ADVERTISEMENT

ಸರ್ಕಾರಿ ನೌಕರರೆಂದು ಪರಿಗಣಿಸಲು ಒತ್ತಾಯ

ರಾಜ್ಯ ರಸ್ತೆ ಸಾರಿಗೆ ನೌಕರರಿಂದ ಪ್ರತಿಭಟನಾ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2020, 12:34 IST
Last Updated 31 ಜನವರಿ 2020, 12:34 IST
ಪೂರ್ಣ ಪ್ರಮಾಣದಲ್ಲಿ ಸರ್ಕಾರಿ ನೌಕರರೆಂದು ಪರಿಗಣಿಸಲು ಒತ್ತಾಯಿಸಿ ರಾಜ್ಯ ಸಾರಿಗೆ ಸಂಸ್ಥೆಯ ನೌಕರರು ಕಾರವಾರದಲ್ಲಿ ಶನಿವಾರ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿದರು.
ಪೂರ್ಣ ಪ್ರಮಾಣದಲ್ಲಿ ಸರ್ಕಾರಿ ನೌಕರರೆಂದು ಪರಿಗಣಿಸಲು ಒತ್ತಾಯಿಸಿ ರಾಜ್ಯ ಸಾರಿಗೆ ಸಂಸ್ಥೆಯ ನೌಕರರು ಕಾರವಾರದಲ್ಲಿ ಶನಿವಾರ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿದರು.   

ಕಾರವಾರ:ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರನ್ನು ಪೂರ್ಣ ಪ್ರಮಾಣದಲ್ಲಿ ಸರ್ಕಾರಿ ನೌಕರರು ಎಂದು ಪರಿಗಣಿಸುವಂತೆಉತ್ತರ ಕನ್ನಡ ಶಿರಸಿ ವಿಭಾಗದ ಕಾರ್ಮಿಕರ ಸಂಘಗಳ ಜಂಟಿ ಸಮಿತಿ ಒತ್ತಾಯಿಸಿದೆ.

ಈ ಸಂಬಂಧ ನಗರದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಚೇರಿಗೆ ಶುಕ್ರವಾರ ಮೆರವಣಿಗೆಯಲ್ಲಿ ಸಾಗಿ ಬೇಡಿಕೆ ಮಂಡಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರು, ‘ಪ್ರತಿಭಟನಾ ಮೆರವಣಿಗೆಯಲ್ಲಿ ಕರ್ತವ್ಯ ಮುಗಿಸಿ ಬಂದ ಹಾಗೂ ವಾರದ ರಜೆಯಲ್ಲಿರುವ ಸಿಬ್ಬಂದಿ ಮಾತ್ರ ಭಾಗವಹಿಸಿದ್ದಾರೆ.ಪ್ರಯಾಣಿಕರಿಗೆತೊಂದರೆ ನೀಡಿ ಪ್ರತಿಭಟನೆ ಹಮ್ಮಿಕೊಳ್ಳುವ ಉದ್ದೇಶ ನಮಗಿಲ್ಲ. ಆದರೆ, ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ನಾವು ಕರ್ತವ್ಯದಲ್ಲಿ ಮುಂದುವರಿಯುತ್ತೇವೆ. ಆದರೆ, ನಮ್ಮ ಹೆಂಡತಿ ಮಕ್ಕಳು ಜಿಲ್ಲಾಧಿಕಾರಿ, ತಹಶೀಲ್ದಾರ್ ಕಚೇರಿಗಳ ಎದುರು ಧರಣಿ ಕೂರುತ್ತಾರೆ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಲ್ಲಿ 1.25 ಲಕ್ಷ ನೌಕರರಿದ್ದಾರೆ. ಎಲ್ಲರೂ ಕುಟುಂಬಗಳ ಜೊತೆಗೂ ಇರಲಾಗದೇ ಹಬ್ಬ ಹರಿದಿನಗಳ ಸಂಭ್ರಮದಲ್ಲಿ ಭಾಗವಹಿಸಲಾಗದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಸರ್ಕಾರವು ಕಾಲಕಾಲಕ್ಕೆ ಕೊಡಬೇಕಾದ ಸೌಲಭ್ಯಗಳ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಸರ್ಕಾರಿ ನೌಕರರ ವೇತನಕ್ಕೆ ಹೋಲಿಸಿದರೆ ಸಾರಿಗೆ ಸಿಬ್ಬಂದಿಯ ವೇತನವು ಶೇ 40ರಷ್ಟು ಕಡಿಮೆಯಿದೆ. ಇತರ ಸೌಲಭ್ಯಗಳೂ ಸಿಗುತ್ತಿಲ್ಲ’ ಎಂದು ಅಳಲು ತೋಡಿಕೊಂಡರು.

‘ಸಿಬ್ಬಂದಿಯ ಬೇಡಿಕೆಗಳನ್ನು ಈಡೇರಿಸಲು ಸಂಸ್ಥೆಯ ನಾಲ್ಕು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರನ್ನು ಒಳಗೊಂಡ ಸಮಿತಿಯನ್ನು ರಚಿಸಿರುವುದು ಸ್ವಾಗತಾರ್ಹ. ಆದರೆ, ಸಮಿತಿಯು ತನ್ನ ವರದಿ ನೀಡಲು ಕಾಲಮಿತಿಯನ್ನು ನಿಗದಿ ಮಾಡಿಲ್ಲ. ಇದು ಸಿಬ್ಬಂದಿಯ ಆತಂಕಕ್ಕೆ ಕಾರಣವಾಗಿದೆ. ಆದ್ದರಿಂದ ಸಾರಿಗೆ ನೌಕರರಿಗೆ ಸಿಗಬೇಕಿರುವ ಎಲ್ಲ ಸೌಲಭ‌್ಯಗಳನ್ನು ನೀಡಬೇಕು’ ಎಂದು ಮನವಿ ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್ ಮನವಿ ಸ್ವೀಕರಿಸಿದರು. ಪ್ರಮುಖರಾದ ಕೆ.ಆರ್.ಮುಕುಂದನ್, ಜಿ.ಪ್ರಕಾಶಮೂರ್ತಿ, ಸಂಜೀವ ಎ.ಶೆಟ್ಟಿ, ಕಾಶೀನಾಥ ಕಾನಡೆ, ಜೆ.ಕೆ.ಆನಂದ, ಎಚ್.ಫಕೀರಪ್ಪ, ಎಂ.ಕೆ.ಪ್ರಧಾನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.