ಕುಮಟಾ: ಹೇರಳ ಪ್ರಮಾಣದಲ್ಲಿ ಸಮುದ್ರ ಮೀನು ಸಿಗುವಾಗ ಬಿಡುವಿಲ್ಲದೇ ವ್ಯಾಪಾರ ಮಾಡುತ್ತಿದ್ದ ಇಲ್ಲಿಯ ಮೀನು ಮಾರಾಟ ಮಾಡುವ ಮಹಿಳೆಯರು, ಸದ್ಯ ಮೀನು ಕೊರತೆಯಿಂದಾಗಿ ನಿರುದ್ಯೋಗ ಸಮಸ್ಯೆ ಅನುಭವಿಸುವಂತಾಗಿದೆ.
ಆಗಸ್ಟ್ ತಿಂಗಳ ನಂತರ ಸಮುದ್ರದಲ್ಲಿ ಬಂಗಡೆ, ಸಮದಾಳೆ, ತೋರಿ, ಬಿಳಿ ಸಿಗಡಿ, ಕೆಂಪು ಸಿಗಡಿ, ಇಶೋಣ, ಪಚಕಿ, ದೋಡಿ, ಮೋರಿ ಮುಂತಾದ ಜಾತಿಯ ರುಚಿಕರ ಮೀನು ಹೇರಳ ಪ್ರಮಾಣದಲ್ಲಿ ಸಿಗುತ್ತವೆ. ಸಮುದ್ರ ಮೀನು ಸಿಗುವಾಗ ಮೀನು ಮಾರಾಟ ಮಾಡುವ ಮಹಿಳೆಯರಿಗೆ ಬಿಡುವಿಲ್ಲದ ಉದ್ಯೋಗ, ಕೈ ತುಂಬಾ ಆದಾಯವಿತ್ತು. ಕಳೆದ ಒಂದು ತಿಂಗಳಿಂದ ಸಮುದ್ರ ಮೀನು ಕೊರತೆ ಉಂಟಾಗುತ್ತಿದ್ದಂತೆಯೇ ಮೀನು ಮಾರಾಟ ಮಾಡುತ್ತಿದ್ದ ಮಹಿಳೆಯರಲ್ಲಿ ಹೆಚ್ಚಿನವರು ಗ್ರಾಹಕರಿಗೆ ಮೀನು ಶುಚಿ ಮಾಡಿಕೊಡುವ ಕೆಲಸಕ್ಕೆ ಬದಲಾಯಿಸಿಕೊಂಡರು. ಮಾರುಕಟ್ಟೆಯಲ್ಲಿ ಮೀನು ಖರೀದಿ ಮಾಡುವ ಗ್ರಾಹಕರು ಅಲ್ಲೇ ಇರುವ ಮೀನು ಶುಚಿಗೊಳಿಸುವವ ಮಹಿಳೆಯರಿಗೆ ನೀಡಿದರೆ ಅವರು ಕ್ಷಣಾರ್ಧದಲ್ಲಿ ಮೀನು ಶುಚಿ ಮಾಡಿಕೊಡುತ್ತಾರೆ. ಇದರಿಂದ ಗ್ರಾಹಕರು ಮನೆಯಲ್ಲಿ ಮೀನು ತ್ಯಾಜ್ಯ ವಿಲೇವಾರಿ ಮಾಡುವ ತೊಂದರೆ ತಪ್ಪಿ ಸುತ್ತಲೂ ಶುಚಿತ್ವ ಕಾಪಾಡಲು ಸಹಾಯವಾಗುತ್ತಿದೆ. ಆದರೆ ಈಗ ಮೀನೇ ಇಲ್ಲದೆ ಮೀನು ಮಾರುವವರು ಹಾಗೂ ಶುಚಿ ಮಾಡಿಕೊಡುವವರು ನಿರುದ್ಯೋಗಕ್ಕೀಡಾಗಿದ್ದಾರೆ.
‘ಸುಮಾರು 25 ಮಹಿಳೆಯರು ಮೀನು ಶುಚಿಗೊಳಿಸುವ ಕಾರ್ಯ ಮಾಡುತ್ತಿದ್ದೇವೆ. ಆದರೆ ಗ್ರಾಹಕರಿಗೆ ಮೀನು ಶುಚಿ ಮಾಡಿಕೊಡಲು ಸಮುದ್ರದಿಂದ ಮಾರುಕಟ್ಟೆಗೆ ಮೀನೇ ಬರುತ್ತಿಲ್ಲ. ಮೀನು ತ್ಯಾಜ್ಯವನ್ನು ಗಜನಿಯಲ್ಲಿ ಕೃತಕವಾಗಿ ಕುರಡೆ ಮುಂತಾದ ಮೀನು ಸಾಕುವವರಿಗೆ ಆಹಾರಕ್ಕಾಗಿ ಮಾರಾಟ ಮಾಡುತ್ತಿದ್ದೇವೆ’ ಎಂದು ಕುಮಟಾ ಮೀನು ಮಾರುಕಟ್ಟೆಯಲ್ಲಿ ಮೀನು ಶುಚಿಗೊಳಿಸುವ ಮಹಿಳೆ ಲಕ್ಷ್ಮಿ ಜಾದವ ಮಾಹಿತಿ ನೀಡಿದರು.
‘ನಾಡ ದೋಣಿಗಳಿಗೂ ಸಿಗುತ್ತಿಲ್ಲ’
‘ಸಮುದ್ರದಲ್ಲಿ ನೀರಿನ ಉಷ್ಣತೆ ಬೀಸುವ ಗಾಳಿಯನ್ನು ಆಧರಿಸಿ ಮೀನುಗಳು ಸಿಗುತ್ತವೆ. ಹಿಂದೆಲ್ಲ ಪರ್ಶಿಯನ್ ಬೋಟ್‌ಗಳಿಗೆ ಮೀನು ಸಿಗದಿದ್ದರೆ ನಾಡ ದೋಣಿಗಳಿಗಾದರೂ ಸಿಗುತ್ತಿತ್ತು. ಆದರೆ ಈ ಸಲ ಯಾರಿಗೂ ಮೀನು ಸಿಗದಿರುವುದು ವಿಚಿತ್ರ ಸ್ಥಿತಿ ನಿರ್ಮಾಣಕ್ಕೆ ಕಾರಣವಾಗಿದೆ. ಇದರಿಂದ ಹೆಚ್ಚಿನ ಮೀನುಗಾರರು ಮೀನು ಮಾರಾಟ ಹಾಗೂ ಶುಚಿಗೊಳಿಸುವ ಮಹಿಳೆಯರು ಕಷ್ಟ ಅನುಭವಿಸುತ್ತಿದ್ದಾರೆ’ ಎಂದು ಕುಮಟಾ ಮೀನುಗಾರ ಸಹಕಾರ ಸಂಘದ ಅಧ್ಯಕ್ಷ ಜೈವಿಠ್ಠಲ ಕುಬಲ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.