ಕುಮಟಾ: ಮಾಣಿಕಟ್ಟಾ ಅಘನಾಶಿನಿ ಹಿನ್ನೀರು ಗಜನಿಯಲ್ಲಿ ನೈಸರ್ಗಿಕ ಮೀನುಗಳ ಸುಗ್ಗಿ ಆರಂಭವಾಗಿದೆ. ಆದರೆ, ಅತ್ಯಂತ ರುಚಿಕಟ್ಟಾದ ಕಾಗಳಸಿ ಮತ್ತು ಕೆಂಸ ಮೀನುಗಳು ಮಾತ್ರ ಈ ವರ್ಷ ಬಲೆಗೆ ಬಿದ್ದಿಲ್ಲ. ಇದು ಮೀನುಗಾರರಲ್ಲಿ ಆತಂಕ ಮೂಡಿಸಿದೆ.
ಮಣಿಕಟ್ಟಾ ಗಜನಿಯಲ್ಲಿ ಮೇ ತಿಂಗಳಲ್ಲಿ ಹೆಚ್ಚಿನ ಪ್ರಮಾಣದ ಮೀನು ಕೊಯ್ಲು ಆರಂಭವಾಗುತ್ತದೆ. ಮೊದಲು ಬಿಳಿ ಸಿಗಡಿ (ವೈಟ್), ಕಾಯಿ ಶೆಟ್ಲಿ (ಟೈಗರ್) ತೇಮಲಿ, ಕೋಳೆ ಶೆಟ್ಲಿ, ಏಡಿ, ನುಕ್ಕೇಡಿ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತವೆ. ನೀರಿನಲ್ಲಿ ಉಪ್ಪಿನ ಪ್ರಮಾಣ ಹಾಗೂ ಉಷ್ಣತೆ ಹೆಚ್ಚಾದಂತೆ ಗಜನಿ ಗೇಟು ತೆರೆದಾಗ ಆಹಾರ ಹುಡುಕಿ ಒಳಗೆ ಬಂದ ಉಳಿದ ಜಾತಿಯ ಮೀನುಗಳು ನೀರು ಹೊರಗೆ ಹೋಗುವಾಗ ಬಲೆಗೆ ಬೀಳುತ್ತವೆ. ಈ ಸಲ ಮಾಣಿಕಟ್ಟಾ ಕಗ್ಗ ಬೆಳೆಗಾರರ ಸಂಘದ ಸದಸ್ಯರೇ ಮೀನು ಕೊಯ್ಲು ಗುತ್ತಿಗೆ ಪಡೆದಿದ್ದಾರೆ.
‘ಈ ಸಲ ಗಜನಿ ನೀರು ಬಿಟ್ಟಾಗ ಬಲೆಗೆ ಮಡ್ಲೆ, ಕುರಡೆ, ಹಾಲುಗುರಕ, ಹೂವಿನಸೆಳಕಾ, ಒಣಕಾಂಡಿ, ಬೈಗೆ, ಬಾಣ ಮೀನು ಹೇರಳ ಪ್ರಮಾಣದಲ್ಲಿ ಸಿಕ್ಕಿವೆ. ಹಾಲುಕೊಕ್ಕರ ಅಲ್ಪ ಪ್ರಮಾಣದಲ್ಲಿ ಸಿಕ್ಕಿದೆ. ಕಾಗಳಸಿ, ಕೆಂಸ ಮೀನು ಒಂದೂ ಬಲೆಗೆ ಬೀಳದೇ, ಹೇಳ ಹೆಸರಿಲ್ಲದಂತಾಗಿವೆ’ ಎಂದು ಮೀನು ಕೊಯ್ಲು ಗುತ್ತಿಗೆ ಪಡೆದ ಮಾಣಿಕಟ್ಟಾ ಕಗ್ಗ ಬೆಳೆಗಾರರ ಸಂಘದ ಸದಸ್ಯ ಮಂಜು ಪಟಗಾರ ತಿಳಿಸಿದರು.
‘ನದಿಯಲ್ಲಿ ಕುರಡೆ ಮೀನು ಪಂಜರ ಕೃಷಿ ಮಾಡುವವರು ಸಣ್ಣ ಸಣ್ಣ ಜೀವಂತ ಮೀನುಗಳನ್ನು ಬಲೆ ಹಾಕಿ ಹಿಡಿದು ಕುರಡೆ ಮೀನಿಗೆ ಆಹಾರವಾಗಿ ಹಾಕುತ್ತಾರೆ. ಹೀಗೆ ಬಲೆ ಹಾಕುವಾಗ ಗುಂಪಿನಲ್ಲಿರುವ ಕಾಗಳಸಿ ಹಾಗೂ ಬೈಗೆ, ಮಂಡ್ಲಿ, ಮುಳ್ಳೆಟ್ಟೆ ಮುಂತಾದ ಎಲ್ಲ ಜಾತಿಯ ಸಣ್ಣ ಮೀನುಗಳನ್ನು ಹಿಡಿಯಲಾಗುತ್ತವೆ. ಇದರಿಂದ ಕಾಗಳಸಿ ಸಂತತಿ ನಾಶವಾಗುತ್ತಿದೆ’ ಎಂದು ರಾಜ್ಯ ಜೀವ ವೈವಿಧ್ಯ ಮಂಡಳಿ ಸದಸ್ಯ ಪ್ರಕಾಶ ಮೇಸ್ತ ತಿಳಿಸಿದರು.
‘ಪ್ರವಾಹ ತಡೆಗೋಡೆಯಿಂದಾಗಿ ಗಿಡಗಳ ನಾಶ’
‘ನದಿಯಂಚಿನ ನೀರಿನಲ್ಲಿ ಅಕಾಂಥಸ್ ಇಲಿಸಿಫೋಲಿಯಾ ಎನ್ನುವ ಎಲೆಯೆಲ್ಲ ಮುಳ್ಳಿರುವ ಗಿಡಗಳು ಹೇರಳ ಪ್ರಮಾಣದಲ್ಲಿರುತ್ತವೆ. ಅವುಗಳನ್ನು ಅಶ್ರಯಿಸಿ ಕಾಗಳಸಿ ಮೀನುಗಳು ರಕ್ಷಣೆ ಪಡೆಯುತ್ತವೆ. ಎಲ್ಲೆಡೆ ನದಿಗೆ ಪ್ರವಾಹ ತಡೆಗೋಡೆ ನಿರ್ಮಾಣವಾಗಿರುವುದರಿಂದ ಈ ಗಿಡ ನಾಶವಾಗಿ ಕಾಗಳಸಿ ಮೀನಿಗೆ ಆಶ್ರಯವಿಲ್ಲದೇ ಅವುಗಳು ಉಳಿದ ಮೀನುಗಳಿಗೆ ಆಹಾರವಾಗುತ್ತಿವೆ. ಆಕ್ರಮಣಕಾರಿ ಸ್ವಭಾವದ ಕುರಡೆ ಮೀನು ಕಾಗಳಸಿ ಕೆಂಸದಂಥ ಸೌಮ್ಯ ಮೀನುಗಳನ್ನು ಬೇಟೆಯಾಡಿ ತಿಂದು ಬೆಳೆಯುತ್ತವೆ. ಕಾಗಳಸಿ ಕೆಂಸ ಮರೆಯಾಗಿ ಕುರಡೆ ಸಂತತಿ ಹೆಚ್ಚಾಗಲು ಇದೂ ಒಂದು ಕಾರಣ’ ಎಂದು ಸಾಗರ ಜೀವ ವಿಜ್ಞಾನಿ ವಿ.ಎನ್. ನಾಯಕ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.