ಕಾರವಾರ: ‘ರಾಜ್ಯದಲ್ಲಿ ಸಾವಿರಾರು ಯುವಕನ್ನು ಬಲಿ ಪಡೆಯುತ್ತಿರುವ ಆನ್‍ಲೈನ್ ಬೆಟ್ಟಿಂಗ್ ದಂಧೆಯನ್ನು ನಿಷೇಧಿಸಬೇಕು. ಇಲ್ಲವಾದರೆ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಾಗುವುದು’ ಎಂದು ರೈತ ಸಂಘಟನೆಗಳ ಒಕ್ಕೂಟ ಹಾಗೂ ಕಬ್ಬು ಬೆಳೆಗಾರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕುರುಬೂರ ಶಾಂತಕುಮಾರ ಎಚ್ಚರಿಸಿದರು.
‘ಆನ್‍ಲೈನ್ ಬೆಟ್ಟಿಂಗ್‍ನ ದುಷ್ಪರಿಣಾಮ ಅರಿತ ತೆಲಂಗಾಣ, ತಮಿಳುನಾಡು ಸರ್ಕಾರಗಳು ಈಗಾಗಲೆ ಬೆಟ್ಟಿಂಗ್ ನಿಷೇಧಿಸಿವೆ. ಕರ್ನಾಟಕದಲ್ಲಿಯೂ ನಿಷೇಧ ಆದೇಶ ಜಾರಿಗೆ ತರಲು ಮುಂಬರುವ ಡಿಸೆಂಬರ್ ಅಧಿವೇಶನದಲ್ಲಿ ಚರ್ಚಿಸಿ, ನಿರ್ಣಯಿಸಬೇಕು’ ಎಂದು ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
‘ಉತ್ತರ ಕನ್ನಡದಲ್ಲಿ ಗೋವಿನ ಜೋಳ ಸೇರಿದಂತೆ ಹಲವು ಬೆಳೆಗಳು ನಷ್ಟಕ್ಕೀಡಾಗಿವೆ. ಹಾನಿ ಸಮೀಕ್ಷೆ ನಡೆದಿಲ್ಲ ಎಂದು ರೈತರು ದೂರುತ್ತಿದ್ದಾರೆ. ಸರ್ಕಾರ ತಕ್ಷಣ ಸಮೀಕ್ಷೆ ನಡೆಸಬೇಕು’ ಎಂದರು.
‘ಹಳಿಯಾಳ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ರೈತರಿಗೆ ಪಾವತಿಸಬೇಕಿರುವ ಕಟಾವು ಸಾಗಾಣರ ಕೂಲಿ ಬಾಕಿ ಟನ್‍ಗೆ ₹119, ಕಬ್ಬಿನ ಉಪ ಉತ್ಪನ್ನಗಳ ಲಾಭ ₹256 ಬಾಕಿ ಕೊಟ್ಟು ಕಾರ್ಖಾನೆ ಆರಂಭಿಸಬೇಕು. ಸಕ್ಕರೆ ನಿಯಂತ್ರಣ ಕಾಯ್ದೆ ಪ್ರಕಾರ ಉತ್ತರ ಕನ್ನಡ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು. ಕಬ್ಬಿನ ಎಫ್‌ಆರ್‌ಪಿ ದರವನ್ನು ಕೇಂದ್ರ ಸರ್ಕಾರ ರೈತರ ಹೊಲದಲ್ಲಿನ ದರ ಎಂದು ನಿಗದಿ ಮಾಡಲು ಕಾನೂನು ತಿದ್ದುಪಡಿ ಮಾಡುವಂತೆ ಇಲ್ಲಿನ ಸಂಸದರು ಸಂಸತ್‍ನಲ್ಲಿ ಒತ್ತಾಯಿಸಬೇಕು’ ಎಂದು ಆಗ್ರಹಿಸಿದರು.
‘ಈಚಿನ ದಿನಗಳಲ್ಲಿ ಅರಣ್ಯ ಪರಿಸರ ಹಾಳಾಗುತ್ತಿದೆ. ಪರಿಸರ ನಾಶದಿಂದ ಹವಾಮಾನ ಏರುಪೇರು ಆಗುತ್ತಿದೆ. ಸರ್ಕಾರ ಅರಣ್ಯ ಒತ್ತುವರಿ ಮಾಡಿ ನಿರ್ಮಿಸಿರುವ ರೆಸಾರ್ಟ್, ಹೋಮ್ ಸ್ಟೇಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದೂ ಹೇಳಿದರು.
ಮಹೇಶ ಬೆಳಗಾಂವಕರ, ಪರಶುರಾಮ ಎತ್ತಿನಗುಡ್ಡ, ಅತ್ತಳ್ಳಿ ದೇವರಾಜ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.