ಕಾರವಾರ: ಗೃಹಬಳಕೆ ಎಲ್‌ಪಿಜಿ ಕಾರ್ಡ್‍ದಾರರು ಡಿ. 31ರೊಳಗೆ ಇ–ಕೆವೈಸಿ ಪ್ರಕ್ರಿಯೆ ಮಾಡಿಸುವುದು ಕಡ್ಡಾಯ ಎಂಬ ವದಂತಿ ನಂಬಿದ ಜನರು ನಗರದ ವಿವಿಧ ಗ್ಯಾಸ್ ಏಜೆನ್ಸಿ ಕಚೇರಿಗಳ ಎದುರು ಸರತಿ ಸಾಲಿನಲ್ಲಿ ನಿಲ್ಲತೊಡಗಿದ್ದಾರೆ. ಜನದಟ್ಟಣೆ, ವಾಹನ ದಟ್ಟಣೆ ನಿಯಂತ್ರಣವೂ ಸವಾಲಾಗಿ ಪರಿಣಮಿಸಿದೆ.
ಇಲ್ಲಿನ ಜನತಾ ಬಜಾರ್, ಹಬ್ಬುವಾಡಾ ರಸ್ತೆಯಲ್ಲಿರುವ ಭಾರತಗ್ಯಾಸ್, ಎಚ್.ಪಿ, ಇಂಡೇನ್ ಗ್ಯಾಸ್ ಏಜೆನ್ಸಿ ಕಚೇರಿಗಳ ಎದುರು ನೂರಾರು ಜನರು ಆಧಾರ್ ಕಾರ್ಡ್ ಹಿಡಿದು ಸರತಿಯಲ್ಲಿ ನಿಂತಿದ್ದರು. ಸರತಿ ಸಾಲು ಕೈಗಾ–ಇಳಕಲ್ ರಾಜ್ಯ ಹೆದ್ದಾರಿಯನ್ನೂ ಆವರಿಸಿತ್ತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಯಿತು.
‘ಇ–ಕೆವೈಸಿ ಪ್ರಕ್ರಿಯೆಗೆ ನಾಲ್ಕು ದಿನಗಳ ಗಡುವು ಬಾಕಿ ಇದೆ. ಅಷ್ಟರೊಳಗೆ ಪ್ರಕ್ರಿಯೆ ಪೂರ್ಣಗೊಳಿಸಬೇಕು’ ಎನ್ನುತ್ತ ಧಾವಂತದಲ್ಲಿಯೇ ಜನರು ನುಗ್ಗುತ್ತಿದ್ದ ದೃಶ್ಯಗಳು ಕಾಣಿಸುತ್ತಿದ್ದವು. ಜನರ ಧಾವಂತಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವದಂತಿ ಎಂಬುದು ಗ್ಯಾಸ್ ಏಜೆನ್ಸಿ ಕಚೇರಿಗಳ ಪ್ರತಿನಿಧಿಗಳು ಪ್ರತಿಕ್ರಿಯಿಸಿದರು.
‘ಇ–ಕೆವೈಸಿ ಮಾಡಿಸಿದರೆ ಪ್ರತಿ ಸಿಲಿಂಡರ್ ₹ 903ರ ಬದಲಾಗಿ ₹ 500 ಬೆಲೆಗೆ ಸಿಗುತ್ತದೆ. ಪ್ರತಿ ಖಾತೆಗೆ ₹ 400 ಸಬ್ಸಿಡಿ ಮೊತ್ತ ಜಮಾ ಆಗುತ್ತದೆ. ಡಿ. 31ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಸಬ್ಸಿಡಿ ರದ್ದುಗೊಳ್ಳುವುದಲ್ಲದೇ ಹೆಚ್ಚುವರಿ ದಂಡ ಪಾವತಿಸಬೇಕಾಗುತ್ತದೆ ಎಂದು ಸುಳ್ಳು ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಇದನ್ನು ನಂಬಿ ಜನರು ಇ–ಕೆವೈಸಿ ಮಾಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ’ ಎಂದು ಗ್ಯಾಸ್ ಏಜೆನ್ಸಿಯೊಂದರ ಪ್ರತಿನಿಧಿ ಪ್ರತಿಕ್ರಿಯಿಸಿದರು.
‘ಗೃಹಬಳಕೆ ಎಲ್.ಪಿ.ಜಿ ಕಾರ್ಡ್‍ದಾರರಿಂದ ಇ–ಕೆವೈಸಿ ಮಾಡಿಸಲು ಸೂಚನೆ ಬಂದಿದ್ದು ನಿಜ. ಆದರೆ ಸಬ್ಸಿಡಿ ಉದ್ದೇಶಕ್ಕೆ ಎಂಬ ಮಾಹಿತಿ ಇಲ್ಲ. ಇದಕ್ಕಾಗಿ ನಿರ್ದಿಷ್ಟ ಅವಧಿಯನ್ನೂ ನಿಗದಿಪಡಿಸಿಲ್ಲ. ಜನರು ತರಾತುರಿಯಲ್ಲಿ ಇ–ಕೆವೈಸಿ ಮಾಡಿಸಬೇಕೆಂಬುದೂ ಇಲ್ಲ’ ಎಂದು ವೆಂಕಟೇಶ್ವರ ಗ್ಯಾಸ್ ಏಜೆನ್ಸಿಯ ಮಾಲೀಕ ವಿಜಯಕುಮಾರ ನಾಯ್ಕ ತಿಳಿಸಿದರು.
‘ವೃದ್ಧು, ಅನಾರೋಗ್ಯ ಪೀಡಿತರಿದ್ದರೆ ಅಂತಹವರ ಮನೆಗೆ ತೆರಳಿ ಇ–ಕೆವೈಸಿ ಮಾಡಿಸಲಾಗುತ್ತಿದೆ. ಬೇಗನೆ ಇ–ಕೆವೈಸಿ ಮಾಡಿಸಬೇಕು ಎಂಬ ಕಾರಣಕ್ಕೆ ನಸುಕಿನ ಜಾವದಿಂದಲೇ ಜನರು ಕಚೇರಿಯ ಎದುರು ಸರತಿಯಲ್ಲಿ ನಿಲ್ಲುತ್ತಿದ್ದಾರೆ’ ಎಂದೂ ಹೇಳಿದರು.
‘ಗೃಹಬಳಕೆ ಎಲ್‌ಪಿಜಿ ಬಳಕೆದಾರರು ಇ–ಕೆವೈಸಿ ಮಾಡಿಸಲು ಡಿ. 31ರ ಗಡುವು ನಿಗದಿಪಡಿಸಿಲ್ಲ ಎಂದು ಜಿಲ್ಲೆಯ ನೋಡಲ್ ಸೇಲ್ಸ್ ಆಫಿಸರ್ ಅಭಿನವಕುಮಾರ ಸ್ಪಷ್ಟಪಡಿಸಿದ್ದಾರೆ. ಜನರು ಅನಗತ್ಯ ಸಂದೇಶ ನಂಬಿ ಗ್ಯಾಸ್ ಏಜೆನ್ಸಿಗಳ ಕಚೇರಿ ಎದುರು ಸರತಿಯಲ್ಲಿ ನಿಂತು ಇ–ಕೆವೈಸಿ ಮಾಡಿಸುವ ಅಗತ್ಯವಿಲ್ಲ. ತೊಂದರೆಗಳಿದ್ದ ಪ್ರದೇಶ ಹೊರತುಪಡಿಸಿ ಉಳಿದ ಕಡೆ ಮನೆ ಮನೆಗೆ ಸಿಲಿಂಡರ್ ನೀಡುವ ವೇಳೆಯಲ್ಲಿಯೂ ಇ–ಕೆವೈಸಿ ಮಾಡಿಸುವ ಕುರಿತು ಸೂಚನೆ ನೀಡಲಾಗಿದೆ’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಮಂಜುನಾಥ ರೇವಣಕರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.