ADVERTISEMENT

ಶಿರಸಿ|ಮಂಜುಗುಣಿ ಗ್ರಾ.ಪಂ: ರಸ್ತೆ-ನೀರು, ಕಾಲುಸಂಕಕ್ಕೆ ಕಾಯುತ್ತಿರುವ ಗ್ರಾಮಸ್ಥರು

ರಾಜೇಂದ್ರ ಹೆಗಡೆ
Published 28 ಫೆಬ್ರುವರಿ 2024, 4:53 IST
Last Updated 28 ಫೆಬ್ರುವರಿ 2024, 4:53 IST
ದುರಸ್ತಿ ಹಂತದಲ್ಲಿರುವ ಕೊಳವೆಬಾವಿ
ದುರಸ್ತಿ ಹಂತದಲ್ಲಿರುವ ಕೊಳವೆಬಾವಿ   

ಶಿರಸಿ: ಆರಂಭದಿಂದಲೂ ಸಮರ್ಪಕ ರಸ್ತೆ, ಬೀದಿದೀಪಗಳು, ಸಂಪರ್ಕ ಸೇತು ಸೇರಿ ಹಲವು ಸಮಸ್ಯೆ ಎದುರಿಸುತ್ತಿರುವ ಇಲ್ಲಿನ ಮಂಜುಗುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಜುಗುಣಿಯಲ್ಲಿ ಪ್ರಸ್ತುತ ಕೃತಕ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದೆ ಎಂಬ ದೂರು ವ್ಯಾಪಕವಾಗಿದೆ. 

ತಾಲ್ಲೂಕು ಕೇಂದ್ರದಿಂದ 30 ಕಿ.ಮೀ.ಗೂ ಹೆಚ್ಚಿನ ಅಂತರದಲ್ಲಿರುವ ಭೌಗೋಳಿಕವಾಗಿ ವಿಸ್ತಾರವಾಗಿರುವ ಮಂಜುಗುಣಿ ಗ್ರಾಮ ಪಂಚಾಯಿತಿ 2015ರಲ್ಲಿ ಅಸ್ತಿತ್ವಕ್ಕೆ ಬಂದಿದೆ. ‘ಅನುದಾನ ಕೊರತೆಯ ನಡುವೆಯೂ ಹಂತಹಂತವಾಗಿ ಗ್ರಾಮ ಪಂಚಾಯಿತಿ ಕಟ್ಟಡವೇನೋ ನಿರ್ಮಾಣವಾಗಿದೆ. ಆದರೆ ಸಾಲದ ಅನುದಾನದ ಪರಿಣಾಮ ಪಂಚಾಯಿತಿ ವ್ಯಾಪ್ತಿಯ ಹಲವೆಡೆ ಮೂಲ ಸೌಕರ್ಯಗಳ ಕೊರತೆ ಕಾಣುತ್ತಿದೆ. ಜತೆಗೆ ವಾರದಿಂದೀಚೆಗೆ ಪಂಚಾಯಿತಿಯಿಂದ ಪೂರೈಕೆ ಮಾಡುತ್ತಿದ್ದ ಕುಡಿಯುವ ನೀರು ಬರುತ್ತಿಲ್ಲ. ಈ ಬಗ್ಗೆ ಗಮನ ಸೆಳೆದರೂ ಪ್ರಯೋಜನ ಆಗುತ್ತಿಲ್ಲ’ ಎಂಬುದು ಗ್ರಾಮಸ್ಥರ ದೂರು.

‘ಪ್ರಸ್ತುತ ಮಳೆಯ ಅಭಾವದಿಂದ ಅವಧಿ ಪೂರ್ವವೇ ಎಲ್ಲಾ ಕಡೆ ನೀರಿನ ಅಭಾವ ಎದುರಾಗಿದೆ. ಇಂಥ ಸಮಯದಲ್ಲಿ ಮಂಜುಗುಣಿ ಗ್ರಾಮಕ್ಕೆ ನೀರು ಒದಗಿಸುವ ಕೊಳವೆ ಬಾವಿಯ ಪಂಪ್ ದುಸ್ಥಿತಿ ತಲುಪಿದೆ. ಒಂದು ವಾರದಿಂದ ಗ್ರಾಮದ ನಲ್ಲಿಗಳಲ್ಲಿ ನೀರು ಬರುತ್ತಿಲ್ಲ. ಕುಡಿಯುವ ನೀರಿನ ಯೋಜನೆಯಡಿ ಪ್ರತಿ ಮನೆಗೂ ನಳ ಸಂಪರ್ಕ ನೀಡಲಾಗಿದೆ. ಕರ ಕೂಡ ಪಡೆಯಲಾಗುತ್ತದೆ. ಬೇಸಿಗೆ ಸಂದರ್ಭದಲ್ಲಿ ನೀರು ಪೂರೈಕೆ ವ್ಯತ್ಯಯವಾಗದಂತೆ ಕ್ರಮವಹಿಸುವ ಅಗತ್ಯವಿದೆ’ ಎನ್ನುತ್ತಾರೆ ಸ್ಥಳೀಯರಾದ ವೆಂಕಟೇಶ ನಾಯ್ಕ.

ADVERTISEMENT

‘ಈ ಭಾಗದಲ್ಲಿ ಶೇಕಡಾ 60ಕ್ಕಿಂತ ಹೆಚ್ಚು ಬಡ ಕೂಲಿಕಾರ್ಮಿಕರೇ ಇದ್ದಾರೆ. ಸಣ್ಣ ಹಿಡುವಳಿದಾರರ ಸಂಖ್ಯೆಯೇ ಹೆಚ್ಚಿದೆ. ಚದುರಿದಂತೆ ಮನೆಗಳಿರುವ ಗ್ರಾಮದಲ್ಲಿ ಸಮರ್ಪಕ ರಸ್ತೆ ಇಲ್ಲ. ನೆಕ್ಕರಿಕೆ, ತೆಪ್ಪಾರ, ಕಲ್ಲಳ್ಳಿ, ಕಳುಗಾರ ಸೇರಿದಂತೆ ಹಲವು ಗ್ರಾಮಗಳಿಗೆ ಮೊಬೈಲ್ ನೆಟ್‍ವರ್ಕ್ ಸರಿಯಾಗಿಲ್ಲ. ತೆಪ್ಪಾರ ಮತ್ತು ಕಲ್ಲಳ್ಳಿ ಭಾಗದ ಜನರು ಇಂದಿಗೂ ಮುಖ್ಯರಸ್ತೆಗೆ ಬರಲು ಕನಿಷ್ಠ 6ರಿಂದ 10 ಕಿಮೀ ಬರುವ ಅನಿವಾರ್ತೆ ಅನುಭವಿಸುತ್ತಿದ್ದಾರೆ. ಕೆಲವೆಡೆ ಕಾಲುಸಂಕದ ಅಗತ್ಯತೆಯೂ ಇದೆ’ ಎನ್ನುತ್ತಾರೆ ಗ್ರಾಮಸ್ಥ ರಾಮಾ ಮರಾಠಿ. 

‘ರಸ್ತೆಗಳನ್ನು ನಿರ್ಮಿಸಲು ಪಂಚಾಯಿತಿ ಅನುದಾನ ಸಾಲುತ್ತಿಲ್ಲ. ದೂರದ ಊರುಗಳಿಗೆ ರಸ್ತೆ ಮಾಡಲು ಅನುದಾನವೂ ಹೆಚ್ಚು ಬೇಕಾಗುತ್ತದೆ. ಶಾಸಕರ ನಿಧಿ ಸೇರಿ ಇತರ ಅನುದಾನ ಅವಲಂಬನೆ ಅನಿವಾರ್ಯ’ ಎನ್ನುತ್ತಾರೆ ಅವರು.

ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಕ್ರಮವಹಿಸಬೇಕು. ಇಲ್ಲವಾದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಭೀಮಣ್ಣ ನಾಯ್ಕ ಶಾಸಕ
ಕೊಳವೆಬಾವಿಯ ಪಂಪ್ ಜಾರಿ ಬಾವಿಯ ಕೆಳಗೆ ಹೋಗಿದೆ. ಸಭೆ ನಡೆಸಿ ಅನುದಾನ ತೆಗೆದಿರಿಸಿದ್ದು ಶೀಘ್ರ ದುರಸ್ತಿ ಮಾಡಲಾಗುವುದು. ಪ್ರಸ್ತುತ ಅಗತ್ಯ ಇರುವೆಡೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. 
- ಸೌಮ್ಯ ಹೆಗಡೆ ಪಿಡಿಒ ಮಂಜುಗುಣಿ ಗ್ರಾಮ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.