ಕಾರವಾರ:ಸಮಾಜದ ವಿವಿಧ ರಂಗಗಳಲ್ಲಿಅಸಂಘಟಿತರಾಗಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರ ಶ್ರೇಯಸ್ಸಿಗೆ ಕಾರ್ಮಿಕ ಇಲಾಖೆಯಿಂದ ವಿವಿಧ ಯೋಜನೆಗಳನ್ನು ಜಾರಿ ಮಾಡಲಾಗಿದೆ. 2013ರ ನವೆಂಬರ್‌ನಿಂದ 2019ರ ಏಪ್ರಿಲ್‌ವರೆಗೆ ಜಿಲ್ಲೆಯಲ್ಲಿ28,024 ಫಲಾನುಭವಿಗಳು ₹ 20.99 ಕೋಟಿಗೂ ಅಧಿಕ ಧನ ಸಹಾಯ ಪಡೆದಿದ್ದಾರೆ.
ಕಾರ್ಮಿಕ ಇಲಾಖೆಯ ಜಿಲ್ಲಾ ಕಚೇರಿಯಡಿ ಈವರೆಗೆ 69 ಸಾವಿರ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ. ಅವರು ಕೆಲಸ ಮಾಡುವ ಸ್ಥಳಗಳಿಗೆ ಹೋಗಿ ಹಾಗೂ ಕಾರ್ಮಿಕರೇ ಖುದ್ದು ಇಲಾಖಾ ಕಚೇರಿಗೆ ಬಂದು ಅರ್ಜಿ ನೀಡಿ ನೋಂದಾಯಿಸಿದ್ದಾರೆ.
‘ನೋಂದಣಿ ಮಾಡಿಕೊಂಡ ಕಾರ್ಮಿಕರ ಮದುವೆ ₹ 50 ಸಾವಿರ, ಹಿರಿಯ ಕಾರ್ಮಿಕರ ಇಬ್ಬರು ಮಕ್ಕಳ ಮದುವೆಗೂ ತಲಾ ₹ 50 ಸಾವಿರ ಧನ ಸಹಾಯ ನೀಡಲಾಗುತ್ತಿದೆ. ಮಹಿಳಾ ಕಾರ್ಮಿಕರಿಗೆ ಹೆರಿಗೆ ಧನಸಹಾಯ, ಸಣ್ಣ ಮತ್ತುಗಂಭೀರವೈದ್ಯಕೀಯ ವೆಚ್ಚಗಳಿಗೂ ಇಲಾಖೆಯಿಂದ ಹಣಕಾಸು ನೆರವು ಇದೆ. ಇದನ್ನು ಮಂಜೂರು ಮಾಡುವ ಅಧಿಕಾರ ನಮಗಿದೆ. ಆದರೆ, ಮೃತ ಕಾರ್ಮಿಕರಿಗೆ ಪರಿಹಾರವನ್ನು ಹುಬ್ಬಳ್ಳಿಯಲ್ಲಿರುವ ಇಲಾಖೆಯ ಸಹಾಯಕ ಆಯುಕ್ತರು ಮಂಜೂರು ಮಾಡುತ್ತಾರೆ’ ಎಂದು ಇಲಾಖೆಯ ಜಿಲ್ಲಾ ಪ್ರಭಾರಿ ಅಧಿಕಾರಿ ಮಲ್ಲಿಕಾರ್ಜುನ ಎಸ್.ಜೋಗೂರಮಾಹಿತಿ ನೀಡಿದರು.
‘ಕಾರ್ಮಿಕರಿಗೆ ಇಳಿವಯಸ್ಸಿನಲ್ಲಿ ಪಿಂಚಣಿ, ಸರ್ಕಾರದ ಯೋಜನೆಯಡಿ ನಿವೇಶನ ಖರೀದಿಸಿದವರಿಗೆ ಮನೆ ಕಟ್ಟಲು ಸಾಲ ಸೌಲಭ್ಯ, ಅವರಿಗೆ ಅಗತ್ಯ ಸಲಕರಣೆಗಳ ಖರೀದಿಗೆ ಬಡ್ಡಿ ರಹಿತವಾಗಿ ₹ 5 ಸಾವಿರ ಸಾಲವನ್ನೂ ನೀಡಲಾಗುತ್ತದೆ. ಉಳಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ₹ 5 ಲಕ್ಷದವರೆಗೆ ನೆರವು ಕೊಡಲಾಗುತ್ತದೆ. ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಪಡೆಯಬಹುದು’ ಎಂದರು.
‘ಕಾರ್ಮಿಕರು ತಮ್ಮ ಮನೆಯಿಂದ ಕೆಲಸದ ಸ್ಥಳಕ್ಕೆ ಹಾಗೂ ಕೆಲಸದ ಜಾಗದಿಂದ ಮನೆಗೆ ವಾಪಸ್ ಬರುವಾಗ ಮೃತಪಟ್ಟರೆ ₹ 5 ಲಕ್ಷ ಪರಿಹಾರ ನೀಡಲಾಗುತ್ತದೆ. ಸಹಜ ಸಾವಿಗೆ ₹ 50 ಸಾವಿರ ಪರಿಹಾರ ಹಾಗೂ ಅಂತ್ಯಕ್ರಿಯೆಗೆ ₹ 5 ಸಾವಿರ ಕೊಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.
ಅಂಕಿ ಅಂಶ
ಕಾರ್ಮಿಕರಿಗೆ ಧನ ಸಹಾಯ
(2013ರಿಂದ 2019 ಏಪ್ರಿಲ್‌ವರೆಗೆ)
ಯಾವುದಕ್ಕೆ; ಫಲಾನುಭವಿಗಳು; ವಿತರಿಸಿದ ಒಟ್ಟು ಮೊತ್ತ
ಶೈಕ್ಷಣಿಕ; 25,814;₹ 11.65 ಕೋಟಿ
ಮದುವೆ; 1,658;₹ 8.29 ಕೋಟಿ
ವೈದ್ಯಕೀಯ; 2;7,250
ಪ್ರಮುಖ ವೈದ್ಯಕೀಯ; 258;₹ 6.13 ಲಕ್ಷ
ಹೆರಿಗೆ; 292;₹ 43.80 ಲಕ್ಷ
ಒಟ್ಟು; 28,024; ₹ 20.99 ಕೋಟಿ
* ಆಧಾರ: ಕಾರ್ಮಿಕ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.