ಕಾರವಾರ/ಅಂಕೋಲಾ: ಜಿಲ್ಲೆಯಲ್ಲಿ ಬುಧವಾರ ಬೆಳಿಗ್ಗೆ ಕಡಿಮೆಯಾಗಿದ್ದ ಮಳೆ ಮಧ್ಯಾಹ್ನದ ಬಳಿಕ ಅಬ್ಬರಿಸಿತು. ಇದರಿಂದ ಮತ್ತೆ ಹಲವೆಡೆ ಭೂಕುಸಿತ, ಜಲಾವೃತ ಸಮಸ್ಯೆ ಎದುರಾಯಿತು. ಗುಡ್ಡ ಕುಸಿತದ ಅವಘಡದಿಂದ ಬೆಚ್ಚಿಬಿದ್ದಿದ್ದ ಶಿರೂರು ಮತ್ತು ಗಂಗಾವಳಿ ನದಿಯ ಅಬ್ಬರಕ್ಕೆ ಹಾನಿಗೀಡಾದ ಉಳುವರೆ ಗ್ರಾಮದಲ್ಲಿ ಜನರ ಆಕ್ರಂದನ ಕಂಡುಬಂತು.
ಶಿರೂರಿನಲ್ಲಿ ಗುಡ್ಡ ಕುಸಿದ ಸ್ಥಳದ ಒಂದು ಕಿ.ಮೀ ದೂರದಿಂದಲೇ ಪೊಲೀಸ್ ಕಾವಲು ಹಾಕಲಾಗಿತ್ತು. ಸುರಕ್ಷತೆ ದೃಷ್ಟಿಯಿಂದ ಸಾರ್ವಜನಿಕರಿಗೆ ಘಟನೆ ನಡೆದ ಸ್ಥಳದ ಸಮೀಪಕ್ಕೆ ಪ್ರವೇಶ ನಿರ್ಬಂಧಿಸಲಾಯಿತು. ಹತ್ತಾರು ಟಿಪ್ಪರ್ ಮೂಲಕ ಮಣ್ಣಿನ ರಾಶಿಯನ್ನು ಬಳಸೆ ಭಾಗಕ್ಕೆ ಕೊಂಡೊಯ್ಯಲಾಯಿತು. ಕೋಡ್ಸಣಿ ಭಾಗದಿಂದಲೂ ಹಲವು ಜೆಸಿಬಿ, ಟಿಪ್ಪರ್ ಗಳು ಕಾರ್ಯಾಚರಣೆ ನಡೆಸಿದ್ದವು.
ಘಟನೆಯಲ್ಲಿ ಮೃತಪಟ್ಟವರ ಪೈಕಿ ಶಿರೂರಿನ ಒಂದೇ ಕುಟುಂಬದ ಮೂವರ ಅಂತ್ಯಸಂಸ್ಕಾರವನ್ನು ಗ್ರಾಮದಲ್ಲಿ ನಡೆಸಲಾಯಿತು. ಗ್ರಾಮಸ್ಥರು ಮೃತರ ಸಂಬಂಧಿಕರು ಸೇರಿದ್ದರು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಉಳಿದವರ ಮೃತದೇಹಕ್ಕೆ ಎನ್.ಡಿ.ಆರ್.ಎಫ್ ತಂಡ ನಿರಂತರವಾಗಿ ಶೋಧ ಕಾರ್ಯ ನಡೆಸಿತ್ತಾದರೂ ತಡರಾತ್ರಿವರೆಗೂ ಮೃತದೇಹಗಳು ಪತ್ತೆಯಾಗಲಿಲ್ಲ.
ಗುಡ್ಡ ಕುಸಿದು ನದಿಯಿಂದ ಸಿಡಿದ ನೀರು ಉಳುವರೆ ಗ್ರಾಮದ ಮೂರು ಮನೆಗಳನ್ನು ಆಪೋಷನ ಪಡೆದು, 12ಕ್ಕೂ ಹೆಚ್ಚು ಮನೆಗಳಿಗೆ ಹಾನಿಯುಂಟು ಮಾಡಿದ್ದ ಘಟನೆ ಅಲ್ಲಿನ ಜನರನ್ನು ಆತಂಕಕ್ಕೀಡು ಮಾಡಿತು. ಮನೆ ಕಳೆದುಕೊಂಡವರ ಆಕ್ರಂದನ ಕಂಡು ನೆರೆದಿದ್ದವರು ಭಾವುಕರಾದರು. ನದಿಯ ನಿರಿನ ರಭಸಕ್ಕೆ ಗಂಗಾವಳಿ ನದಿಯ ಗುಂಟ ಕಟ್ಟಲಾಗಿದ್ದ ಪಿಂಚಿಂಗ್‍ನ ಕಲ್ಲುಗಳು ಗ್ರಾಮದ ಕೃಷಿ ಜಮೀನು, ಮನೆಯ ಅಂಗಳಕ್ಕೆ ಸಿಡಿದು ಬಿದ್ದಿದ್ದವು.
ಮಳೆಯಿಂದ ಅಘನಾಶಿನಿ, ಗುಂಡಬಾಳ ನದಿಗಳನ್ನು ಪ್ರವಾಹ ಸ್ಥಿತಿ ಮುಂದುವರೆದಿದ್ದರಿಂದ 1,005 ಮಂದಿಗೆ ಕಾಳಜಿ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಯಿತು ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ತಿಳಿಸಿದರು.
ಮೃತರ ಕುಟುಂಬಕ್ಕೆ ಮನೆ ಕಳೆದುಕೊಂಡವರಿಗೆ ಪರಿಹಾರ
ಶಿರೂರು ದುರ್ಘಟನೆಯಲ್ಲಿ ಮೃತಪಟ್ಟ ಲಕ್ಷ್ಮಣ ನಾಯ್ಕ ಅವರ ಕುಟುಂಬಕ್ಕೆ ₹5 ಲಕ್ಷ ಮೊತ್ತದ ಪರಿಹಾರದ ಚೆಕ್‍ನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಮೃತನ ಸಹೋದರ ಮಂಜುನಾಥ ನಾಯ್ಕ ಅವರಿಗೆ ಹಸ್ತಾಂತರಿಸಿದರು. ಕಿನ್ನರದಲ್ಲಿ ಮನೆ ಕುಸಿದು ಮೃತಪಟ್ಟ ತಿಕರ್ಸ್ ಗುರವ ಅವರ ಕುಟುಂಬಕ್ಕೂ ಪರಿಹಾರ ನೀಡಿದರು. ಉಳುವರೆ ಗ್ರಾಮದಲ್ಲಿ ಮನೆಗೆ ಹಾನಿಯಾದ ಕುಟುಂಬಗಳಿಗೆ ತಲಾ ₹1.20 ಲಕ್ಷ ಮೊತ್ತದ ಚೆಕ್ ನೀಡಿದರು. ಶಾಸಕ ಸತೀಶ ಸೈಲ್ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಇತರರು ಇದ್ದರು.
ಐ.ಆರ್.ಬಿ ವಿರುದ್ಧ ಪ್ರಕರಣ
ಶಿರೂರು ಗುಡ್ಡ ದುರಂತ ಘಟನೆಗೆ ಸಂಬಂಧಿಸಿದಂತೆ ಶಿರೂರು ಗ್ರಾಮಸ್ಥ ಪುರುಷೋತ್ತಮ ನಾಯ್ಕ ಅವರು ನೀಡಿದ ದೂರು ಆಧರಿಸಿ ಐ.ಆರ್.ಇ ಕಂಪನಿ ಮುಖ್ಯಸ್ಥರು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಲುಗಟ್ಟಿ ನಿಂತ ಲಾರಿಗಳು
ಶಿರೂರಿನಲ್ಲಿ ಗುಡ್ಡ ಕುಸಿದು ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಸಂಚಾರ ಸ್ಥಗಿತಗೊಂಡಿದ್ದರಿಂದ ಬಳಸೆಯಿಂದ ಅಂಕೋಲಾ ಪಟ್ಟಣದವರೆಗೆ ಸುಮಾರು 5 ಕಿ.ಮೀ ದೂರದವರೆಗೂ ಭಾರಿ ವಾಹನಗಳು ಸಾಲುಗಟ್ಟಿ ನಿಂತಿವೆ. ಹುಬ್ಬಳ್ಳಿಯಿಂದ ಅಂಕೋಲಾ ಮಾರ್ಗವಾಗಿ ಮಂಗಳೂರಿಗೆ ಸಾಗಬೇಕಿರುವ ವಾಹನಗಳು ಗೋವಾದಿಂದ ಮಂಗಳೂರಿನತ್ತ ಸಾಗುತ್ತಿದ್ದ ಟ್ಯಾಂಕರ್ ಇನ್ನಿತರ ವಾಹನಗಳು ಚಲಿಸಲಾಗದೆ ನಿಂತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.