ಕುಮಟಾ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಪ್ರತಿ ಬುಧವಾರ ನಡೆಯುವ ಸಂತೆ ಮಾರುಕಟ್ಟೆಯಲ್ಲಿ ಹೆಚ್ಚಿನ ವ್ಯಾಪಾರಿಗಳು ರಸ್ತೆ ಬದಿ ಕುಳಿತು ವ್ಯಾಪಾರ ಮಾಡುವುದರಿಂದ ವಾಹನ ಸಂಚಾರ ಸಂದರ್ಭದಲ್ಲಿ ಅಪಘಾತ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ ಎನ್ನುವುದು ಸಾರ್ವಜನಿಕರ ಆಕ್ಷೇಪವಾಗಿದೆ.
ಸುಮಾರು 15 ವರ್ಷಗಳಿಂದ ಪ್ರತಿ ಬುಧವಾರ ನಡೆಯುವ ಸಂತೆ ಮಾರುಕಟ್ಟೆಗೆ ಶಿರಸಿ, ಮುಂಡಗೋಡ, ಹಾನಗಲ್, ಗೋಕರ್ಣದಿಂದ ತರಕಾರಿ, ಹಣ್ಣು, ಬೇಳೆ ಕಾಳು, ದಿನಸಿ, ಪ್ಲಾಸ್ಟಿಕ್ ವಸ್ತು ಹಾಗೂ ಒಣ ಮೀನು ಮಾರಾಟ ಮಾಡುವ ವ್ಯಾಪಾರಗಳು ಬರುತ್ತಾರೆ. ಸಂತೆ ನಡೆಯುವ ದಿನವೇ ಸಮಿತಿ ಪ್ರಾಂಗಣದಲ್ಲಿ ಅಡಿಕೆ ವ್ಯಾಪಾರ ಕೂಡ ಇರುವುದರಿಂದ ಜನ ಹಾಗೂ ವಾಹನ ದಟ್ಟಣೆ ಉಂಟಾಗುತ್ತದೆ.
‘ಸಂತೆಯ ವೇಳೆ ಎ.ಪಿ.ಎಂ.ಸಿ ಪ್ರಾಂಗಣದ ಪ್ರವೇಶ ದ್ವಾರದ ಬಳಿ ವಾಹನ ಸಂಚಾರಕ್ಕೆ ನಿಷೇಧ ಹೇರುವುದರಿಂದ ಪಟ್ಟಣದ ಒಳಗೆ ವಾಹನ ದಟ್ಟಣೆ ಹೆಚ್ಚುತ್ತಿದೆ. ಅಪಘಾತ ಸಂಭವಿಸುವ ಆತಂಕ ಅಧಿಕವಾಗಿದೆ. ರಸ್ತೆಯನ್ನು ಸಂಚಾರಕ್ಕಾಗಿ ಮುಕ್ತಗೊಳಿಸಬೇಕು’ ಎಂಬುದು ಜನರ ಆಗ್ರಹವಾಗಿದೆ.
‘ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪ್ರತಿ ವಾರ ನಿರೀಕ್ಷೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಿಗಳು ಬರುತ್ತಾರೆ. ಶೆಡ್‌ನಲ್ಲಿ ಸುಮಾರು 50 ವ್ಯಾಪಾರಿಗಳು ಕುಳಿತುಕೊಂಡರೆ ಉಳಿದವರು ರಸ್ತೆ ಬದಿ ಕುಳಿತು ವ್ಯಾಪಾರ ನಡೆಸುತ್ತಾರೆ. ಗ್ರಾಹಕರು ತಮ್ಮ ವಾಹನಗಳನ್ನು ಸಮಿತಿ ಪ್ರಾಂಗಣದೊಳಗೇ ತರುವುದರಿಂದ ಇನ್ನಷ್ಟು ದಟ್ಟಣೆ ಉಂಟಾಗುತ್ತಿದೆ. ಈ ಬಗ್ಗೆ ಪೊಲೀಸರಿಗೆ ಹಲವು ಬಾರಿ ತಿಳಿಸಿದರೂ ಅವರು ಕ್ರಮ ಕೈಕೊಂಡಿಲ್ಲ’ ಎಂದು ಎ.ಪಿ.ಎಂ.ಸಿ ಕಾರ್ಯದರ್ಶಿ ರಾಜೇಶ ಮೈದರಗಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.