ADVERTISEMENT

ಚಡಚಣ: ಆಧ್ಯಾತ್ಮಿಕ ಬೀಡಿನಲ್ಲಿ ಅನೈರ್ಮಲ್ಯ ತಾಂಡವ

ಲೋಣಿ ಬಿ.ಕೆ. ಗ್ರಾಮ: ಕಿತ್ತು ಹೋದ ರಸ್ತೆಗಳು, ಚರಂಡಿಯಿಲ್ಲದೇ ಗಬ್ಬು ನಾರುವ ಬಡಾವಣೆಗಳು

ಅಲ್ಲಮಪ್ರಭು ಕರ್ಜಗಿ
Published 29 ಜುಲೈ 2024, 5:11 IST
Last Updated 29 ಜುಲೈ 2024, 5:11 IST
ಚಡಚಣ ಸಮೀಪದ ಲೋಣಿ ಬಿ.ಕೆ ಗ್ರಾಮದ ಮುಖ್ಯ ದ್ವಾರದಲ್ಲಿ ಹರಿಯುತ್ತಿರುವ ಚರಂಡಿ ನೀರು
ಚಡಚಣ ಸಮೀಪದ ಲೋಣಿ ಬಿ.ಕೆ ಗ್ರಾಮದ ಮುಖ್ಯ ದ್ವಾರದಲ್ಲಿ ಹರಿಯುತ್ತಿರುವ ಚರಂಡಿ ನೀರು   

ಚಡಚಣ: ಸಮೀಪದ ಲೋಣಿ ಬಿ.ಕೆ. ಗ್ರಾಮದಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿದೆ. ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡುತ್ತಿದೆ.

ಈ ಗ್ರಾಮ ಹಲವು ಆಧ್ಯಾತ್ಮಿಕ ಜೀವಿಗಳ ಬೀಡಾಗಿದೆ. ಧಾರವಾಡ ತಪೋವನದ ಕುಮಾರ ಸ್ವಾಮಿಗಳು ಬಾಲ್ಯವನ್ನು ಇಲ್ಲಿ ಕಳೆದು, ಯೋಗ, ತಪಸ್ಸು ಮಾಡಿದ್ದರು. ಅರವಿಂದ ಘೋಷ್‌ ಅವರ ಸಾವಿರಾರು ಸಂಖ್ಯೆಯ ಅನುಯಾಯಿಗಳು ಇಲ್ಲಿ ಇದ್ದಾರೆ. ಅರವಿಂದ ಆಶ್ರಮವೂ ಇದೆ. ನಿತ್ಯ ಯೋಗ ಚಟುವಟಿಕೆ ಇಲ್ಲಿ ನಡೆಯುತ್ತದೆ. ವಾಕ್‌ ಸಿದ್ಧಿ ಪಡೆದ ರುದ್ರ ಮಹಾರಾಜರು ನೆಲೆಸಿದ ಈ ಗ್ರಾಮದಲ್ಲಿ ಭವ್ಯ ರುದ್ರ ಮಹಾರಾಜರ ಮಠ ಇದೆ. ಪ್ರತಿ ವರ್ಷ ಶಿವರಾತ್ರಿಯಂದು ಸಿದ್ಧೇಶ್ವರ ದೇವರ ಜಾತ್ರೆಯೂ ಅದ್ಧೂರಿಯಿಂದ ನಡೆಯುತ್ತದೆ. ಈ ಭೂಮಿ ಅಧ್ಯಾತ್ಮದ ಬೀಡು ಎಂದೇ ಖ್ಯಾತ. 

ಶೈಕ್ಷಣಿಕವಾಗಿ, ಆರ್ಥಿಕವಾಗಿ ಪ್ರಗತಿ ಹೋಂದಿದ ಈ ಗ್ರಾಮದಲ್ಲಿ ಬಹು ಸಂಖ್ಯಾತರು ಸುಶಿಕ್ಷಿತರು. ಸರ್ಕಾರಿ ನೌಕರರು. ಪೂರ್ವ ಪ್ರಾಥಮಿಕ ಶಾಲೆಯಿಂದ ಹಿಡಿದು ಪದವಿ ಕಾಲೇಜುಗಳು ಇಲ್ಲಿವೆ. ಆದರೆ  6 ಸಾವಿರದಿಂದ 7 ಸಾವಿರ ಜನಸಂಖ್ಯೆ ಹೊಂದಿದ ಈ ಗ್ರಾಮದಲ್ಲಿ ನೈರ್ಮಲ್ಯ ಮಾತ್ರ ಮರೀಚಿಕೆಯಾಗಿದೆ. 

ADVERTISEMENT

ಮುಖ್ಯ ರಸ್ತೆಗಳಲ್ಲಿ ಚರಂಡಿ ನೀರು: ಗ್ರಾಮದ ಅಗಸಿ ಬಾಗಲಿನಿಂದ ಹಿಡಿದು ಬಹುತೇಕ ರಸ್ತೆಗಳಲ್ಲಿ ಚರಂಡಿ ನೀರು ಹರಿಯುತ್ತದೆ. ಚರಂಡಿ ನಿರ್ಮಾಣ ಮಾಡದೇ ಇರುವುದರಿಂದ ದುರ್ವಾಸನೆ ಬೀರುತ್ತಿದೆ. ರಸ್ತೆಗಳೆಲ್ಲ ತಗ್ಗು ಗುಂಡಿಗಳಿಂದ ಕೂಡಿವೆ. ಎಲ್ಲೆಂದರಲ್ಲಿ ಕೊಳಚೆ ನೀರು ಸಂಗ್ರಹವಾಗಿ ಸಾಂಕ್ರಾಮಿಕ ರೋಗಗಳ ಭೀತಿ ಮೂಡಿಸಿದೆ.

ಶೌಚಾಲಯಗಳಿಲ್ಲ: ಗ್ರಾಮದಲ್ಲಿ ಶೌಚಾಲಯಗಳಿಲ್ಲ. ಮಹಿಳೆಯರು ಮತ್ತು ಪುರುಷರಿಗೆ ಬಯಲು ಶೌಚಾಲಯಗಳೇ ಗತಿ. ರಸ್ತೆ ಪಕ್ಕಗಳಲ್ಲಿ ಶೌಚ ಮಾಡುವುದರಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡೇ ಹೋಗಬೇಕು.

ಶುದ್ಧ ಕುಡಿಯುವ ನೀರು ಇಲ್ಲ: ಗ್ರಾಮಕ್ಕೆ ಅರ್ಜನಾಳ ಕೆರೆಯಿಂದ ನೀರು ಪುರೈಕೆಯಾಗುತ್ತಿದ್ದು, ಅದು ಮಲಿನವಾಗಿದೆ. ಈ ನೀರು ಸಂಸ್ಕರಣೆಯಾಗದೇ ಬರುತ್ತಿರುವುದರಿಂದ ನಿತ್ಯ ಕರ್ಮಗಳಿಗೂ ಬಳಕೆ ಮಾಡಲು ಅಸಾಧ್ಯ ಎನಿಸುವಂತೆ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇದ್ದರೂ ಸ್ಥಗಿತಗೊಂಡು ವರ್ಷಗಳೇ ಗತಿಸಿವೆ.

ಹದಗೆಟ್ಟ ಸಂಪರ್ಕ ರಸ್ತೆಗಳು: ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಬಹುತೇಕ ರಸ್ತೆಗಳು ಹದಗೆಟ್ಟು ಹೋಗಿವೆ. ದಶಕಗಳಿಂದ ಡಾಂಬರ್‌ ಕಾಣದೇ ಇರುವ ರಸ್ತೆಗಳ ಮೂಲಕ ಗ್ರಾಮಸ್ಥರು ಓಡಾಡಬೇಕಿದೆ. ಚಡಚಣದಿಂದ ಸುಮಾರು 10 ಕಿ.ಮೀ ಅಂತರದಲ್ಲಿರುವ ಈ ಗ್ರಾಮದ ರಸ್ತೆಯಂತೂ ಸಂಪೂರ್ಣ ಕಿತ್ತು ಹೋಗಿದೆ. ಜನರು ಈ ರಸ್ತೆಗೆ ಪರ್ಯಾಯವಾಗಿ ಬರಡೋಲ ಮೂಲಕ ಚಡಚಣ ತಾಲ್ಲೂಕು ಕೇಂದ್ರಕ್ಕೆ ಸುಮಾರು 17 ಕಿ.ಮೀ ಸುತ್ತುವರಿದು ಬರಬೇಕಾಗಿದೆ.

ಲೋಣಿ ಬಿ.ಕೆ.  ಗ್ರಾಮದ ಬಡವಾಣೆಯ ರಸ್ತೆಯೊಂದರಲ್ಲಿ ಹರಿಯುತ್ತಿರುವ ಚರಂಡಿ ನೀರಿನಲ್ಲೇ ಬೈಕ್‌ ಸವಾರನ ಪ್ರಯಾಣ
ಆಧ್ಯಾತ್ಮಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದ ಲೋಣಿ ಬಿ.ಕೆ ಗ್ರಾಮ ಅಭಿವೃದ್ಧಿಯಾಗದಿರುವುದು ಖೇದಕರ ಸಂಗತಿ. ಅಧಿಕಾರಿಗಳು ಜನಪ್ರತಿನಿಧಿಗಳು ಅಭಿವೃದ್ಧಿಗೆ ಆದ್ಯತೆ ನೀಡಬೇಕು
–ಶ್ರೀನಿವಾಸ ಕುಲಕರ್ಣಿ ಗ್ರಾಮಸ್ಥ
ಮೂಲ ಸೌಕರ್ಯ ವಂಚಿತ ಲೋಣಿ ಬಿ.ಕೆ. ಗ್ರಾಮದಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿದೆ. ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಜಿಲ್ಲಾಡಳಿತ ಮುಂದಾಗಬೇಕು
–ಸಿದ್ಧರಾಯ ಘಂಟಿ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.