ಕಾರವಾರ: ‘ಜೋರಾಗಿ ಮಳೆ ಶುರುವಾಯಿತು. ದೊಡ್ಡ ಶಬ್ದ ಕೇಳಿಸಿತು. ನೋಡನೋಡುತ್ತ ಗಂಗಾವಳಿ ನದಿಗೆ ದೊಡ್ಡ ಪ್ರಮಾಣದಲ್ಲಿ ಮಣ್ಣಿನ ರಾಶಿ ಬೀಳತೊಡಗಿತು. ಸಮುದ್ರದ ಅಲೆಯಂತೆ ಚಿಮ್ಮಿದ ನದಿ ನೀರನ್ನು ಕಂಡು ಕಣ್ಮುಚ್ಚಿದೆ. ಕಣ್ತೆರೆದಾಗ ನದಿಯಂಚಿನ ಊರು ಸ್ಮಶಾನದಂತಾಗಿತ್ತು’.
ಹೀಗೆ ನಡುಗುತ್ತ ಘಟನೆ ವಿವರಿಸಿದವರು ಉಳುವರೆ ಗ್ರಾಮದ ಮಂಜು ಗೌಡ. ಶಿರೂರು ಗುಡ್ಡ ಕುಸಿತ ದುರಂತದಿಂದ ಗಂಗಾವಳಿ ನದಿ ಇನ್ನೊಂದು ಬದಿಯಲ್ಲಿರುವ ಉಳುವರೆ ಗ್ರಾಮದಲ್ಲಿ ಉಂಟಾದ ಹಾನಿಯ ಭೀಕರತೆ ಹೇಳುವಾಗ, ಅವರ ಮೊಗದಲ್ಲಿ ನೋವು, ಭೀತಿ ಮತ್ತು ಆತಂಕವಿತ್ತು.
‘ನದಿಯಂಚಿನಲ್ಲಿ 15ಕ್ಕೂ ಹೆಚ್ಚು ಮನೆಗಳಿವೆ. ಅವುಗಳಲ್ಲಿ ಮೂರು ಮನೆ ಸಂಪೂರ್ಣ ನೆಲಸಮವಾಗಿವೆ. 10ಕ್ಕೂ ಹೆಚ್ಚು ಮನೆಗಳ ಚಾವಣಿ, ಗೋಡೆಗೆ ಹಾನಿಯಾಗಿದೆ. ಮೀನುಗಾರರು ನಿಲ್ಲಿಸಿಟ್ಟ ದೋಣಿಗಳು, ಅವರ ಮನೆಗಳಿಗೆ ಬಂಡೆಕಲ್ಲು, ಮಣ್ಣು ಅಪ್ಪಳಿಸಿ ಸಾಕಷ್ಟು ನಷ್ಟವಾಗಿದೆ’ ಎಂದು ಅವರು ತಿಳಿಸಿದರು.
‘ಅಮ್ಮ ಮಾಡಿಕೊಟ್ಟ ತಿಂಡಿ ತಿಂದು, ದಿನಸಿ ಸಾಮಾನು ತರಲು ಸಮೀಪದ ಅಂಗಡಿಗೆ ತೆರಳಿದ್ದೆ. ಮರಳಿ ಬರುವಷ್ಟರಲ್ಲಿ ಮನೆ ಇರಲಿಲ್ಲ. ಮನೆಯಲ್ಲಿನ ಒಂದು ವಸ್ತುವೂ ಇರಲಿಲ್ಲ. ಅಮ್ಮಾನೂ ಕಾಣಲಿಲ್ಲ’ ಎಂದು ಮಂಜುನಾಥ ಗೌಡ ನೋವು ತೋಡಿಕೊಂಡರು. ಅವರ ಮನೆ ಕುಸಿದು ಬಿದ್ದಿದ್ದು, ಅವರ ತಾಯಿ ಸಣ್ಣಿ ಗೌಡ ಇನ್ನೂ ಪತ್ತೆಯಾಗಿಲ್ಲ.
ಉಳುವರೆ ಗ್ರಾಮದ ನದಿಯಂಚಿನಲ್ಲಿ ಬಿದ್ದ ಕಲ್ಲಿನ ರಾಶಿಗಳು, ಕೆಸರು ಮಣ್ಣು, ಮುರಿದ ಮನೆಯ ಗೋಡೆಗಳು, ಅಲ್ಲಲ್ಲಿ ಚದುರಿ ಬಿದ್ದ ಮನೆಯ ಬಾಗಿಲುಗಳು, ಚೆಲ್ಲಾಪಿಲ್ಲಿಯಾಗಿ ಬಿದ್ದ ಪಾತ್ರೆಗಳು ಘಟನೆಯ ಭೀಕರತೆಯನ್ನು ಸಾರಿ ಹೇಳುವಂತಿತ್ತು. ಅವಶೇಷಗಳಡಿ ಜನರು ಪಾತ್ರೆ, ಸರಂಜಾಮುಗಳನ್ನು ಹುಡುಕುತ್ತಿದ್ದ ದೃಶ್ಯಗಳು ಮನಕಲಕುತ್ತಿದ್ದವು.
ಶಿರೂರಿನಲ್ಲಿ ಗುಡ್ಡ ಕುಸಿದು ವ್ಯಾಪಕ ಪ್ರಮಾಣದಲ್ಲಿ ಮಣ್ಣಿನ ರಾಶಿ, ಬಂಡೆಕಲ್ಲು ನದಿಗೆ ಉರುಳಿದ್ದರಿಂದ ಒಮ್ಮಲೇ ನದಿಯ ನೀರು ಚಿಮ್ಮಿದ್ದರಿಂದ ನದಿಯಂಚಿನ ಮನೆಗಳು ಕೊಚ್ಚಿಕೊಂಡು ಹೋಗಿದ್ದರಿಂದ ಹಾನಿಯುಂಟಾಗಿದೆ.
ಗ್ರಾಮಕ್ಕೆ ಬುಧವಾರ ಸಂಜೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮನೆ ಕಳೆದುಕೊಂಡವರಿಗೆ ಪರ್ಯಾಯ ಜಾಗ ಒದಗಿಸುವ ಜತೆಗೆ ಮನೆ ನಿರ್ಮಾಣಕ್ಕೆ ₹5 ಲಕ್ಷ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.
ಕೊನೆಯಾದ ಕುಟುಂಬ:
ಶಿರೂರಿನಲ್ಲಿ ಹೆದ್ದಾರಿ ಅಂಚಿನಲ್ಲಿ ಮೂರು ದಶಕದಿಂದ ಚಹಾ ಅಂಗಡಿ ನಡೆಸುತ್ತಿದ್ದ ಲಕ್ಷ್ಮಣ ನಾಯ್ಕ ಮತ್ತು ಅವರ ಪತ್ನಿ, ಮಕ್ಕಳು ಘಟನೆಯಲ್ಲಿ ಮೃತಪಟ್ಟಿದ್ದು, ಈ ಕುಟುಂಬದ ಅಸ್ತಿತ್ವವೇ ಇಲ್ಲದಂತಾಗಿದೆ. ಮೃತರಾದವರಲ್ಲಿ ಲಕ್ಷ್ಮಣ, ಶಾಂತಿ ಮತ್ತು ರೋಶನ್ ಅವರ ಮೃತದೇಹವನ್ನು ಅವರ ಸ್ವಗ್ರಾಮವಾದ ಶಿರೂರಿನಲ್ಲಿ ಲಕ್ಷ್ಮಣ ಅವರ ಸಹೋದರರ ಕುಟುಂಬದವರು ಸಾಮೂಹಿಕವಾಗಿ ಅಂತ್ಯಕ್ರಿಯೆ ನೆರವೇರಿಸಿದರು.
ಮಣ್ಣು ತೆರವು ಕಾರ್ಯಕ್ಕೆ ಅಡ್ಡಿ
ಗುಡ್ಡ ಕುಸಿದ ಸ್ಥಳದಲ್ಲಿ ಬಿದ್ದಿದ್ದ ಮಣ್ಣಿನ ತೆರವು ಕಾರ್ಯಾಚರಣೆ ನಡೆಯಿತಾದರೂ ನಿರಂತರವಾಗಿ ಮಲೆ ಸುರಿಯುತ್ತಿದ್ದ ಪರಿಣಾಮ ಗುಡ್ಡದಿಂದ ಮತ್ತೆ ಮಣ್ಣಿನ ರಾಶಿ ಬೀಳಲು ಆರಮಭಿಸಿದ್ದರಿಂದ ಬುಧವಾರ ಸಂಜೆ ತೆರವು ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಗಂಗಾವಳಿ ನದಿಯಲ್ಲಿ ತೇಲಿ ಹೋಗಿದ್ದ ಗ್ಯಾಸ್ ಟ್ಯಾಂಕರ್ ಅನ್ನು ಎಚ್.ಪಿ.ಸಿ.ಎಲ್‍ನ ವಿಶೇಷ ತಂಡವು ಸುರಕ್ಷಿತವಾಗಿ ಸಗಡಗೇರಿ ಸಮೀಪ ದಡದ ಸಮೀಪ ಎಳೆದು ತಂದಿದ್ದು ಗುರುವಾರ ರಕ್ಷಣಾ ಕಾರ್ಯಾಚರಣೆ ನಡೆಸುವುದಾಗಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.