ADVERTISEMENT

ಗೊಂದಲ ಮೂಡಿಸಿದ ಕರ್ನಾಟಕ ವಿವಿ ಸುತ್ತೋಲೆ

ಸೆಮಿಸ್ಟರ್ ಬಡ್ತಿ ನೀಡುವುದಾಗಿ ತಿಳಿಸಿದ್ದರೂ ಪರೀಕ್ಷೆ ಬರೆಯುವವರ ಮಾಹಿತಿ ಸಂಗ್ರಹ

ಸದಾಶಿವ ಎಂ.ಎಸ್‌.
Published 23 ಸೆಪ್ಟೆಂಬರ್ 2020, 20:15 IST
Last Updated 23 ಸೆಪ್ಟೆಂಬರ್ 2020, 20:15 IST
ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ
ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ   

ಕಾರವಾರ: ಬಿ.ಇಡಿ ಒಂದು ಮತ್ತು ಮೂರನೇ ಸೆಮಿಸ್ಟರ್‌ನ ಪ್ರಶಿಕ್ಷಣಾರ್ಥಿಗಳಿಗೆ ಪರೀಕ್ಷೆ ನಡೆಸದೇ ಮುಂದಿನ ಸೆಮಿಸ್ಟರ್‌ಗೆ ಬಡ್ತಿ ನೀಡುವುದಾಗಿ ಕರ್ನಾಟಕ ವಿಶ್ವವಿದ್ಯಾಲಯವು ತಿಳಿಸಿದೆ. ಈ ನಡುವೆ, ಪರೀಕ್ಷೆ ಬರೆಯಲು ಆಸಕ್ತಿಯಿರುವ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸಲೂ ಬಿ.ಇಡಿ ಕಾಲೇಜುಗಳ ಪ್ರಾಂಶುಪಾಲರಿಗೆ ಸೂಚಿಸಿದೆ.

ಈ ಬಗ್ಗೆ ವಿಶ್ವವಿದ್ಯಾಲಯವು ಸೆ. 21ರಂದು ಹೊರಡಿಸಿರುವ ಸುತ್ತೋಲೆಯು ಪ್ರಶಿಕ್ಷಣಾರ್ಥಿಗಳು ಮತ್ತು ಬೋಧಕ ವರ್ಗವನ್ನು ಗೊಂದಲಕ್ಕೀಡು ಮಾಡಿದೆ.

‘ವಿಶ್ವವಿದ್ಯಾಲಯದ ಈ ಸುತ್ತೋಲೆಯ ಮರ್ಮವೇನೆಂದು ಅರ್ಥವಾಗುತ್ತಿಲ್ಲ. ವಿಶ್ವವಿದ್ಯಾಲಯವು ಪರೀಕ್ಷೆ ಹಮ್ಮಿಕೊಳ್ಳುತ್ತದೆ ಎಂದು ಭಾವಿಸಬೇಕೇ ಅಥವಾ ಇಲ್ಲ ಎಂದು ತಿಳಿದುಕೊಳ್ಳಬೇಕೇ ಎಂಬ ಗೊಂದಲ ಮೂಡಿದೆ. ಈ ಬಗ್ಗೆ ಸ್ಪಷ್ಟನೆ ಅಗತ್ಯವಿದೆ’ ಎಂದು ಕಾರವಾರದ ಪ್ರಶಿಕ್ಷಣಾರ್ಥಿಯೊಬ್ಬರು ಮನವಿ ಮಾಡಿದ್ದಾರೆ.

ADVERTISEMENT

ಈ ಹಿಂದೆ ಬಿ.ಇಡಿ.ಯ ಒಂದು ಮತ್ತು ಮೂರನೇ ಸೆಮಿಸ್ಟರ್‌ಗಳಿಗೆ ಸೆ. 11ರಿಂದ 19ರವರೆಗೆ ಪರೀಕ್ಷೆ ನಡೆಸಲು ವಿಶ್ವವಿದ್ಯಾಲಯ ಸಿದ್ಧತೆ ನಡೆಸಿತ್ತು. ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಪರೀಕ್ಷೆ ನಡೆಸದೇ ಮುಂದಿನ ಸೆಮಿಸ್ಟರ್‌ಗೆ ಬಡ್ತಿ ನೀಡಬೇಕು ಎಂದು ಪ್ರಶಿಕ್ಷಣಾರ್ಥಿಗಳು ಮನವಿ ಮಾಡಿದ್ದರು. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲೂ ಅಭಿಯಾನ ಮಾಡಿದ್ದರು. ಈ ಬೇಡಿಕೆಗೆ ಮನ್ನಣೆ ನೀಡಿದ ವಿಶ್ವವಿದ್ಯಾಲಯವು ಪರೀಕ್ಷೆ ಹಮ್ಮಿಕೊಳ್ಳುವ ಬದಲು ಬಡ್ತಿ ನೀಡುವುದಾಗಿ ಪ್ರಕಟಿಸಿತ್ತು.

‘ಸೂಚನೆಯಲ್ಲಿ ಸ್ಪಷ್ಟತೆ ಇರಲಿ’:‘ಕೋವಿಡ್ ಸಂದರ್ಭದಲ್ಲಿ ಪರೀಕ್ಷೆ ಬರೆಯದೇ ಪ್ರಶಿಕ್ಷಣಾರ್ಥಿಗಳಿಗೆ ಬಡ್ತಿ ನೀಡಲು ಮಾನದಂಡಗಳೇನು? ಅದರಿಂದ ಆಗುವ ಅನುಕೂಲ, ಅನನುಕೂಲವೇನು ಎಂಬ ಬಗ್ಗೆ ನಿರ್ಣಯ ಆಗಬೇಕು’ ಎನ್ನುತ್ತಾರೆ ಕಾರವಾರದ ಶಿವಾಜಿ ಬಿ.ಇಡಿ ಕಾಲೇಜಿನ ಪ್ರಾಂಶುಪಾಲ ಡಾ.ಶಿವಾನಂದ ನಾಯಕ.

‘ಪರೀಕ್ಷೆ ಬರೆದ ಮತ್ತು ಬರೆಯದೇ ಮುಂದಿನ ಸೆಮಿಸ್ಟರ್‌ಗೆ ಬಡ್ತಿ ಹೊಂದಿದ ಪ್ರಶಿಕ್ಷಣಾರ್ಥಿಗಳ ನಡುವೆ ಹೋಲಿಕೆ ಹೇಗೆ ಸಾಧ್ಯವಾಗುತ್ತದೆ? ಪರೀಕ್ಷೆ ಬರೆದವರು ಉತ್ತೀರ್ಣರಾಗಬಹುದು. ಆದರೆ, ಆಗ ಪರೀಕ್ಷೆ ಬರೆಯದವರ ಭವಿಷ್ಯವೇನು ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ವಿಶ್ವವಿದ್ಯಾಲಯವು ಕೂಡಲೇ ಈ ಬಗ್ಗೆ ಎಲ್ಲ ಪ್ರಾಂಶುಪಾಲರ ಸಭೆ ಕರೆದು ಗೊಂದಲ ಪರಿಹರಿಸಬೇಕು’ ಎಂದು ಅವರು ಒತ್ತಾಯಿಸುತ್ತಾರೆ.

‘ಪತ್ರ ಬರೆಯಲಾಗಿದೆ’:‘ಪ್ರಶಿಕ್ಷಣಾರ್ಥಿಗಳಿಗೆ ಮುಂದಿನ ಸೆಮಿಸ್ಟರ್‌ಗೆ ಬಡ್ತಿ ನೀಡುವ ವಿಚಾರದಲ್ಲಿ ರಾಷ್ಟ್ರೀಯ ಶಿಕ್ಷಕ ಬೋಧನಾ ಮಂಡಳಿಗೆ (ಎನ್.ಸಿ.ಟಿ.ಇ) ಪತ್ರ ಬರೆಯಲಾಗಿದೆ. ಅದರ ನಿರ್ದೇಶನದಂತೆ ನಡೆದುಕೊಳ್ಳಲಾಗುವುದು’ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಪ್ರೊ.ರವೀಂದ್ರನಾಥ ಎನ್.ಕದಂ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.

‘ಒಂದುವೇಳೆ ಪರೀಕ್ಷೆ ಆಯೋಜಿಸುವಂತೆ ಸೂಚಿಸಿದರೆ ಏಕಾಏಕಿ ಸಿದ್ಧತೆ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಕೇವಲ ಆ ಕಾರಣಕ್ಕಾಗಿ ಪ್ರಶಿಕ್ಷಣಾರ್ಥಿಗಳ ಮಾಹಿತಿ ಕೇಳಲಾಗಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.