ಕುಮಟಾ: ‘ಇಲ್ಲಿಯ ಹಳಕಾರ ವಿಲೇಜ್ ಫಾರೆಸ್ಟ್ ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಹಾಗೂ ಹಿರಿಯ ಪರಿಸರ ಕಾರ್ಯಕರ್ತರ ನೇತೃತ್ವದಲ್ಲಿ ಡಿ. 21, 22 ಹಾಗೂ 23 ರಂದು ಪರಿಸರ ಕುರಿತು ಒಂದು ದಿನದ ವಿಚಾರ ಸಂಕಿರ್ಣ ನಡೆಯಲಿದೆ’ ಎಂದು ವಿಲೇಜ್ ಫಾರೆಸ್ಟ್ ಅಧ್ಯಕ್ಷ ನಾಗರಾಜ ಭಟ್ಟ ತಿಳಿಸಿದರು.
ಭಾನುವಾರ ನಡೆದ ವಿಲೇಜ್ ಫಾರೆಸ್ಟ್ ಆಡಳಿತ ಸಮಿತಿ ಹಾಗೂ ಶತಮಾನೋತ್ಸವ ಸಮಿತಿ ಸದಸ್ಯರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಕಾರ್ಯಕ್ರಮದ ಎರಡನೇ ದಿನ ಬೆಳಿಗ್ಗೆ 10 ಗಂಟೆಗೆ ಭಾರತೀಯ ವಿಜ್ಞಾನ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ. ಟಿ.ವಿ. ರಾಮಚಂದ್ರನ್, ಕುಮಟಾ ಶಾಖೆಯ ವಿಜ್ಞಾನಿ ಡಾ. ಎಂ.ಡಿ. ಸುಭಾಶ್ಚಂದ್ರನ್, ಪರಿಸರ ತಜ್ಞ ಅಖಿಲೇಶ ಚಿಪ್ಪಳ್ಳಿ ಮುಂತಾದವರು ಪಾಲ್ಗೊಳ್ಳುವರು’ ಎಂದರು.
‘ಹಳಕಾರ ವಿಲೇಜ್ ಫಾರೆಸ್ಟ್ ಆಡಳಿತ ಸಮಿತಿ ಸದಸ್ಯರು ಕಾಡಿನ ಸಮಸ್ಯೆ, ಮುಂದಿನ ಅಭಿವೃದ್ಧಿ ಯೋಜನೆಗಳ ಬಗ್ಗೆ ತಮ್ಮ ಅನುಭವ ಹಂಚಿಕೊಳ್ಳುವರು. ಪರಿಸರ ವಿಜ್ಞಾನಿ ಡಾ. ಮಾಧವ ಗಾಡ್ಗಿಳ್ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಪಾಲ್ಗೊಳ್ಳುವರು’ ಎಂದು ತಿಳಿಸಿದರು.
‘ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಸೇರಿದಂತೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ವಿಜ್ಞಾನಿಗಳು, ಪ್ರಾಧ್ಯಾಪಕರು ಪಾಲ್ಗೊಳ್ಳಲಿದ್ದಾರೆ. ಶತಮಾನೋತ್ಸವ ಸಮಿತಿ ಅಧ್ಯಕ್ಷ ಗಜಾನನ ಗುನಗಾ, ‘ಮೂರು ದಿವಸ ಯಕ್ಷಗಾನ, ನಾಟಕ, ಸಂಗ್ಯಾ-ಬಾಳ್ಯ ಪ್ರಸಂಗ, ಸತ್ಯನಾರಾಯಣ ವ್ರತ, ಆರೋಗ್ಯ ಶಿಬಿರ, ಸ್ಥಳೀಯರಿಗಾಗಿ ಆಟೋಟ ಸ್ಪರ್ಧೆ, ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ವಿಲೇಜ್ ಫಾರೆಸ್ಟ್ ಉಳಿವಿಗೆ ಶ್ರಮಿಸಿದ ಹಿರಿಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ’ ಎಂದರು.
ವಿಲೇಜ್ ಫಾರೆಸ್ಟ್ ಕಾರ್ಯದರ್ಶಿ ಶಾಂತಾರಾಮ ನಾಯ್ಕ , ಕಾರ್ಯಕ್ರಮದ ಅಂಗವಾಗಿ ಹೊರ ತರುವ ಸ್ಮರಣ ಸಂಚಿಕೆಗೆ ಸೂಕ್ತ ಹೆಸರು ಸೂಚಿಸುವಂತೆ ಸಭೆಯಲ್ಲಿ ಪ್ರಸ್ತಾಪಿಸಿದರು.
ವಿಲೇಜ್ ಫಾರೆಸ್ಟ್ ಉಪಾಧ್ಯಕ್ಷ ನಾಗಪ್ಪ ಹರಿಕತಂತ್ರ, ಗ್ರಾಮ ಪಂಚಾಯ್ತಿ ಸದಸ್ಯ ಅನಿಲ ಮಡಿವಾಳ, ಪ್ರಕಾಶ ಪಟಗಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.