿದ ಉಪಕರಣಗಳನ್ನು ಧಾರವಾಡದಲ್ಲಿರುವ ಮಂಡಳಿಯ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಗಾಳಿಯಲ್ಲಿ ಮಾಲಿನ್ಯಕಾರಕ ಅಂಶಗಳು ಹೆಚ್ಚಿಲ್ಲ ಎಂದು ವರದಿ ದೃಢಪಟಿಸಿದೆ’ ಎಂದು ತಿಳಿಸಿದರು.

‘ನ.5 ರಿಂದ 11ರ ವರೆಗೆ ಗಾಳಿಯ ಗುಣಮಟ್ಟದ ಪರೀಕ್ಷೆ ನಡೆಸಿದ್ದ ವೇಳೆ ಪ್ರತಿ ಘನ್ ಮೀಟರ್ ನಲ್ಲಿ ಸರಾಸರಿ 4.1 ಮೈಕ್ರೊ ಗ್ರಾಂ ಸಲ್ಫರ್ ಆಕ್ಸೈಡ್, 11.1 ಮೈಕ್ರೊ ಗ್ರಾಂ ನೈಟ್ರೋಜನ್ ಆಕ್ಸೈಡ್, 39.7 ಮೈಕ್ರೊ ಗ್ರಾಂ 10 ಮೈಕ್ರಾನ್ ಅಳತೆಯ ಧೂಳಿನ ಕಣ, 8.4 ಮೈಕ್ರೊ ಗ್ರಾಂ 2.5 ಮೈಕ್ರಾನ್ ಅಳತೆಯ ಧೂಳಿನ ಕಣ ಇದ್ದವು. ದೀಪಾವಳಿ ಆಚರಣೆ ಮತ್ತು ನಂತರದ ಅವಧಿಯಲ್ಲಿ ಈ ಪ್ರಮಾಣವು ಕ್ರಮವಾಗಿ 5 ಮೈಕ್ರೊ ಗ್ರಾಂ, 14 ಮೈಕ್ರೊ ಗ್ರಾಂ, 64.8 ಮೈಕ್ರೊ ಗ್ರಾಂ ಹಾಗೂ 16 ಮೈಕ್ರೊ ಗ್ರಾಂ ಇದ್ದವು’ ಎಂದು ವಿವರಿಸಿದರು.

‘ಪ್ರತಿ ಘನ್ ಮೀಟರ್ ಗಾಳಿಯಲ್ಲಿ ತಲಾ 80 ಮೈಕ್ರೊ ಗ್ರಾಂ ಸಲ್ಫರ್ ಆಕ್ಸೈಡ್ ಮತ್ತು ನೈಟ್ರೋಜನ್ ಆಕ್ಸೈಡ್, 100 ಮೈಕ್ರೊ ಗ್ರಾಂ 10 ಮೈಕ್ರಾನ್ ಅಳತೆಯ ಧೂಳಿನ ಕಣ, 60 ಮೈಕ್ರೊ ಗ್ರಾಂ 2.5 ಮೈಕ್ರಾನ್ ಅಳತೆಯ ಧೂಳಿನ ಕಣ ಇದ್ದರೆ ಮಾತ್ರ ವಾಯುಮಾಲಿನ್ಯವಾಗಿದೆ ಎಂದು ಪರಿಗಣಿತವಾಗುತ್ತದೆ. ಹೀಗಾಗಿ ಸದ್ಯಕ್ಕೆ ಕಾರವಾರದಲ್ಲಿ ಆತಂಕವಿಲ್ಲ’ ಎಂದು ಸ್ಪಷ್ಟಪಡಿಸಿದರು.

ಹಸಿರು ಪಟಾಕಿ ಮಾರಾಟದ ಕುರಿತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಪರಿಸರ ಅಧಿಕಾರಿ ಬಿ.ಕೆ.ಸಂತೋಷ್ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗಿತ್ತು
ಪರಿವೇಷ್ಟಕ ವಾಯು ಮಾಪನ ಯಂತ್ರವು ಕಾರವಾರ ನಗರದ ಬಹುಭಾಗದ ಗಾಳಿಯ ಗುಣಮಟ್ಟ ಅಳೆಯಲು ನೆರವಾಗಿದ್ದು ವಾಯು ಮಾಲಿನ್ಯದ ಅಪಾಯ ಸದ್ಯಕ್ಕೆ ಎದುರಾಗಿಲ್ಲ ಎಂಬುದು ಪರೀಕ್ಷೆಯಿಂದ ದೃಢಪಟ್ಟಿದೆ
ಬಿ.ಕೆ.ಸಂತೋಷ್ ಜಿಲ್ಲಾ ಪರಿಸರ ಅಧಿಕಾರಿ

ಜಾಗೃತಿ ಕಾರ್ಯಕ್ರಮದ ಪರಿಣಾಮ ‘ದೀಪಾವಳಿ ಆಚರಣೆಗೆ ಮುನ್ನ ಜಿಲ್ಲೆಯ ಹಲವೆಡೆ ಪಟಾಕಿ ಬಳಸದಂತೆ ಜಾಗೃತಿ ಮೂಡಿಸುವ ಕಾರ್ಯ ನಡೆಸಲಾಯಿತು. ಬಳಕೆ ಮಾಡುವುದಿದ್ದರೆ ಕೇವಲ ಹಸಿರು ಪಟಾಕಿ ಮಾತ್ರ ಬಳಸಲು ಎಚ್ಚರಿಸಲಾಯಿತು. ಜಿಲ್ಲಾಧಿಕಾರಿ ಕೂಡ ಈ ಬಗ್ಗೆ ಜನರಿಗೆ ಎಚ್ಚರಿಕೆ ಮೂಡಿಸಿದ್ದರು. ಅಲ್ಲದೆ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ನೀಡುವ ಬಗ್ಗೆ ನಿಗಾ ಇರಿಸಲಾಗಿತ್ತು. ವಾಯು ಮಾಲಿನ್ಯ ಪ್ರಮಾಣ ಕಡಿಮೆಯಾಗಲು ಇದೂ ಒಂದು ಕಾರಣ’ ಎಂದು ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಪರಿಸರ ಅಧಿಕಾರಿ ಬಿ.ಕೆ.ಸಂತೋಷ್ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.