ಅಂಕೋಲಾ: ತಾಲ್ಲೂಕಿನ ನೀಲಂಪುರ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬುಧವಾರ ಕೆ.ಎಸ್.ಆರ್.ಟಿ.ಸಿ ಬಸ್ ಮತ್ತು ಮೀನು ಸಾಗಿಸುತ್ತಿದ್ದ ಲಾರಿಯ ನಡುವೆ ಅಪಘಾತವಾಗಿದೆ. ಬಸ್ ಚಾಲಕ ಹನುಮಂ ಯಡಳ್ಳಿ ಸಣ್ಣಪುಟ್ಟ ಗಾಯಗೊಂಡಿದ್ದು, 23 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಘಾತಾದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಮೀನು ಹಾನಿಗೀಡಾಗಿದೆ. ಅಂತೆಯೇ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಕುಮಾರ ದೊಡ್ಡಮನೆ ಎಂಬುವವರ ಬೈಕ್ ಲಾರಿಯಡಿಯಲ್ಲಿ ಸಿಲುಕಿ ಸಂಪೂರ್ಣ ಜಖಂಗೊಂಡಿದೆ.
ಲಾರಿಯು ಅಂಕೋಲಾದಿಂದ ಕಾರವಾರ ಮಾರ್ಗವಾಗಿ ಚಲಿಸುತ್ತಿತ್ತು. ಹುಬ್ಬಳ್ಳಿ- ಕಾರವಾರ ಮಾರ್ಗದ ಬಸ್ ಅಂಕೋಲಾ ನಿಲ್ದಾಣದೆಡೆಗೆ ತೆರಳುತ್ತಿತ್ತು. ಅಂಕೋಲಾ ಪಟ್ಟಣ ಪ್ರವೇಶಿಸುವ ಕಣಕಣೇಶ್ವರ ರಸ್ತೆಯ ಕಾಮಗಾರಿ ನಡೆಯುತ್ತಿದೆ. ಹಾಗಾಗಿ ರಾಷ್ಟ್ರೀಯ ಹೆದ್ದಾರಿಯ ಮೂಲಕ ತೆರಳಬೇಕಿತ್ತು. ಬಸ್ ಚಾಲಕ ಅಜಾಗರೂಕತೆಯಿಂದ ರಾಷ್ಟ್ರೀಯ ಹೆದ್ದಾರಿಯ ಎಡಭಾಗದಲ್ಲಿ ವಾಹನ ಚಲಾಯಿಸುವುದನ್ನು ಬಿಟ್ಟು, ಬಲಭಾಗದ ರಸ್ತೆಯಲ್ಲಿ ಬಸ್ ಚಲಾಯಿಸಿದ್ದರಿಂದ ಅಪಘಾತ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಲಾರಿಯು ರಸ್ತೆ ಪಕ್ಕದ ಕಂದಕದಲ್ಲಿರುವ ವಿದ್ಯುತ್ ಕಂಬದ ಮೇಲೆ ಉರುಳಿ ಬಿದ್ದಿದೆ.ವಾಹನದಲ್ಲಿ ಸಿಲುಕಿದ್ದಲಾರಿ ಚಾಲಕನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸಹಾಯದಿಂದ ಹೊರತೆಗೆಯಲಾಯಿತು.
ಘಟನಾ ಸ್ಥಳಕ್ಕೆ ಸಾರಿಗೆ ಸಂಸ್ಥೆಯ ಅಂಕೋಲಾ ಘಟಕ ವ್ಯವಸ್ಥಾಪಕಿ ಚೈತನ್ಯಾ ಗಳಗಟ್ಟಿ, ಎ.ಟಿ.ಎಸ್ ಗಜಾನನ ಹಾದಿಮನಿ, ಅಗ್ನಿಶಾಮಕ ದಳದ ಉಮೇಶ ನಾಯ್ಕ ಮತ್ತು ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.