ADVERTISEMENT

ಕುಮಟಾ: ಅವಧಿ ಮೀರಿದ ಅಗ್ನಿಶಾಮಕ ವಾಹನ

ಎಂ.ಜಿ.ನಾಯ್ಕ
Published 9 ಜೂನ್ 2024, 5:35 IST
Last Updated 9 ಜೂನ್ 2024, 5:35 IST
   

ಕುಮಟಾ: ಇಲ್ಲಿಯ ಅಗ್ನಿಶಾಮಕ ಠಾಣೆಯಲ್ಲಿ ಬಳಕೆಯಾಗುತ್ತಿದ್ದ ಅಗ್ನಿ ಶಾಮಕ ವಾಹನದ ಬಳಕೆ ಅವಧಿ ಮುಗಿದಿದ್ದರಿಂದ ಅಗ್ನಿ ಅಥವಾ ಜಲ ಅವಘಡಗಳನ್ನು ಎದುರಿಸಲು ಅಗ್ನಿಶಾಮಕ ಠಾಣೆ ಸಿಬ್ಬಂದಿ ಈಗ ಚಿಕ್ಕ ವಾಹನವನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಉಂಟಾಗಿದೆ.

2008ರಲ್ಲಿ ಅಂದಿನ ಶಾಸಕ ದಿವಂಗತ ಮೋಹನ ಶೆಟ್ಟಿ ಅವರು ಇಲ್ಲಿಯ ಶಾಸಕರಾಗಿದ್ದಾಗ ಆರಂಭವಾದ ಅಗ್ನಿಶಾಮಕ ಠಾಣೆಗೆ ಮೊದಲು ನೀಡಿದ ಅಗ್ನಿ ಶಾಮಕ ದೊಡ್ಡ ವಾಹನವನ್ನು ಹದಿನೈದು ವರ್ಷಗಳವರೆಗೆ ಬಳಕೆ ಮಾಡಲಾಗಿದೆ.

ಕೇಂದ್ರ ಮೋಟಾರು ವಾಹನ ನೂತನ ಕಾಯಿದೆ ಅನ್ವಯ ಹದಿನೈದು ವರ್ಷ ಕಳೆದ ಯಾವುದೇ ವಾಹನಗಳನ್ನು ಬಳಕೆ ಮಾಡಬಾರದು ಎನ್ನುವ ಆದೇಶ ಇರುವುದರಿಂದ ಇಲ್ಲಿರುವ ದೊಡ್ಡ ವಾಹನ ಸುಸ್ಥಿತಿಯಲ್ಲಿದ್ದರೂ ಅದು ಠಾಣೆಯ ಶೆಡ್‌ನಲ್ಲಿಯೇ ನಿಲ್ಲುವಂತಾಗಿದೆ.

ADVERTISEMENT

‘ದೊಡ್ಡ ವಾಹನದ ಬಳಕೆ ಇಲ್ಲದಿದ್ದರೂ ತುರ್ತು ಅಗ್ನಿ ಅವಘಡಗಳನ್ನು ಠಾಣೆಯಲ್ಲಿರುವ ಇನ್ನೊಂದು ಸಣ್ಣ ವಾಹನ ಬಳಸಿ ನಿಭಾಯಿಸಲಾಗುತ್ತಿದೆ. ಬೇಸಿಗೆಯಲ್ಲಿ ಕಾಡಿನಲ್ಲಿ ಬೆಂಕಿ ಉಂಟಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆಗ ಬೆಂಕಿ ನಂದಿಸಲು ದೊಡ್ಡ ವಾಹನ ಅಗತ್ಯವಿರುತ್ತದೆ. ಮನೆ, ಅಂಗಡಿ ಬೆಂಕಿಗಾಹುತಿಯಾಗುವ ಪ್ರಕರಣಗಳನ್ನು ಸಣ್ಣ ವಾಹನ ಬಳಸಿ ನಿಭಾಯಿಸಬಹುದು. ಆದರೆ, ಈಗ ಮಳೆಗಾಲ ಆರಂಭವಾಗುತ್ತಿರುವುದರಿಂದ ಕಾಡಿನ ಬೆಂಕಿ ಸಾಧ್ಯತೆಗಳು ಕಡಿಮೆ. ನೆರೆಯ ಅಂಕೋಲಾ ತಾಲ್ಲೂಕಿನಲ್ಲಿ ದೊಡ್ಡ ವಾಹನ ಇರುವುದರಿಂದ ತುರ್ತು ಸಂದರ್ಭದಲ್ಲಿ ಅಲ್ಲಿಂದಲೂ ನೆರವು ಪಡೆಯಬಹುದು’ ಎನ್ನುತ್ತಾರೆ ಜಿಲ್ಲಾ ಅಗ್ನಿಶಾಮಕ ದಳ ಅಧಿಕಾರಿ ಸುನೀಲ ಕುಮಾರ್.

ದೇಣಿಗೆ ನೀಡುವ ಯೋಚನೆ

‘ಕುಮಟಾ ರೋಟರಿ ಕ್ಲಬ್ ವತಿಯಿಂದ ತಾಲ್ಲೂಕು ಆಸ್ಪತ್ರೆಗೆ ಸುಮಾರು ₹1.40 ಕೋಟಿ ಮೊತ್ತದ ಅಗತ್ಯ ಸೌಲಭ್ಯ ನೀಡಲಾಗಿದೆ. ಹಾಗೇ ಕುಮಟಾ ಅಗ್ನಿಶಾಮಕ ಠಾಣೆಗೆ ಒಂದು ಸುಸಜ್ಜಿತ ಅಗ್ನಿ ನಂದಕ ವಾಹನ ನೀಡುವ ಬಗ್ಗೆ ರೋಟರಿ ಪದಾಧಿಕಾರಿಗಳು ಚಿಂತನೆ ನಡೆಸುತ್ತಿದ್ದೇವೆ. ಸೂಕ್ತ ದಾನಿಗಳ ಸಹಕಾರ ಸಿಕ್ಕರೆ ಆ ಕಾರ್ಯ ನೆರವೇರಬಹುದು’ ಎನ್ನುತ್ತಾರೆ ರೋಟರಿ ಕ್ಲಬ್ ಕುಮಟಾ ಘಟಕದ ಪದಾಧಿಕಾರಿ ಅತುಲ್ ಕಾಮತ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.